ಎಸ್‍ಸಿಪಿ/ಟಿಎಸ್‍ಪಿಯ ಅನುದಾನವನ್ನು ಶೇ.100ರಷ್ಟು ಖರ್ಚು ಮಾಡಿ

ತುಮಕೂರು :

      ಪರಿಶಿಷ್ಟ ಜಾತಿ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆಯಡಿ ಬಿಡುಗಡೆಯಾಗುವ ಅನುದಾನವನ್ನು ಮುಂದಿನ ತ್ರೈಮಾಸಿಕ ಅವಧಿಯಲ್ಲಿ ಶೇಕಡ 100ರಷ್ಟು ಖರ್ಚು ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ: ರಾಕೇಶ್ ಕುಮಾರ್ ಅವರು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ವಿವಿಧ ಇಲಾಖೆಗಳ ಪರಿಶಿಷ್ಟ ಜಾತಿ ಉಪಯೋಜನೆ/ಗಿರಿಜನ ಉಪಯೋಜನೆ ಕಾಯ್ದೆ 2013ರ ಅನುಷ್ಟಾನದ ಕುರಿತ ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

      ಜಿಲ್ಲಾ ಮೇಲ್ವಿಚಾರಣ ಸಮಿತಿ ಸಭೆಗೆ ಗೈರು ಹಾಜರಾಗಿರುವ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಅವರು ಸೂಚಿಸಿದರು.

      ಜನವರಿ, ಫೆಬ್ರವರಿ ಮಾಹೆಯೊಳಗಾಗಿ ಸರ್ಕಾರದಿಂದ ಬಂದಿರುವ ಅನುದಾನವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಅನುದಾನ ನಷ್ಟವಾಗದಂತೆ ಅಧಿಕಾರಿಗಳು ಗಮನಹರಿಸಬೇಕು ಎಂದರು.

      ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಹೆಚ್ಚಿನ ಅನುದಾನ ಬಿಡುಗಡೆಯಾಗಿದ್ದು, ಜಿಲ್ಲೆಯಲ್ಲಿ 37879 ಪರಿಶಿಷ್ಟ ವರ್ಗದ ಮಕ್ಕಳಿದ್ದಾರೆ. ಕಳೆದ 2 ವರ್ಷದಿಂದ ಸುಮಾರು 8 ಕೋಟಿ ರೂ. ಅನುದಾನ ಉಳಿತಾಯವಾಗುತ್ತಿದ್ದು, ಅನುದಾನವನ್ನು ಮಕ್ಕಳ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು. ಹೆಚ್ಚುವರಿ ದಿನ ಮೊಟ್ಟೆ ನೀಡುವುದು ಅಥವಾ ಅಂಗನವಾಡಿಗಳ ವಿದ್ಯುದ್ದೀಕರಣ ಮತ್ತು ನಾಗರಿಕ ಸೌಲಭ್ಯಗಳನ್ನು ಬಳಸಿಕೊಳ್ಳಲು ಅನುಮತಿ ನೀಡುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆಯಿರಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಉಪನಿರ್ದೇಶಕ ನಟರಾಜ್ ಅವರಿಗೆ ಸೂಚಿಸಿದರು.

       ಲೋಕೋಪಯೋಗಿ ಇಲಾಖೆಯ ತುಮಕೂರು ಹಾಗೂ ಮಧುಗಿರಿ ವಿಭಾಗದ ಕ್ರಿಯಾ ಯೋಜನೆಯು ಸೆಪ್ಟೆಂಬರ್‍ನಲ್ಲಿ ಅನುಮೋದನೆಯಾಗಿದ್ದು, ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲಾಗಿದೆ. ಕಾಮಗಾರಿಗಳು ಆರಂಭವಾಗುತ್ತಿವೆ ಎಂದು ಇಲಾಖೆಯ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

      ತಾಲೂಕುವಾರು ಕೃಷಿ/ತೋಟಗಾರಿಕೆ ಇಲಾಖೆ ಸೇರಿದಂತೆ ಎಸ್‍ಸಿಪಿ/ಟಿಎಸ್‍ಪಿ ಯೋಜನೆಯ ಫಲಾನುಭವಿಗಳ ಪಟ್ಟಿಯ ಮಾಹಿತಿಯನ್ನು ನೀಡಿ ಎಂದು ಸೂಚಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಪ್ರೇಮನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರೇಮ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 61 times, 1 visits today)

Related posts

Leave a Comment