ಎಸ್ಎಸ್ಎಲ್ ಸಿ ತರಗತಿಗೆ ದಿಢೀರ್ ಸಿಇಓ ಭೇಟಿ !!

ತುಮಕೂರು:

      ನಗರದ ಬಿ.ಹೆಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫ್ರೌಢಶಾಲಾ ವಿಭಾಗದ ಎಸ್.ಎಸ್.ಎಲ್.ಸಿ. ತರಗತಿಗೆ ತುಮಕೂರು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಶುಭಾ ಕಲ್ಯಾಣ್ ಅವರು ಬುಧವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

      ತುಮಕೂರು ಜಿಲ್ಲೆಯನ್ನು ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರುವ ನಿಟ್ಟಿನಲ್ಲಿ ಸಾಕಷ್ಟು ಸಭೆಗಳನ್ನು ನಡೆಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಸಲಹೆ ಸೂಚನೆಗಳನ್ನು ನೀಡಿದ್ದ ಅವರು, ಇಂದು ಶಾಲೆಯ ತರಗತಿಗೆ ಭೇಟಿ ನೀಡಿ, ಮಕ್ಕಳೊಂದಿಗೆ ಕೆಲ ಕಾಲ ಮಾತುಕತೆ ನಡೆಸಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. ಅಲ್ಲದೆ ಸರ್ಕಾರಿ ಸೌಲಭ್ಯಗಳನ್ನು ಮಕ್ಕಳು ಸಮರ್ಪಕವಾಗಿ ಸದುಪಯೋಗಪಡಿಸಿಕೊಂಡು ತುಮಕೂರು ಜಿಲ್ಲೆಗೆ ಉತ್ತಮ ಫಲಿತಾಂಶ ನೀಡುವಂತೆ ಕಿವಿಮಾತು ಹೇಳಿದರು.

      ಕಳೆದ ಶೈಕ್ಷಣಿಕ ಸಾಲಿನಲ್ಲಿ ತುಮಕೂರು ಜಿಲ್ಲೆಯ ಎಸ್.ಎಸ್.ಎಲ್.ಸಿ. ಫಲಿತಾಂಶವು ನಿರೀಕ್ಷಿತ ಪ್ರಮಾಣದಲ್ಲಿ ಬಂದಿರಲಿಲ್ಲ. ಅಲ್ಲದೆ ಈ ಬಾರಿಯ ಎಸ್.ಎಸ್.ಎಲ್.ಸಿ. ಅರ್ಧವಾರ್ಷಿಕ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದಿರುವುದನ್ನು ಮನಗಂಡ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪರೀಕ್ಷೆಯಲ್ಲಿ ತೀರಾ ಹಿಂದುಳಿದ ವಿದ್ಯಾರ್ಥಿಗಳನ್ನು ಗುರ್ತಿಸಿ, ಅವರಲ್ಲಿರುವ ಗೊಂದಲಗಳನ್ನು ಬಗೆಹರಿಸಿ ಮುಂದಿನ ವಾರ್ಷಿಕ ಪರೀಕ್ಷೆಗೆ ಕಡಿಮೆ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳೂ ಉತ್ತಮ ಅಂಕಗಳನ್ನು ತೆಗೆದು ಜಿಲ್ಲೆಯ ಫಲಿತಾಂಶವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರೂ ಶ್ರಮವಹಿಸುವಂತೆ ಅವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಿದರು.

     ಜಿಲ್ಲೆಯ ಒಟ್ಟಾಗಿ ಅರ್ಧವಾರ್ಷಿಕ ಪರೀಕ್ಷೆಯ ಫಲಿತಾಂಶದಿಂದ ಬೇಸರಗೊಂಡಿದ್ದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪ್ರತೀ ಶಾಲೆಯಲ್ಲಿ ಶೈಕ್ಷಣಿಕವಾಗಿ ಹಿಂದುಳಿದಿರುವ ಅದರಲ್ಲೂ ಗಣಿತ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಹಿಂದುಳಿದಿರುವ ವಿದ್ಯಾರ್ಥಿಗಳನ್ನು ಗುರ್ತಿಸಿ ಅವರನ್ನು ಅದೇ ಶಾಲೆಯ ಶಿಕ್ಷಕರು ಅಥವಾ ವಿಷಯ ಪರಿವೀಕ್ಷಕರು ದತ್ತು ಪಡೆದು ಅವರ ಶೈಕ್ಷಣಿಕ ಪ್ರಗತಿಗೆ ಮುಂದಾಗುವಂತೆ ತಿಳಿಸಿದರು.

      ಶಿಕ್ಷಕರು ತರಗತಿಯ ಸಮಯದಲ್ಲಿ ಯಾವುದೇ ಸಭೆಗಳನ್ನು ನಡೆಸದೆ, ತರಗತಿಗಳು ಮುಗಿದ ನಂತರ ಸಭೆಗಳನ್ನು ನಡೆಸುವಂತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಿದರು.

      ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಂ.ಆರ್.ಕಾಮಾಕ್ಷಿ, ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಸಿ. ರಂಗಧಾಮಪ್ಪ ಹಾಜರಿದ್ದರು.

(Visited 13 times, 1 visits today)

Related posts

Leave a Comment