ಉಪನಾಲೆಗೆ ನೀರು ಹರಿಸಲು ರೈತರ ಆಗ್ರಹ!

ತುಮಕೂರು:

      ಹೇಮಾವತಿ ಉಪನಾಲೆ 24ರಲ್ಲಿ ನೀರು ಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

      ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಜಿಲ್ಲೆಗೆ ಹೇಮಾವತಿ ನೀರನ್ನು ಹರಿಸುವ ಪ್ರಯತ್ನವನ್ನು ಮಾಡದ ರಾಜಕಾರಣಿಗಳು, ಹೇಮಾವತಿ ವಿಚಾರವನ್ನು ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

      ಉಪನಾಲೆ 24ರ ವ್ಯಾಪ್ತಿಯಲ್ಲಿ ಬರುವ ಗುಬ್ಬಿ ತಾಲ್ಲೂಕಿನ ಎಸ್.ಕೊಡಗೀಹಳ್ಳಿ, ಕುನ್ನಾಲ, ಚಂಗಾವಿ, ಹಿಂಡಿಸ್ಕರೆ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸದೆ, ಉಪನಾಲೆ 23, 25ಕ್ಕೆ ಮಾತ್ರ ಹೇಮಾವತಿ ನೀರನ್ನು ಹರಿಸಲಾಗುತ್ತಿದೆ. ಕುಣಿಗಲ್ ಮತ್ತು ಸಿಎಸ್‍ಪುರ ಕೆರೆಗಳಿಗೆ ನೀರು ಹರಿಸುವಾಗ ಮಾತ್ರ ಉಪನಾಲೆ 24ರಲ್ಲಿ ನೀರು ಹರಿಸಲು ಸಾಧ್ಯ, ಆದರೆ ಅಧಿಕಾರಿಗಳು ಉಪನಾಲೆ 24ಕ್ಕೆ ನೀರು ಹರಿಸುತ್ತಿಲ್ಲ ಎಂದು ದೂರಿದರು.

      ಹೇಮಾವತಿ ನಾಲೆ ಆಧುನೀಕರಣಗೊಳ್ಳದೆ ಜಿಲ್ಲೆಯ ಪಾಲಿನ ನೀರನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಜನಪ್ರತಿನಿಧಿಗಳಿಗೆ ಇದ್ದರೂ, ಕೆರೆಗೆ ನೀರನ್ನು ಹರಿಸದೇ ತಾರತಮ್ಯ ಮಾಡುವ ಮೂಲಕ ನೀರಿನ ವಿಚಾರದಲ್ಲಿ ರಾಜಕಾರಣ ಮಾಡುತ್ತಿದ್ದಾರೆ, ಶಾಸಕರಾದವರು ತಮ್ಮ ಕ್ಷೇತ್ರ ವ್ಯಾಪ್ತಿಗೆ ನೀರು ಹರಿಸದೇ ಇದ್ದರೆ ಮಾತ್ರ ಪ್ರಶ್ನಿಸುವುದನ್ನು ನಿಲ್ಲಿಸಿ ಜಿಲ್ಲೆಯ ರೈತರ ಹಿತ ಕಾಯಲಿ ಎಂದು ಹೇಳಿದರು.

      ಜಿಲ್ಲೆಯಲ್ಲಿರು 2010 ಕೆರೆಗಳು ಬರಿದಾಗಿದ್ದು, ಅಂತರ್ಜಲ ಮಟ್ಟ ಕುಸಿತದಿಂದಾಗಿ 1.5 ಲಕ್ಷ ಕೊಳವೆಬಾವಿಗಳು ನಾಶಗೊಂಡಿವೆ, ಲಕ್ಷಾಂತರ ತೆಂಗು ಮತ್ತು ಅಡಿಕೆ ಮರಗಳು ಒಣಗಿದ್ದು, ಜಿಲ್ಲೆ ಭೀಕರ ಬರಗಾಲಕ್ಕೆ ತುತ್ತಾಗಿದ್ದರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಜಿಲ್ಲೆಯ ಕೆರೆಗಳಿಗೆ ನೀರು ಹರಿಸದೇ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಹೇಮಾವತಿ ನೀರನ್ನು ಸದ್ಯ ಕುಡಿಯುವ ನೀರಿಗಾಗಿ ಬಳಸುತ್ತೇವೆ ಎಂದು ಹೇಳುವ ಅಧಿಕಾರಿಗಳು ಇದುವರೆಗೆ ಕೇವಲ 3 ಟಿಸಿಎಂ ನೀರನ್ನು ಮಾತ್ರ ಜಿಲ್ಲೆಗೆ ಹರಿಸಿದ್ದಾರೆ ಎಂದರು.

      ಕುಡಿಯುವ ನೀರು ಎಂದು ಕಳೆದ 25ದಿನಗಳಲ್ಲಿ ಜಿಲ್ಲೆಗೆ 3 ಟಿಎಂಸಿ ನೀರು ಹರಿಸಿರುವ ಅಧಿಕಾರಿಗಳು ಹಾಗೂ ರಾಜಕಾರಣಿಗಳು, ಮುಂದಿನ 4 ತಿಂಗಳವರೆಗೆ ಹೇಮಾವತಿ ನೀರು ಜಿಲ್ಲೆ ಹರಿದರು, ನಮ್ಮ ಪಾಲಿನಲ್ಲಿ ಕೇವಲ 12-13ಟಿಸಿಎಂ ನೀರನ್ನು ಮಾತ್ರ ಬಳಸಿಕೊಳ್ಳಲು ಸಾಧ್ಯವಾಗುತ್ತದೆ, ಕುಡಿಯುವ ನೀರಿನ ಹೆಸರಿನಲ್ಲಿ ನೀರನ್ನು ಹರಿಸುವುದನ್ನು ಬಿಟ್ಟು ನಾಲಾ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

      ಕಳೆದ 15 ವರ್ಷಗಳಿಂದಲೂ ಸಿಎಸ್‍ಪುರ, ಕುಣಿಗಲ್‍ಗೆ ನೀರು ಹರಿಸುವಾಗ ಉಪನಾಲೆ 24ರಲ್ಲಿ ನೀರು ಹರಿಸಲಾಗುತ್ತಿತ್ತು, ಆದರೆ ಕಳೆದ ವರ್ಷದಿಂದ ಉಪನಾಲೆ 24ಕ್ಕೆ ನೀರು ಹರಿಸುತ್ತಿಲ್ಲ, ಹೇಮಾವತಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶ ಎಂದು ಹೇಳುತ್ತಿದ್ದಾರೆ. ಉಪನಾಲೆ 24ರಲ್ಲಿ ಬರುವ ಹಳ್ಳಿಗಳು ಬಿಜೆಪಿ ಶಾಸಕರ ವ್ಯಾಪ್ತಿಗೆ ಬರುವುದಿಲ್ಲ ಎನ್ನುವ ಕಾರಣಕ್ಕೆ ಈ ರೀತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

      ಡಿಸಿಗೆ ತರಾಟೆ: ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಲು ಬಂದ ಜಿಲ್ಲಾಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡರು, ಹೇಮಾವತಿ ನೀರನ್ನು ಬಳಸಿಕೊಳ್ಳಲು ಆಗದೇ ನೀರು ಹರಿಯುವಾಗ ಕುಡಿಯುವ ನೀರಿಗೆ ಮಾತ್ರ ಎಂದು ಆದೇಶ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದೀರೀ, ಉಪನಾಲೆ 24ಕ್ಕೆ ನೀರು ಹರಿಸದೇ ಇದ್ದಲ್ಲಿ ನಾಲೆಗೆ ಹಾರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ, ಅದಕ್ಕೆ ಜಿಲ್ಲಾಡಳಿತಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

      ಕುಣಿಗಲ್ ಮತ್ತು ಸಿಎಸ್‍ಪುರಕ್ಕೆ ನೀರು ಹರಿಸುವಾಗ ಮಾತ್ರ ಉಪನಾಲೆ-24ಕ್ಕೆ ನೀರು ಹರಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿಗಳಿಗೆ ಮನದಟ್ಟು ಮಾಡಿಕೊಡುವಷ್ಟರಲ್ಲಿ ರೈತರು ಹೈರಾಣಾದರು, ಉಪನಾಲೆಯಲ್ಲಿ ಮುಂದೆ ನೀರು ಹರಿಸುವುದಾಗಿ ಪದೇ ಪದೇ ಹೇಳುತ್ತಿದ್ದ ಜಿಲ್ಲಾಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು, ಹೆಂಡತಿ ಮಕ್ಕಳ ಒಡವೆಯನ್ನು ಇಟ್ಟು ವ್ಯವಸಾಯ ಮಾಡುತ್ತಿದ್ದೇವೆ ನಿಮ್ಮಿಂದ ಬೀದಿಗೆ ಬರಬೇಕಾಗುತ್ತದೆ ಅಳಲು ತೋಡಿಕೊಂಡರು.

      ಪ್ರತಿಭಟನೆಯಲ್ಲಿ ಗೋಪಾಲ್, ಮುಖಂಡರಾದ ಶಿವಣ್ಣ, ಅಮಾನ್‍ಉಲ್ಲಾ, ಲಕ್ಷ್ಮಣಯ್ಯ, ಗಂಗಣ್ಣ, ಮೂಡಲಗಿರಿಯಪ್ಪ, ಎನ್.ಗಂಗಣ್ಣ, ಗೋವಿಂದಸ್ವಾಮಿ, ಭೀಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 11 times, 1 visits today)

Related posts

Leave a Comment