ಕಂದಾಯ, ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಗೆ ಸಚಿವರ ಸೂಚನೆ!

ತುಮಕೂರು:

      ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆಗೆ ಹಾಗೂ ಮರಳು ದಂಧೆಗೆ ಸಂಬಂಧಿಸಿದಂತೆ ಸಾರ್ವಜನಿಕ ಹಾಗೂ ಜನಪ್ರತಿನಿಧಿಗಳಿಂದ ಹಲವಾರು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ಸೇರಿದ ಭೂಪ್ರದೇಶವನ್ನು ಕೂಡಲೇ ಜಂಟಿ ಸರ್ವೆಗೆ ಕ್ರಮ ಕೈಗೊಳ್ಳಬೇಕೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ್ ಅವರು ಜಿಲ್ಲಾಧಿಕಾರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಪರವಾನಗಿ ಇಲ್ಲದೆ ಅನಧಿಕೃತವಾಗಿ ನಡೆಸುವ ಕ್ರಷರ್‍ಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು. ಗುತ್ತಿಗೆ ಪಡೆದ ಕ್ವಾರಿಗಳು ಸ್ಥಳಾಂತರಗೊಂಡಿದ್ದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು. ವಾಹನಗಳಲ್ಲಿ ಜಲ್ಲಿ, ಮರಳು, ಅಲಂಕಾರಿಕ ಶಿಲೆ ಮತ್ತಿತರ ಖನಿಜ ಹಾಗೂ ಗಣಿಗಾರಿಕೆ ಸರಕುಗಳನ್ನು ನಿಗಧಿತ ಭಾರಕ್ಕಿಂತ ಅತಿಯಾಗಿ ಹೇರಿಕೊಂಡು ಸಾಗಿಸುವಂತಿಲ್ಲ ಎಂದು ತಿಳಿಸಿದರಲ್ಲದೆ, ಗಣಿಬಾಧಿತ ಪ್ರದೇಶಗಳಿಗೆ ಸರ್ಕಾರ ಮೀಸಲಿಟ್ಟಿರುವ ಡಿಎಂಎಫ್(ಜಿಲ್ಲಾ ಗಣಿಗಾರಿಕೆ ನಿಧಿ) ಅನುದಾನವನ್ನು ಖರ್ಚು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

      ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರುವ ಕ್ರಷರ್‍ಗಳ ಪರವಾನಗಿಯನ್ನು ಮುಲಾಜಿಲ್ಲದೆ ರದ್ದುಪಡಿಸಬೇಕು. ವಿಧಾನಸಭೆ ಹಾಗೂ ಮಾಧ್ಯಮಗಳಲ್ಲಿ ತುಮಕೂರು ಜಿಲ್ಲೆಯ ಅಕ್ರಮ ಗಣಿಗಾರಿಕೆ ಕುರಿತಂತೆ ಚರ್ಚೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ಸಭೆ ನಡೆಸಿದ ನಂತರ ಅಧಿಕಾರಿಗಳು ಜಿಲ್ಲೆಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಂಡು ಉತ್ತಮ ಬದಲಾವಣೆ ತರಬೇಕು ಎಂದು ನಿರ್ದೇಶನ ನೀಡಿದರು.

      ಶಾಸಕ ಗೌರಿಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಮರಳು ದಂಧೆ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದೂರವಾಣಿ ಕರೆಗೆ ಸ್ಪಂದಿಸದೆ ಬೇಜವಾಬ್ದಾರಿ ತೋರುತ್ತಿದ್ದಾರೆ. ಎಷ್ಟು ಬಾರಿ ದೂರು ನೀಡಿದರೂ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪ ಮಾಡಿದರು.

      ಇದಕ್ಕೆ ಸ್ಪಂದಿಸಿದ ಸಚಿವರು ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಬರುವ ದೂರಿನ ಕರೆಗಳಿಗೆ ಕೂಡಲೇ ಸ್ಪಂದಿಸಬೇಕು ಎಂದು ಈಗಾಗಲೇ ರಾಜ್ಯ ಮಟ್ಟದ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದರೂ ಸುಧಾರಣೆ ಕಾಣದಿರುವುದು ಬೇಸರ ತಂದಿದೆ ಎಂದರಲ್ಲದೆ, ಹೊಸದಾಗಿ ನೇಮಕವಾಗಿರುವ ಭೂ ವಿಜ್ಞಾನಿಗಳು ಸಿಬ್ಬಂದಿ ಕೊರತೆ, ವಾಹನ ಕೊರತೆ ಎಂದು ನೆಪ ಹೇಳದೆ ಗಣಿಕಾರಿಕೆಗೆ ಸಂಬಂಧಿಸಿದ ಅಕ್ರಮ ಚಟುವಟಿಕೆಗಳ ಪ್ರಕರಣಗಳನ್ನು ದಾಖಲಿಸುವಲ್ಲಿ ತಮ್ಮ ಕಾರ್ಯಕ್ಷಮತೆಯನ್ನು ತೋರಿಸಬೇಕೆಂದು ಸಲಹೆ ನೀಡಿದರು.

      ಜಿಲ್ಲಾಧಿಕಾರಿ ಡಾ|| ಕೆ ರಾಕೇಶ್‍ಕುಮಾರ್ ಮಾತನಾಡಿ ಇನ್ನೊಂದು ವಾರದೊಳಗಾಗಿ ಕಂದಾಯ ಹಾಗೂ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಪ್ರದೇಶವನ್ನು ಸರ್ವೇ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಸಚಿವರ ಗಮನಕ್ಕೆ ತಂದರು.

      ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕಿ ಪಂಕಜ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 64 ಕ್ರಷರ್‍ಗಳಿದ್ದು, ಎಲ್ಲಾ ಕ್ರಷರ್‍ಗಳು ಪರವಾನಗಿ ಪಡೆದು ಅಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಮರಳಿಗೆ ಬೇಡಿಕೆಯಿದ್ದರೂ ಇದಕ್ಕೆ ಪರ್ಯಾಯವಾಗಿರುವ ಎಂ-ಸ್ಯಾಂಡ್ ಬಳಕೆ ಹೆಚ್ಚಾಗಿರುವುದರಿಂದ ಯಾವುದೇ ತೊಂದರೆಯಾಗುತ್ತಿಲ್ಲ ಎಂದು ಸಭೆಗೆ ಮಾಹಿತಿ ನೀಡಿದರು.

      ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನವಂಶಿಕೃಷ್ಣ, ಉಪವಿಭಾಗಾಧಿಕಾರಿಗಳಾದ ಶಿವಕುಮಾರ್ ಹಾಗೂ ಪೂವಿತಾ, ಭೂವಿಜ್ಞಾನಿ ರೂಪ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಇಂಜಿನಿಯರ್ ವಿನಯ್ ಕುಮಾರ್, ಅರಣ್ಯ ಇಲಾಖೆಯ ಗಿರೀಶ್, ಮತ್ತಿತರರು ಉಪಸ್ಥಿತರಿದ್ದರು.

ಪತ್ರಿಕಾಗೋಷ್ಠಿ :-

      ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಜಿಲ್ಲೆಯಲ್ಲಿ ಅಕ್ರಮ ಗಣಿಕಾರಿಕೆ ನಡೆಯುತ್ತಿರುವ ಬಗ್ಗೆ ಯಾವುದೇ ಮಾಹಿತಿ ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು. ಮರಳು ದಂಧೆ, ಓವರ್‍ಲೋಡ್, ದೊಡ್ಡಮಟ್ಟದ ಸ್ಪೋಟವನ್ನು ತಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರ್‍ಟಿಒಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದ್ದು, ಇದನ್ನು ಮೀರಿ ಅಕ್ರಮ ನಡೆಯುತ್ತಿರುವುದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದರು.

ಸ್ಥಳ ಪರಿಶೀಲನೆ :-

      ನಂತರ ಸಚಿವರು ಅಜ್ಜಪ್ಪನಹಳ್ಳಿ ಪ್ರದೇಶಕ್ಕೆ ಭೇಟಿ ನೀಡಿ ಸ್ಫೋಟದಿಂದ ಸ್ಥಳೀಯ ನಿವಾಸಿಗಳ ಮನೆಗಳು ಬಿರುಕು ಬಿಟ್ಟಿರುವುದನ್ನು ಪರಿಶೀಲಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಆಲಿಸಿದರು. ನಂತರ ಅಮಲಾಪುರದ ಭೈರವ ಕ್ರಷರ್‍ಗೆ ಭೇಟಿ ನೀಡಿದ ಅವರು ಪ್ರೊಡಕ್ಷನ್ ಎಷ್ಟಿದೆ ಎಂದು ಮಾಲೀಕ ದಿಲೀಪ್ ಅವರಿಂದ ಮಾಹಿತಿ ಪಡೆದರು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸ್ಪೋಟ ನಡೆಸಬೇಕು. ಕ್ರಷರ್‍ನಲ್ಲಿ ಸ್ಪೋಟದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಶಾಸಕರು ದೂರು ನೀಡಿದ್ದು, ತೊಂದರೆಯಾಗಿರುವ ಮನೆಗಳಿಗೆ ಭೇಟಿ ನೀಡಿದಾಗ ಅಲ್ಲಿ ತೊಂದರೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಅಂತಹ ಮನೆಗಳಿಗೆ ಪರಿಹಾರವನ್ನು ನೀಡಲಾಗಿದೆ. ಹಣ ನೀಡುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅವರಿಗೆ ತೊಂದರೆಯಾಗದಂತೆ ಕಾನೂನು ಚೌಕಟ್ಟಿನಲ್ಲಿ ಹಾಗೂ ಗ್ರಾಮೀಣ ಪ್ರದೇಶದವರಿಗೆ ಕೃಷಿ ಚಟುವಟಿಕೆ, ಕುಡಿಯುವ ನೀರಿಗೆ ಸಮಸ್ಯೆ ಬಾರದಂತೆ ಎಚ್ಚರಿಕೆಯಿಂದ ಗಣಿಗಾರಿಕೆಯನ್ನು ನಡೆಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. 

(Visited 45 times, 1 visits today)

Related posts