ಆರ್ಥಿಕತೆ ಕುಸಿತದಿಂದ ದುಡಿಯುವ ವರ್ಗ ತತ್ತರ : ತಪನ್ ಸೇನ್ ಆತಂಕ

ತುಮಕೂರು :

      ದೇಶದಲ್ಲಿ ಆರ್ಥಿಕ ಕುಸಿತದಿಂದ ಉದ್ದಿಮೆಗಳು, ಕೈಗಾರಿಕೆಗಳು ಬಾಗಿಲು ಮುಚ್ಚಿದ್ದು ದುಡಿಯುವ ವರ್ಗ ತತ್ತರಿಸಿ ಹೋಗಿದೆ. ಸ್ಕೀಂ ನೌಕರರು, ಸಂಘಟಿತ ಮತ್ತು ಅಸಂಘಟಿತ ನೌಕರರು ಇನ್ನಿಲ್ಲದ ಸಂಕಷ್ಟ ಅನುಭವಿಸುವಂತಾಗಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯರು ಆದ ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಆತಂಕ ವ್ಯಕ್ತಪಡಿಸಿದರು.

      ತುಮಕೂರಿನ ಗಾಜಿನಮನೆಯಲ್ಲಿ ಅಕ್ಟೋಬರ್ 8ರಂದು ಸಮಗ್ರ, ಸಮೃದ್ಧ ಮತ್ತು ಸೌಹಾರ್ದಕ್ಕಾಗಿ ನಡೆಯುತ್ತಿರುವ ಸಿಐಟಿಯು 14ನೇ ರಾಜ್ಯ ಮಟ್ಟದ ಸಮ್ಮೇಳನದ ಬಹಿರಂಗ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಸರ್ಕಾರ ದೇಶವನ್ನು ಮಾರಾಟ ಮಾಡಲು ಹೊರಟಿದೆ. ಬಂಡವಾಳಶಾಹಿಗಳು ಕಿರುಪಾಲುದಾರರಾಗುತ್ತಿದ್ದಾರೆ. ಕೈಗಾರಿಕೆಗಳು ಮುಚ್ಚುತ್ತಿದ್ದು ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ ಎಂದು ಹೇಳಿದರು.

      ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾg ಕಾರ್ಮಿಕ ಕಾನೂನುಗಳನ್ನು ತಿದ್ದುಪಡಿ ಮಾಡಲು ಹೊರಟಿದೆ. ಕಾನೂನುಗಳನ್ನು ಸಂಹಿತೆಗಳನ್ನಾಗಿ ಮಾಡುತ್ತ ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಬಂಡವಾಳ ಶಕ್ತಿಗಳು ಮತ್ತು ರಾಜಕೀಯ ಪಕ್ಷಗಳು ಒಂದಾಗುತ್ತಿವೆ. ಸರ್ಕಾರದ ಲೋಪದೋಷಗಳನ್ನು ಪ್ರಶ್ನಿಸುವವರನ್ನು ಭಯೋತ್ಪಾದಕ ರಂತೆ ಬಿಂಬಿಸಲಾಗುತ್ತಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ಯುನಿಯನ್ ಟೆರಿಟೋರಿಗಳನ್ನಾಗಿ ಮಾಡುತ್ತಿದೆ. ಇವರ ವಿರುದ್ಧ ಸಮರದೀರ ಹೋರಾಟ ನಡೆಸಲು ಎಲ್ಲಾ ವರ್ಗದ ಕಾರ್ಮಿಕರು ಒಂದಾಗಬೇಕೆಂದರು.

      ಆರ್.ಎಸ್‍ಎಸ್ ಮತ್ತು ಬಿಜೆಪಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ. ದೇೀಶಭಕ್ತಿ ಹೆಸರಿನಲ್ಲಿ ದೇಶದ ಸಂಪತ್ತು ಲೂಟಿ ಮಾಡಲು ಬಂಡವಾಳಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ದೇಶಭಕ್ತರು ಮಾತ್ರ ಮೌನವಹಿಸಿದ್ದಾರೆ. ದುಡಿಯುವ ಜನರ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಳ್ಳುತ್ತಿರುವ ಶಕ್ತಿಗಳ ವಿರುದ್ಧ ಐಕ್ಯ ಹೋರಾ ಮಾಡಬೇಕು. ಇಂತಹ ಹೋರಾಟಗಳಿಂದಲೇ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಸಾಧ್ಯ ಎಂದರು.

      ಸಿಐಟಿಯು ರಾಷ್ಟ್ರೀಯ ಅಧ್ಯಕ್ಷೆ ಡಾ.ಕೆ.ಹೇಮಲತಾ ಮಾತನಾಡಿ, ಮಹಿಳೆಯರಿಗೆ ಸಮಾನ ವೇತನ ಸಿಗುತ್ತಿಲ್ಲ. ಹಲವು ಹೋರಾಟ ಮಾಡಿದರೂ ಮಹಿಳೆಯರು ಇನ್ನೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸ್ಕೀಂ ನೌಕರರಿಗೆ ಕೆಲವೊಂದು ಸೌಲಭ್ಯ ಸಿಗುತ್ತದೆಯಾದರೂ ಬಿಸಿಯೂಟ ಮಹಿಳಾ ಕಾರ್ಮಿಕರಿಗೆ ತಿಂಗಳ ರಜೆ, ಹೆರಿಗೆ ರಜೆ ಸೇರಿದಂತೆ ಯಾವುದೇ ರಜೆಗಳು ಸಿಗುತ್ತಿಲ್ಲ. ಇದರ ವಿರುದ್ಧ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

      ಬಿಜೆಪಿ ಪ್ರಭುತ್ವ ಮಹಿಳಾ ಹಕ್ಕುಗಳನ್ನು ದಮನ ಮಾಡುವ ಕಾರ್ಯದಲ್ಲಿ ನಿರತವಾಗಿದೆ. ಬಿಸಿಯೂಟ ತಯಾರಿಕೆಗೆ ಬೃಹತ್ ಎನ್.ಜಿ.ಒ ಗಳಿಗೆ ವಹಿಸುವ ಕೆಲಸ ನಡೆಯುತ್ತಿದೆ. ಬಿಜೆಪಿ ನಡೆಸುತ್ತಿರುವ ಜನವಿರೋಧಿ, ಮಹಿಳಾ ವಿರೋಧಿ ಮತ್ತು ರೈತ ವಿರೋಧಿ ನೀತಿಗಳನ್ನು ಪ್ರತಿಯೊಬ್ಬ ಪ್ರಜೆಗೂ ತಿಳಿಸಬೇಕು. ಮನವರಿಕೆ ಮಾಡಿ ಕೇಂದ್ರದ ದಮನಕಾರಿ ನೀತಿಗಳು ವಿರುದ್ದ ಸಂಘಟಿತ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

      ಸಿಐಟಿಯು ರಾಜ್ಯ ಪ್ರಧಾನಕಾರ್ಯದರ್ಶಿ ಮೀನಾಕ್ಷಿ ಸುಂದರಂ ಮಾತನಾಡಿ, ಕೇಂದ್ರದ ನೀತಿಗಳಿಂದ ರೈತರು ಬೀದಿಗೆ ಬಿದ್ದಿದ್ದಾರೆ. ಗ್ರಾಮೀಣ ಜನತೆ ನಗರಗಳತ್ತ ವಲಸೆ ಬರುತ್ತಿದೆ. ಎಲ್ಲರಿಗೂ ಉದ್ಯೋಗದ ಹಸಿವು ಇದೆ. ದುಡಿಯುವರಿಗೆ ಉದ್ಯೋಗ ಇಲ್ಲವಾಗಿವೆ. ಉಳ್ಳವರಿಗೆ ಶಿಕ್ಷಣ ಮತ್ತು ಆರೋಗ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ. ಬಡವರ್ಗ ಸಂಕಷ್ಟಗಳ ಸರಮಾಲೆ ಎದುರಿಸುತ್ತಿದೆ. ಕೇಂದ್ರದ ಜನವಿರೋಧಿ ಆರ್ಥಿಕ ನೀತಿಗಳನ್ನು ಹಿಮ್ಮೆಟ್ಟಿಸಲು ಮತ್ತು ಜನಪರ ನೀತಿಗಳನ್ನು ಜಾರಿಗೆ ತರಲು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದರು.

      ದೇಶದಲ್ಲಿ ಜನರ ಐಕ್ಯತೆ ಮುರಿಯುವ ಕೃತ್ಯಗಳು ನಡೆಯುತ್ತಿವೆ. ಇದಕ್ಕೆ ಕಾರ್ಮಿಕರು ಅವಕಾಶ ನೀಡಬಾರದು ಎಂದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯಾವುದೇ ಕೆಲಸ ಮಾಡುತ್ತಿಲ್ಲ. ನೆರೆ ಬಂದು ಬದುಕು ಕೊಚ್ಚಿ ಹೋಗಿದ್ದರೂ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ನೋವಿನಿಂದ ಬಳಲುತ್ತಿರುವ ಜನರ ನೆರವಿಗೆ ಸರ್ಕಾರ ಬರುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

      ಜನಪರ ಚಿಂತಕ ಕೆ.ದೊರೈರಾಜ್ ಮಾತನಾಡಿ, ದೇಶದ ಆರ್ಥಿಕ ಸ್ಥಿತಿ ಜನರ ಬದುಕನ್ನು ಬೀದಿಪಾಲು ಮಾಡಿದೆ. ಆರ್ಥಿಕ ಸಂಕಷ್ಟಗಳ ನಿವಾರಣೆಗೆ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಶೋಷಣೆ ಹೆಚ್ಚುತ್ತಿದೆ. ಸಾಮಾಜಿಕ ಭದ್ರತೆಗೆ ಧಕ್ಕೆ ಬಂದಿದೆ. ಸರ್ಕಾರವೇ ಜನರ ಹಕ್ಕುಗಳನ್ನು ದಮನ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ದಲಿತರು, ಮಹಿಳೆಯರು, ಕಾರ್ಮಿಕರು ಮತ್ತು ಅಲ್ಪಸಂಖ್ಯಾತರು ಭಯಭೀತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಐಕ್ಯ ಹೋರಾಟಕ್ಕೆ ಸಿದ್ದರಾಗಬೇಕು. ಜಾತಿ ಧರ್ಮ ಮೀರಿದ ಶ್ರಮಿಕ ವರ್ಗದ ಐಕ್ಯತೆ ಮತ್ತು ಮಾನವೀಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ದುಡಿಯುಬೇಕು ಎಂದರು.

      ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಎಲ್ಲಾ ಕಾರ್ಮಿಕರು ಸಮ್ಮೇಳನದ ಯಶಸ್ವಿಗೆ ದುಡಿದಿದ್ದೀರಿ. ಇಂದು ಸಮ್ಮೇಳನ ಯಶಸ್ವಿಯಾಗಿದೆ. ಅದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.

      ಸಿಐಟಿಯು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಮಾತನಾಡಿ, ಬಿಜೆಪಿ ಸರ್ಕಾರ ಜನರ ದಿಕ್ಕು ತಪ್ಪಿಸುತ್ತಿದೆ. ಟಿಪ್ಪು ವಿಷಯವನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದೆ. ಚುನಾವಣೆಗಳು ಬರುತ್ತಿದ್ದಂತೆಯೇ ಇಂತಹ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದರ ಬಗ್ಗೆ ಎಲ್ಲಾ ಕಾರ್ಮಿಕರು ಎಚ್ಚರದಿಂದ ಇರಬೇಕು ಎಂದು ತಿಳಿಸಿದರು.

      ಇದೇ ವೇಳೆ ಜನವರಿ 8 ರಾಷ್ಟ್ರವ್ಯಾಪಿ ಸಾರ್ವತ್ರಿಕ ಮುಷ್ಕರ ಯಶಸ್ವಿಗೊಳಿಸಲು ಕರೆ ವರದಿಯನ್ನು ಸಿಐಟಿಯು ಕಾರ್ಯದರ್ಶಿ ಹೆಚ್.ಎಸ್. ಸುನಂದ ಮಂಡಿಸಿದರು. ಕಾರ್ಯದರ್ಶಿ ಕೆ.ಮಹಾಂತೇಶ್ ಅನುಮೋದಿಸಿದರು. ಅಯೋಧ್ಯಾ ಪ್ರಕರಣ ಸುಪ್ರೀಂ ಕೋರ್ಟ್ ನೀಡಲಿರುವ ತೀರ್ಪಿನ ಹಿನ್ನೆಲೆಯಲ್ಲಿ ಶಾಂತಿ, ಸೌಹಾರ್ದತೆ ಮತ್ತು ದುಡಿಯುವ ಜನರ ಐಕ್ಯತೆ ಕಾಪಾಡಲು ಸಿಐಟಿಯು ಕರೆ ವರದಿಯನ್ನು ರಾಜ್ಯ ಉಪಾಧ್ಯಕ್ಷ ಕೆ.ಪ್ರಕಾಶ್ ಮಂಡಿಸಿದರು. ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಅನುಮೋದಿಸಿದರು.
ಸಮ್ಮೇಳನದಲ್ಲಿ ಮುಖಂಡರಾದ ವಿಜೆಕೆ ನಾಯರ್, ಕೆಎನ್.ಉಮೇಶ್, ಗುಲ್ಜಾರ್ ಬಾನು, ಶಂಕರ್, ವಸಂತಾಚಾರಿ, ವೀರಾಸ್ವಾಮಿ ಬಿ.ಷಣ್ಮುಖಪ್ಪ, ಎ.ಲೋಕೇಶ್, ಹೆಚ್.ಡಿ.ನಾಗೇಶ್ ಮೊದಲಾದವರು ಉಪಸ್ಥಿತರಿದ್ದರು.

      ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್ ಸ್ವಾಗತಿಸಿದರು. ಸಿಐಟಿಯು ಖಜಾಂಚಿ ಜಿ.ಕಮಲ ವಂದಿಸಿದರು.

(Visited 35 times, 1 visits today)

Related posts

Leave a Comment