ಕನ್ನಡದಂತಹ ಸುಂದರ ಭಾಷೆ ಮತ್ತೊಂದಿಲ್ಲ – ನಾಡೋಜ ಪಾಟೀಲಪುಟ್ಟಪ್ಪ ನುಡಿ

ತುಮಕೂರು:

      ಕನ್ನಡದಂತಹ ಸುಂದರ ಲಿಪಿಯುಳ್ಳ ಭಾಷೆ ಇನ್ನೊಂದಿಲ್ಲ. ಇಂಗ್ಲೀಷ್ ಎಂಬುದು ಕೇವಲ ಮೋಹಕ ಭಾಷೆಯಾಗಿದೆ. ಪ್ರಪಂಚದ ಸುಮಾರು ದೇಶಗಳಲ್ಲಿ ಇಂಗ್ಲಿಷ್ ಎಂಬ ಪದವೇ ತಿಳಿದಿಲ್ಲ. ಇಂಗ್ಲಿಷ್ ಕಲಿತರೆ ಪ್ರಪಂಚದ ಎಲ್ಲಾ ದೇಶಗಳನ್ನು ಸುತ್ತಿಬರಬಹುದು ಎಂಬ ಜನರ ನಂಬಿಕೆ ಸುಳ್ಳು ಎಂದು ನಾಡೋಜ ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.

      ನಗರದ ರವೀಂದ್ರ ಕಲಾನಿಕೇತನ ಸಭಾಂಗಣದಲ್ಲಿ ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಸರ್ವೋದಯ ಮಂಡಲ, ಚಿಕ್ಕನಾಯಕನಹಳ್ಳಿಯ ಶೃಂಗಾರ ಪ್ರಕಾಶನ ಪ್ರತಿಷ್ಠಾನ ವತಿಯಿಂದ ಬಾ,ಬಾಪೂ 150ನೇ ವರ್ಷಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ನನ್ನ ಕನಸಿನ ಭಾರತ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾತನಾಡಿದರು.

      ಇಂದು ಪ್ರತಿಯೊಬ್ಬರಲ್ಲೂ ಆಂಗ್ಲಭಾಷೆ ಕಲಿಯಬೇಕು. ಅದನ್ನು ಕಲಿತರೆ ಪ್ರಪಂಚದ ಯಾವುದೇ ಮೂಲೆಗೋದರೂ ಜೀವನ ಮಾಡಬಹುದು ಎಂದುಕೊಂಡಿದ್ದಾರೆ. ಅದು ಶುದ್ಧ ಸುಳ್ಳು, ಜಪಾನ್, ಫ್ರಾನ್ಸ್ ನಂತರ ಸುಮಾರು ದೇಶಗಳಲ್ಲಿ ಆಂಗ್ಲ ಭಾಷೆಯ ಪರಿಜ್ಞಾನವೇ ಇಲ್ಲ. ಕೇವಲ ನಮ್ಮ ಭಾರತದಲ್ಲಿ ಮಾತ್ರವೇ ಆಂಗ್ಲ ಭಾಷೆಗೆ ಮಾರುಹೋಗಿದ್ದು, ಆಂಗ್ಲ ಶಿಕ್ಷಣದತ್ತ ಮುಖ ಮಾಡುವ ಮೂಲಕ ಕನ್ನಡ ಭಾಷೆಯನ್ನು ಮರೆತು ಹೋಗುತ್ತಿದ್ದೇವೆ ಎಂದರು.

      ಪ್ರಾರಂಭದ ಜೀವನದಲ್ಲಿ ನಡೆಸಿದ ಹೋರಾಟಗಳನ್ನು ಮೆಲುಕು ಹಾಕಿದ ಪಾಟೀಲ ಪುಟ್ಟಪ್ಪನವರು, ಚಿಕ್ಕ ವಯಸ್ಸಿನಲ್ಲಿ ರೈಲನ್ನು ನೋಡಲು ಹೋದಾಗ ಓರ್ವ ಬಾಲಕ ಅಂದಿನ ಕಾಲಕ್ಕೆ ಶ್ರೀಮಂತರೆನಿಸಿಕೊಂಡಿದ್ದವನು ಕೈಗೆ ವಾಚನ್ನು ಕಟ್ಟಿಕೊಂಡಿರುತ್ತಾನೆ. ಅದನ್ನು ರೈಲ್ವೇ ಪೈಲಟ್ ಪಡೆದುಕೊಂಡಾಗ ಕೋಪಗೊಂಡ ಆ ಬಾಲಕ ಕಲ್ಲನ್ನು ಎಸೆಯುತ್ತಾನೆ. ಆಗ ಒಂದು ಗಾಜಿನ ವಸ್ತು ಹೊಡೆದುಹೋಗುತ್ತದೆ. ಆ ವೇಳೆ ಎಲ್ಲಾ ಬಾಲಕರು ಓಡಿಹೋಗುತ್ತಾರೆ. ಆ ಸಂದರ್ಭದಲ್ಲಿ ಅವರ ಕೈಗೆ ಸಿಲುಕಿಕೊಂಡ ತಾನು ರೈಲ್ವೇ ಅಧಿಕಾರಿಗಳ ವಶಕ್ಕೆ ಹೋಗುತ್ತಾರೆ. ಈ ಘಟನೆಯನ್ನೆಲ್ಲಾ ನೋಡಿದ ಒಬ್ಬರು ಸತ್ಯದ ಪರವಾಗಿ ನಿಂತು ಕಲ್ಲೆ ಎಸೆದಿದ್ದು ಈತನಲ್ಲ, ಬೇರೊಬ್ಬ ಬಾಲಕ. ಆತ ಓಡಿಹೋಗಿದ್ದಾನೆ ಎಂದಾಗ ತನ್ನನ್ನು ಬಿಡುಗಡೆ ಮಾಡಲಾಯಿತು. ಅಂದಿನಿಂದ ಸತ್ಯದ ಪರವಾಗಿ ನಿಂತು ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿದಿದ್ದೇನೆ. ಯಾರೇ ಬಂದರೂ ಯಾರೇ ಹೋದರೂ ಒಬ್ಬಂಟಿಗನಾಗಿಯಾದರೂ ಹೋರಾಟ ಮಾಡಲು ಸಿದ್ದ ಎಂದು ತಿಳಿಸಿದರು.

       ಗಾಂಧೀಜಿ ಅವರು ತೋರಿದ ಮಾರ್ಗಗಳಲ್ಲಿ ನಡೆಯುತ್ತಾ ಇಂದಿಗೂ ಅನ್ಯಾಯ ಎಂದಾಗ ಅದರ ವಿರುದ್ಧ ಶಾಂತಿಯುತವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ನನ್ನ ಚಿಕ್ಕಂದಿನಿಂದಲೇ ಮಹಾತ್ಮಗಾಂಧಿ, ಜವಾಹರಲಾಲ್, ಲಾಲ್‍ಬಹದ್ದೂರ್ ಶಾಸ್ತ್ರಿ, ಅಂಬೇಡ್ಕರ್ ಅವರನ್ನು ನೋಡುತ್ತಾ ಅವರ ಆದರ್ಶಗಳನ್ನು ಬೆಳೆಸಿಕೊಂಡು ಬಂದಿದ್ದೇವೆ. ಅವರ ಮಾತಿನಂತೆ ಖಾದಿ ಬಟ್ಟೆಯನ್ನೇ ಇಂದಿಗೂ ಹಾಕಿಕೊಳ್ಳುತ್ತೇನೆ. ಗಾಂಧೀಜಿಯವರು ಒಂದು ಕಾರ್ಯಕ್ರಮದಲ್ಲಿ ವಿವಿಧ ಶಾಲಾ ಮಕ್ಕಳು ಹಾಗೂ ಯುವಕ ಯುವತಿಯರಿಗೆ ಪ್ರತಿ ಮನೆಗೆ ತೆರಳಿ ಆಹಾರ ಬೇಡಿ ತೆರಬೇಕು ಎಂದಿದ್ದರು. ಅದನ್ನು ಎಲ್ಲಾ ವಿದ್ಯಾರ್ಥಿಗಳು ಪಾಲಿಸುತ್ತಾರೆ. ಅವರಿಗೆ ಓರ್ವ ಸರ್ಧಾರ್ ವೀರನಗೌಡ ಎಂಬುವವರು ಭೋಜನ ತಂದು ಕೊಟ್ಟರೆ ಅದನ್ನು ನಾನು ಮುಟ್ಟುವುದಿಲ್ಲ. ಎಲ್ಲರೂ ಏನು ಸವಿಯುತ್ತಾರೋ ನಾನು ಅದನ್ನೇ ಊಟ ಮಾಡುತ್ತೇನೆ ಎಂದಿದ್ದರು. ಅಂತಹ ಮಹಾನ್ ವ್ಯಕ್ತಿ ಆದರ್ಶ ಎಂದಿಗೂ ಮರೆಯುವಂತಿಲ್ಲ ಎಂದರು.

      ರಾಜಕೀಯ ವಿಚಾರಗಳನ್ನು ಪ್ರಸ್ತಾಪಿಸಿದ ಅವರು, ರಾಜಕೀಯದಲ್ಲಿ ಏನಾದರೂ ಮಾಡಬೇಕು ಎಂಬುದು ಇದ್ದಿದ್ದರೆ ಅವಿರತ ಕಾರ್ಯಗಳನ್ನು ಮಾಡಬಹುದಿತ್ತು. ಆದರೆ ನಮಗೆ ಸಾಮಾಜಿಕ ಸೇವೆ, ಹೋರಾಟಗಳ ಮೇಲೆ ಇದ್ದ ಕಾಳಜಿ ರಾಜಕೀಯದಲ್ಲಿರಲಿಲ್ಲ. ನಮ್ಮ ಕೈಯಿಂದ ಸಾಕಷ್ಟು ಮಂದಿಯನ್ನು ಮಂತ್ರಿಗಳನ್ನು , ಮುಖ್ಯಮಂತ್ರಿಗಳನ್ನು ಮಾಡಿದ್ದೇವೆ. ಆದರೆ ಎಂದೂ ನನಗೆ ಮಂತ್ರಿಯಾಗಬೇಕು ಎಂಬ ಆಶಾಭಾವನೆ ಬಂದಿಲ್ಲ. ಆದರೆ ಕರ್ನಾಟಕ ಕಾವಲು ಸಮಿತಿಯ ಅಧ್ಯಕ್ಷ ಸ್ಥಾನ ನೀಡಿದ್ದರು. ನನಗೆ ಬೇಡ ಎಂದರೂ ನೀವು ಅದಕ್ಕೆ ಸೂಕ್ತ ವ್ಯಕ್ತಿ ಎಂದು ರಾಮಕೃಷ್ಣ ಹೆಗಡೆಯವರು ಒತ್ತಾಯಿಸಿ ನನಗೆ ಆ ಸ್ಥಾನ ನೀಡಿದ್ದರು ಎಂದು ತಿಳಿಸಿದರು.

      ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಈ ದೇಶ ಯಾವ ಸ್ಥಿತಿಯಲ್ಲಿತ್ತು, ಅಂದು ಜನ ಎಂಥಹಾ ಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದರು, ಅವರನ್ನು ಬದಲಾಯಿಸಿ ಅಭಿವೃದ್ಧಿ ಮಾಡುವತ್ತ ಶ್ರಮಿಸಿದವರಲ್ಲಿ ಗಾಂಧೀಜಿ ಪ್ರಮುಖರು. ಗಾಂಧೀಜಿಯವರು ನಮ್ಮ ಸ್ವಾಭಿಮಾನ ಮುಖ್ಯ ಎಂದು ನಮಗೆ ಸ್ವಾತಂತ್ರ್ಯ ತರಲು ಶ್ರಮಿಸಿದ್ದರು. ಅವರು ವಕೀಲರಾಗಿದ್ದರೂ ಕೂಡ ಸಾಮಾಜಿಕ ಕಳಕಳಿಯಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು. ಅವರ ಆಸೆಯಂತೆ ಗ್ರಾಮೀಣ ಜನರ ಬದುಕು ಹಸನಾಗಬೇಕಿತ್ತು. ಆದರೆ ಇಂದು ಗ್ರಾಮೀಣರ ಬದುಕು ಗುಲಾಮರಂತೆ ಆಗಿದೆ. ಇಂದು ಮನುಷ್ಯನಿಗೆ ತಕ್ಷಣಕ್ಕೆ ಸುಖ, ಹಣ ಬಯಸುವವನಾಗಿದ್ದಾನೆ. ಗಾಂಧೀಜಿಯಿಲ್ಲದೆ ಭಾರತವನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಅಂತಹದ್ದು, ಇಂದು ಗಾಂಧೀಜಿಯನ್ನೇ ಮರೆಯುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

      ಮನುಷ್ಯನು ತನ್ನ ಜೀವನವನ್ನು ತಾನೇ ಸೃಷ್ಠಿ ಮಾಡಿಕೊಳ್ಳಬೇಕು. ತಮ್ಮಲ್ಲಿನ ಶಕ್ತಿಯ ಅರಿವನ್ನು ಮೂಡಿಸಿಕೊಂಡಾಗ ಶಕ್ತಿವಂತರಾಗಿ ಬೆಳೆಯುವದಲ್ಲದೆ ಉನ್ನತ ಮಟ್ಟಕ್ಕೆ ಬೆಳೆಯುತ್ತೇವೆ. ನಮ್ಮ ಶಕ್ತಿಯನ್ನು ಬಳಸಿಕೊಂಡು ಅಭಿವೃದ್ಧಿಯತ್ತ ಶ್ರಮ ವಹಿಸಬೇಕು. ಬಡವರ್ಗದವರನ್ನು ಮೇಲೆತ್ತುವ ಕೆಲಸ ಮಾಡಬೇಕು. ನಾವು ಏನೇ ಸಾಧನೆ ಮಾಡಬೇಕು ಎಂದಾಗ ಅನೇಕ ತ್ಯಾಗ ಬಲಿದಾನಗಳನ್ನು ಮಾಡಬೇಕಾಗುತ್ತದೆ. ನಾವು ಯಾವಾಗ ಗುರುತಿಸಿಕೊಂಡು, ಬೇರೊಬ್ಬರಿಂದ ಗೌರವ ಪಡೆಯುತ್ತೇವೆ ಅಂದು ನಾವು ಸಾವನ್ನಪ್ಪಿದರೂ ಜೀವಂತವಾಗಿರುತ್ತೇವೆ. ಅಂತಹ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರಲ್ಲದೆ, ಮೈಸೂರು ಸಂಸ್ಥಾನದ ಕಾಲದಲ್ಲಿ ಕರ್ನಾಟಕ ರಾಜ್ಯದ ಏಕೀಕರಣಕ್ಕಾಗಿ ಕುವೆಂಪುರವರ ಸಹಾಯದಿಂದ ಹೋರಾಟಕ್ಕಿಳಿದ ಪಾಟೀಲ ಪುಟ್ಟಪ್ಪನವರ ಶ್ರಮದಿಂದ ಇಂದು ಸಮೃದ್ಧ ಕರ್ನಾಟಕವನ್ನು ನೋಡುತ್ತಿ ದ್ದೇವೆ ಎಂದು ಪಾಟೀಲ ಪುಟ್ಟಪ್ಪನವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

      ಕಾರ್ಯಕ್ರಮದಲ್ಲಿ ಸರ್ವೋದಯ ಮಂಡಲದ ಕಾರ್ಯದರ್ಶಿ ಸುರೇಶ್ ಮಾತನಾಡಿ, ಮುಂಬೈನಲ್ಲಿನ ಓರ್ವ ವ್ಯಕ್ತಿ ಜೀವನ ನಡೆಸಲು ಕ್ರೂರತ್ವವನ್ನು ಬೆಳೆಸಿಕೊಂಡು ಸೆರೆಮನೆವಾಸ ಅನುಭವಿಸುತ್ತಿರುವಾಗ ಗಾಂಧೀಜಿಯವರ ಪುಸ್ತಕವನ್ನು ಓದಿ ಗಾಂಧಿವಾದಿಯಾಗಿ ಪರಿವರ್ತನೆಯಾಗಿದ್ದ ನೈಜ ಘಟನೆಯನ್ನು ಪ್ರಚುರ ಪಡಿಸಿದರು.

      ಕಾರ್ಯಕ್ರಮದಲ್ಲಿ ಎಂ.ಬಸವಯ್ಯ ರಚಿಸಿದ ಗಾಂಧೀಜಿಯವರ ನನ್ನ ಕನಸಿನ ಭಾರತ ಎಂಬ ಪುಸ್ತಕ ಹಾಗೂ ಹಿರಿಯ ಸಾಹಿತಿ ಡಾ.ಎಂ.ವಿ ನಾಗರಾಜರಾವ್ ರಚಿಸಿದ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗಾಂಧಿ ಸ್ಮಾರಕ ನಿಧಿಯ ಉಪಾಧ್ಯಕ್ಷರಾದ ಪ್ರೊ.ಬಿ.ಶಿವರಾಜು, ಕರ್ನಾಟಕ ಸರ್ವೋದಯ ಮಂಡಲದ ಅಧ್ಯಕ್ಷರಾದ ಎಲ್.ತುಂಡೋಟಿ ನರಸಿಂಹಯ್ಯ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಮಕ್ಕಳು ಪ್ರಾರ್ಥನೆ ಮಾಡಿದರು. ಅಕ್ಕಮ್ಮನವರು ಗಾಂಧೀಜಿ ಬಗೆಗಿನ ಹಾಡನ್ನು ಹಾಡಿದರು. ಹಿರಿಯ ಸಾಹಿತಿ ನಾಗರಾಜರಾವ್ ಸ್ವಾಗತಿಸಿದರೆ, ಜಿಲ್ಲಾ ಸರ್ವೋದಯ ಮಂಡಲದ ಕಾರ್ಯದರ್ಶಿ ಆರ್.ವಿ.ಪುಟ್ಟಕಾಮಣ್ಣ ನಿರೂಪಣೆ ಮಾಡಿದರು.

(Visited 71 times, 1 visits today)

Related posts

Leave a Comment