ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲು ಒತ್ತಾಯ

ತುಮಕೂರು:

       ಕಟ್ಟಡ ಕಾರ್ಮಿಕರು ಸುರಕ್ಷತೆ ಇಲ್ಲದೆ ಅನಾರೋಗ್ಯದಿಂದ ನರಳುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹೀಗಾಗಿ ಕಲ್ಯಾಣ ಮಂಡಳಿಯಿಂದ ದೊರೆಯುವ ಸೌಲಭ್ಯಗಳು ಸಹ ಸರಿಯಾದ ವೇಳೆಗೆ ದೊರೆಯದೆ ಸಾಲದ ಸುಳಿಗೂ ಸಹ ಸಿಲುಕುತ್ತಿದ್ದಾರೆ. ಆದ್ದರಿಂದ ಸರ್ಕಾರ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡಬೇಕಾಗಿದೆ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಉಮೇಶ್ ಒತ್ತಾಯಿಸಿದ್ದಾರೆ.

      ತುಮಕೂರು ತಾಲೂಕು ಹೊಬ್ಬೂರು ಹೋಬಳಿಯ ಸಿರಿವರ ಗ್ರಾಮದಲ್ಲಿ ಪಂಚಾಯಿತಿ ಮಟ್ಟಡ ಕಟ್ಟಡ ಕಾರ್ಮಿಕರ ಸಮಾವೇಶ ದಲ್ಲಿ ಮಾತನಾಡಿದರು. 1996ರಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಜಾರಿಗೊಂಡ ಕಟ್ಟಡ ಕಾರ್ಮಿಕರ ಸೌಲಭ್ಯಗಳು ಕಲ್ಯಾಣ ಮಂಡಳಿಯ ಅಡಿಯಲ್ಲಿ ಸಿಗುವಂತೆ ಕಾನೂನು ರೂಪಿಸಲಾಗಿ 2006ರಲ್ಲಿ ರಾಜ್ಯದಲ್ಲೂ ಜಾರಿಗೆ ಬಂದಿದೆ. ಕಾರ್ಮಿಕರನ್ನು ತಲುಪುವಲ್ಲಿ ಸಂಪೂರ್ಣ ಯಶಸ್ವಿಯಾಗಿಲ್ಲ. ಇದಕ್ಕೆ ಸಿಬ್ಬಂದಿ ಕೊರತೆ, ಇಚ್ಛಾಶಕ್ತಿ ಕೊರತೆ, ಕಲ್ಯಾಣ ಮಂಡಳಿ, ಕಾರ್ಮಿಕ ಇಲಾಖೆ ಮತ್ತು ಸರ್ಕಾರ ಪರಸ್ಪರ ಸಹಕಾರವಿಲ್ಲದೆ ನಿಧಾನಗತಿಯಲ್ಲಿ ಸವಲತ್ತು ಸಿಗುತ್ತಿವೆ. ಎಚ್.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗಿದ್ದ ಹಿಂದಿನ ಅವಧಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಹಾಗಾಗಿ ಮತ್ತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಇರುವುದರಿಂದ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಆಗ್ರಹಿಸಿದರು.

      ಕಟ್ಟಡ ಕಾರ್ಮಿಕರಿಗೆ ವಸತಿ ಯೋಜನೆ, ಮಾಸಿಕ 3 ಸಾವಿರ ರೂಪಾಯಿ ಪಿಂಚಣಿ, ಹೊಸ ಉದ್ಯೋಗಗಳ ಸೃಷ್ಟಿಗೆ ಕೇಂದ್ರ ಸರ್ಕಾರ ಮಧ್ಯಪ್ರವೇಶ, ಮರಳು ಸಮಸ್ಯೆ ಪರಿಹಾರ, ಏರುತ್ತಿರುವ ಕಟ್ಟಡ ಸಾಮಗ್ರಿಗಳ ಬೆಲೆ ತಡೆಯುವ ಮೂಲಕ ಕೃಷಿಯ ನಂತರ ಉದ್ಯೋಗ ನೀಡಿರುವ ನಿರ್ಮಾಣ ವಲಯವನ್ನು ರಕ್ಷಿಸಬೇಕೆಂದು ತಿಳಿಸಿದರು.

      ಜಿಲ್ಲಾ ಸಹಕಾರ್ಯದರ್ಶಿ ರಾಮಣ್ಣ ಮಾತನಾಡಿ, ಕಾರ್ಮಿಕರು ಫಲಾನುಭವಿ ಗುರುತು ಚೀಟಿಯನ್ನು ಪಡೆದ ನಂತರ ಸಕಾಲಕ್ಕೆ ನವೀಕರಿಸಿ ಸೌಲಭ್ಯಗಳ ಸಂಬಂಧದ ಅರ್ಜಿಗಳನ್ನು ಸಂಘಟನೆಯ ಮೂಲಕ ಸಲ್ಲಿಸಿ ಸೌಲಭ್ಯದ ಹಣವನ್ನು ಪಡೆಯಬೇಕು ಎಂದರು.
ಶ್ರಮಿಕ ಕಟ್ಟಡ ಕಾರ್ಮಿಕ ಸಂಘಟನೆ ಮುಖಂಡ ಕೃಷ್ಣರಾಜು ಮಾತನಾಡಿ, ಮಹಾನ್ ವ್ಯಕ್ತಿಗಳ ತಂದೆ ಮತ್ತು ತಾಯಿಗಳು ಕಾರ್ಮಿಕರಾಗಿರುವುದೇ ಹೆಮ್ಮೆಯ ವಿಷಯವಾಗಿದೆ. ಕಾರ್ಮಿಕರು ತಮ್ಮಲ್ಲಿ ಅರಿವು ಮೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ಹೇಳಿದರು.

      ಸಂಘದ ಗೌರವಾಧ್ಯಕ್ಷ ಟಿ.ಎಂ.ಗೋವಿಂದರಾಜು ಮಾತನಾಡಿ, ನಿರಂತರ ಸಭೆ, ಸಮಾವೇಶಗಳ ಮೂಲಕ ಕಾರ್ಮಿಕರು ಒಂದಾಗಬೇಕಾದ ಅಗತ್ಯವಿದೆ ಎಂದು ತಿಳಿಸಿದರು. ಜಿಲ್ಲಾ ಮುಖಂಡರಾದ ಲಕ್ಷ್ಮಣ್ ಮಾತನಾಡಿ ಕಾರ್ಮಿಕರು ದುಡಿಮೆಯ ಜೊತೆ ಸಾಂಸ್ಕøತಿಕತೆಯನ್ನು ಮೈಗೂಡಿಸಿಕೊಳ್ಳಬೇಕು. ಸ್ಥಳೀಯ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.

      ಸಭೆಯ ಅಧ್ಯಕ್ಷತೆ ವಹಿಸಿದ್ದ ಘಟಕದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ ಕಾರ್ಮಿಕರು ಕಷ್ಟಪಟ್ಟು ದುಡಿಯುವುದೊಂದೇ ಕೆಲಸವಾಗಬಾರದು. ಕುಟುಂಬದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಜಿಲ್ಲಾ ಉಪಾಧ್ಯಕ್ಷ ಶಂಕರಪ್ಪ, ಲಕ್ಷ್ಮಣ್ ಕಚೇರಿ ಸಹಾಯಕ ನಾಗರಾಜು, ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ, ಮಹಿಳಾ ಮುಖಂಡರಾದ ಲಲಿತಮ್ಮ, ಸತ್ಯಮ್ಮ, ಲಕ್ಷ್ಮಮ್ಮ, ಮಂಜಮ್ಮ ಉಪಸ್ಥಿತರಿದ್ದರು.

(Visited 27 times, 1 visits today)

Related posts