ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ

ಚಿಕ್ಕನಾಯಕನಹಳ್ಳಿ:

      ಕರ್ನಾಟಕ ಒಂದು ಮಾಡಿದ ಭಾಗದಿಂದಲೇ ಇಂದು ವಿಭಜನೆ ಮಾತು ಕೇಳಿ ಬರುತ್ತಿದೆ. ಕನ್ನಡಿಗರೆಲ್ಲರೂ ಒಟ್ಟಾದರೆ ಮಾತ್ರ ಇಡೀ ಕರ್ನಾಟಕ ಉಳಿಯುತ್ತದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ 63ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಭಿವೃದ್ದಿ ಹಾಗೂ ತಾರತಮ್ಯ ಹೆಸರಿನಲ್ಲಿ ಕರ್ನಾಟಕ ಒಡೆಯುವ ಮಾತುಗಳು ಸರಿಯಲ್ಲ, ಇಡೀ ಕರ್ನಾಟಕ-ಕನ್ನಡಿಗರು ಒಂದಾಗಿದ್ದರೆ ಮಾತ್ರ ಬೆಳವಣಿಗೆ ಕಾಣುತ್ತದೆ, 1956ರ ನವಂಬರ್ 1ರಂದು ಅನೇಕ ಕವಿಗಳು, ಹೋರಾಟಗಾರರ ಫಲವಾಗಿ ಹರಿದು ಹಂಚಿ ಹೋಗಿದ್ದ ಕನ್ನಡಿಗರನ್ನು ಒಗ್ಗೂಡಿಸಲಾಯಿತು, ಹೋರಾಟದ ಆಶಯದಂತೆ 1973ರ ನವಂಬರ್ 1ರಂದೇ ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡಿತು, ಇದರ ಸವಿ ನೆನಪಿಗಾಗಿಯೇ ಪ್ರತಿ ವರ್ಷ ನವಂಬರ್ ತಿಂಗಳು ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದರು.

      ಪ್ರತಿಯೊಬ್ಬ ಕನ್ನಡಿಗನು ಈ ನೆಲ, ಜಲದ ಅಭಿಮಾನ ಇಮ್ಮಡಿಸಿಕೊಳ್ಳಬೇಕು, ಸುದೀರ್ಘ ಇತಿಹಾಸವುಳ್ಳ ಕನ್ನಡ ಭಾಷೆ, ಕರ್ನಾಟಕದ ವೈಭವ ಮತ್ತೆ ಮರುಕಳಿಸಬೇಕು ಎಂದ ಅವರು, ದೇಶದಲ್ಲಿ ಶೇ.33%ರಷ್ಠಿರಬೇಕಾಗಿದ್ದ ಅರಣ್ಯ ಪ್ರದೇಶ ಇಂದು ಶೇ.17% ಇದೆ, ಅರಣ್ಯವಿಲ್ಲದೆ ಮಳೆ ಇಲ್ಲ-ಬೆಳೆ ಇಲ್ಲದಂತಾಗಿದೆ, ನಾವೆಲ್ಲರೂ ಸೇರಿ ಅರಣ್ಯ ಮತ್ತು ನೀರಿನ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.

      ತಹಶೀಲ್ದಾರ್ ಸೋಮಪ್ಪ ಕಡಕೋಳ ಮಾತನಾಡಿ, ಕನ್ನಡ ನಾಡು ಸಾಹಿತ್ಯ, ಕಲೆ, ಸಂಸ್ಕøತಿಗಳ ನೆಲವೀಡು ಸುಮಾರು 2ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ಕರುನಾಡಿನ ಗತ ವೈಭವವು ಇತಿಹಾಸದ ಪುಟಗಳಲ್ಲಿ ಸೇರಿದೆ, ಕಪ್ಪು ಮಣ್ಣಿನ ನಾಡು ಎಂದು ಕರೆಯುವ ಈ ನೆಲ ಅನೇಕ ಕವಿ ಚಿಂತಕರು ಬರಹಗಾರರ ತ್ಯಾಗದ ಹೋರಾಟದ ಫಲವಾಗಿದೆ, ಕರ್ನಾಟಕ ಅನೇಕ ಜೀವ ನದಿಗಳ ತಾಣವಾಗಿ, ವಿಶ್ವಪರಂಪರೆಯ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ನಮ್ಮ ಐತಿಹಾಸಿಕ ವೈಭವಕ್ಕೆ ಸಾಟಿಯಾಗಿದೆ ಎಂದರು.

      ಕನ್ನಡದ ಈ ನೆಲ ಕವಿ ಸಂತ, ಋಷಿ ಮುನಿಗಳ ತವರೂರು ಮಾನವ ಜಾತಿ ತಾನೊಂದೆ ವಲಂ, ಎನ್ನುವ ಮನುಷ್ಯ ಪ್ರೇಮವನ್ನು ಬಿತ್ತಿದ ಕನ್ನಡದ ಆದಿಕವಿ ಪಂಪ, ಚಂಪೂ ಸಾಹಿತ್ಯ ನೀಡಿದ ರನ್ನ, ಪೊನ್ನ, ಜನ್ನರಂತಹ ಕವಿಗಳ ಕಾವ್ಯ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದೆ, ವಚನಕಾರರಾದ ಅಲ್ಲಮಪ್ರಭು, ಬಸವಣ್ಣ, ಅಕ್ಕಮಹಾದೇವಿ, ನೀಲಾಂಬಿಕೆ, ಗಂಗಾಬಿಕೆ, ಸಂಚಿಹೊನ್ನಮ್ಮ, ಹೆಳವನಕಟ್ಟೆ ಗಿರಿಯಮ್ಮರಂತಹ ಕವಿಗಳ ಕಾವ್ಯ ಜಗತ್ತು ಕನ್ನಡ ನಾಡನ್ನು ಶತಮಾನಗಳಿಂದ ಬೆಳಗುತ್ತಲೇ ಬಂದಿದೆ ಹಾಗೂ ಸಾಹಿತ್ಯದ ಬೆಳವಣಿಗೆಯ ಜೊತೆಯಲ್ಲಿ ಸಮಾಜದ ಮೂಡನಂಬಿಕೆ ಕಂದಾಚಾರ, ನಿಯಮಗಳನ್ನು ಸರಿಪಡಿಸಿ ಸಮಸಮಾಜದ ಕನಸು ಕಂಡ ಕನಕದಾಸರ ಸಾಹಿತ್ಯ, ಜಾತಿ, ಮತ, ವರ್ಗ, ವರ್ಣಗಳಿಂದ ಮುಕ್ತವಾದ ನಿರ್ಮಾಣಕ್ಕೆ ಅವರ ಕೀರ್ತನ ಸಾಹಿತ್ಯ ಒತ್ತು ನೀಡಿತು ಎಂದ ಅವರು, ವಿಶ್ವಮಾನವ ಸಂದೇಶ ನೀಡಿದ ಕುವೆಂಪು ಕನ್ನಡ ಭಾಷೆಯನ್ನು ವಿಶ್ವಮಾನ್ಯಗೊಳಿಸಿ ಹಲವಾರು ಪ್ರಶಸ್ತಿಗಳನ್ನು ಕನ್ನಡದ ತಾಯಿಗೆ ಮುಡಿಸಿದ್ದಾರೆ, ಶಿವರಾಮಕಾರಂತರು, ದ.ರಾ.ಬೇಂದ್ರೆ, ಪಿ.ಲಂಕೇಶ್, ಪೂರ್ಣಚಂದ್ರ, ತೇಜಸ್ವಿ, ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಸಾ.ರಾ.ಅಬೂಬಕರ್, ಬಿ.ಎಂ.ಶ್ರೀಕಂಠಯ್ಯ, ತೀ.ನಂ.ಶ್ರೀಕಂಠಯ್ಯನಂತಹ ದಿಗ್ಗಜರು ಕನ್ನಡ ಸಾಹಿತ್ಯದ ಗೌರವವನ್ನು ಹೆಚ್ಚಿಸಿದ್ದಾರೆ ಎಂದರು.

 ಕಾರ್ಯಕ್ರಮದಲ್ಲಿ ಬಿಇಓ ಕಾತ್ಯಾಯಿನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಎನ್.ಇಂದಿರಮ್ಮ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ ಉಪಸ್ಥಿತರಿದ್ದರು.

(Visited 17 times, 1 visits today)

Related posts