ಕಸ ವಿಲೇವಾರಿ ಘಟಕದಿಂದ ತೀವ್ರ ಸಮಸ್ಯೆ ವಿರೋಧಿಸಿ ಸಾರ್ವಜನಿಕರ ಪ್ರತಿಭಟನೆ

ಗುಬ್ಬಿ :

      ಕಳೆದ ಐದು ವರ್ಷದಿಂದ ಕಸ ವಿಲೇವಾರಿ ಘಟಕದಿಂದ ತೀವ್ರ ಸಮಸ್ಯೆ ಉಂಟಾಗಿದ್ದು ಈ ಬಗ್ಗೆ ಸ್ಥಳೀಯ ಪಟ್ಟಣ ಪಂಚಾಯಿತಿ ಯಾವುದೇ ಪರಿಹಾರ ಕಂಡುಕೊಳ್ಳದೇ ಮಾರುತಿನಗರ ಬಡಾವಣೆಯ ನಿವಾಸಿಗಳಿಗೆ ಅನಾರೋಗ್ಯಕ್ಕೆ ತುತ್ತು ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಗ್ರಾಮಸ್ಥರು ಘಟಕದಲ್ಲಿ ಕೆಲಸ ಮಾಡಲು ಬಂದ ಜೆಸಿಬಿ ಯಂತ್ರವನ್ನು ತಡೆದು ಅಧಿಕಾರಿಗಳನ್ನು ಘೇರಾವ್ ಮಾಡಿ ಪ್ರತಿಭಟಿಸಿದ ಘಟನೆ ನಡೆಯಿತು.

      ಕಳೆದ 10 ವರ್ಷದ ಹಿಂದೆ ಕಸ ವಿಲೇವಾರಿ ಘಟಕವನ್ನು ಪಟ್ಟಣದ ಹೊರವಲಯದ ಮಾರುತಿನಗರ ಬಡಾವಣೆ ಸಮೀಪ ನಿರ್ಮಾಣ ಮಾಡಿದ ಪಟ್ಟಣ ಪಂಚಾಯಿತಿ ಕಸವನ್ನು ಈ ಸ್ಥಳದ 4 ಎಕರೆ ಪ್ರದೇಶದಲ್ಲೇ ಶೇಖರಿಸಲಾಯಿತು. ಈ ಕಸವನ್ನು ಯಾವುದೇ ರೀತಿ ಪರಿಷ್ಕರಿಸದೇ ಒಣ ಮತ್ತು ಹಸಿ ಕಸವನ್ನು ವಿಂಗಡಿಸದೇ ಎಲ್ಲಂದರಲ್ಲಿ ಕಸವನ್ನು ಬಿಸಾಡಲಾಗಿದೆ. ಈ ಜತೆಗೆ ಸತ್ತ ಜಾನುವಾರುಗಳ ಕಳೇಬರ, ಕೋಳಿ ತ್ಯಾಜ್ಯವನ್ನು ಸಹ ಇಲ್ಲಿ ಎಸೆಯಲಾಗಿದೆ. ತ್ಯಾಜ್ಯ ತಿನ್ನಲು ಬರುವ ನಾಯಿಗಳ ಹಿಂಡು ಕಸವನ್ನೇ ಕೆದಕಿ ದುರ್ವಾಸನೆಯನ್ನು ಹರಡುತ್ತಿದೆ. ಚೇಳೂರು ರಸ್ತೆಯ ಹಾದು ಹೋಗುವ ಸಂದರ್ಭದಲ್ಲಿ ಸುಮಾರು 500 ಮೀಟರ್ ಕಸದ ಕೆಟ್ಟ ವಾಸನೆ ಮೂಗಿಗೆ ಬಡಿಯುತ್ತದೆ. ಈ ಜತೆಗೆ ಮಾರುತಿನಗರ ಬಡಾವಣೆಯ ನಿವಾಸಿಗಳಲ್ಲಿ ಅನಾರೋಗ್ಯ ಕಾಣಿಸಿಕೊಂಡಿದೆ. ಕಸಕ್ಕೆ ಬೆಂಕಿ ಇಟ್ಟು ಮೂರ್ನಾಲ್ಕು ದಿನ ಹೊಗೆಯ ಜತೆ ಬುದುಕು ಸಾಗಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದ ಸ್ಥಳೀಯರು ಕಸವನ್ನು ಒಂದಡೆ ಸಂಗ್ರಹ ಮಾಡಲು ಬಂದ ಜೆಸಿಬಿ ಯಂತ್ರವನ್ನು ತಡೆದು ಘಟಕದ ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿದರು.

      ಧರಣಿ ನೇತೃತ್ವ ವಹಿಸಿದ್ದ ಗ್ರಾಪಂ ಸದಸ್ಯ ಯತೀಶ್ ಮಾತನಾಡಿ ಕಸ ವಿಲೇವಾರಿ ಘಟಕವನ್ನು ಜನರು ವಾಸಿಸುವ ಸ್ಥಳದಲ್ಲಿ ನಿರ್ಮಾಣ ಮಾಡಿ ಇಲ್ಲಿನ ಸುಮಾರು 80 ಕುಟುಂಬಕ್ಕೆ ತೀವ್ರ ಸಮಸ್ಯೆ ಉಂಟು ಮಾಡಿದ ಪಟ್ಟಣ ಪಂಚಾಯಿತಿ ಘಟಕಕ್ಕೆ ಕಸ ತರುವ ಕೆಲಸ ಮಾತ್ರ ಮಾಡಿದೆ. ಈ ಬಗ್ಗೆ ಕಳೆದ್ ಐದಾರು ವರ್ಷದಿಂದ ಹಲವು ಬಾರಿ ಧರಣಿ ನಡೆಸಲಾಗಿದೆ. ಮನವಿ ಸಲ್ಲಿಸಲಾಗಿದೆ. ಆದರೂ ಯಾವುದೇ ಕ್ರಮವಹಿಸದ ಪಪಂ ಸಿಬ್ಬಂದಿಗಳು ಘಟಕದಲ್ಲಿ ಯಾವ ಯೋಜನೆಯನ್ನೂ ಅಳವಡಿಸಿಲ್ಲ. ಕಸ ವಿಂಗಡಣೆ, ಸಂಸ್ಕರಣೆ, ಗೊಬ್ಬರ ತಯಾರಿಕೆಗೆ ಯಂತ್ರ ಅಳವಡಿಸಿ ಘಟಕವನ್ನು ಆಧುನಿಕವಾಗಿ ಮಾರ್ಪಡಿಸಲು ಸ್ವಚ್ಚ ಭಾರತ್ ಯೋಜನೆಯಿಂದ 2 ಕೋಟಿ ರೂಗಳು ಮಂಜೂರು ಮಾಡಲಾಗಿತ್ತು. ಆದರೆ ಯಾವುದೇ ಕೆಲಸ ಮಾಡದೇ ಈ 2 ಕೋಟಿ ರೂ ಅವ್ಯವಹಾರ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆಗೆ ಬರಲಿದ್ದಾರೆ ಎಂಬ ಕಾರಣಕ್ಕೆ ಮುಖ್ಯಾಧಿಕಾರಿಗಳು 10 ವರ್ಷದ ಕಸವನ್ನು ಒಮ್ಮೇಲೇ ಎತ್ತಿಸಿ ಗುಂಡಿಯಲ್ಲಿ ಮುಚ್ಚಿ ಘಟಕ ಸ್ವಚ್ಚತೆಗೆ ಮುಂದಾಗಿರುವುದು ಖಂಡನೀಯ. ಜಿಲ್ಲಾಧಿಕಾರಿಗಳ ಭೇಟಿ ನಂತರವೇ ಘಟಕ ಸ್ವಚ್ಚತೆ ನಡೆಸಲಿ. ಅಧಿಕಾರಿಗಳಿಗೆ ವಾಸ್ತವ ಸ್ಥಿತಿ ಅರಿವಾಗಲಿ ಎಂದು ಕಿಡಿಕಾರಿದರು.

      ಸ್ವಚ್ಚತೆಗೆ ಮುಂದಾದ ಮುಖ್ಯಾಧಿಕಾರಿ ನಾಗೇಂದ್ರ ಮತ್ತು ಆರೋಗ್ಯ ನಿರೀಕ್ಷಕಿ ವಿದ್ಯಾ ಅವರನ್ನು ಘೇರಾವ್ ಹಾಕಿ ಜೆಸಿಬಿ ಯಂತ್ರವನ್ನು ಘಟಕದಲ್ಲೇ ನಿಲ್ಲಿಸಿದ್ದ ಪ್ರತಿಭಟನಾಕಾರರು ಒಂದು ತಾಸು ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು. ನಂತರ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಎಂ.ಮಮತಾ ಘಟಕದೊಳಗಿನ ವಾಸ್ತವ ಸ್ಥಿತಿ ಅವಲೋಕಿಸಿದರು. ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿಗಳು ಕಸ ವಿಲೇವಾರಿಯಿಂದ ಆಗುತ್ತಿರುವ ತೊಂದರೆಗಳನ್ನು ಎಳೆ ಎಳೆಯಾಗಿ ವಿವರಿಸಿದರು. ದಿಢೀರ್ ಸ್ವಚ್ಚತೆಗೆ ಬಂದ ಅಧಿಕಾರಿಗಳ ವರ್ತನೆ, 2 ಕೋಟಿ ರೂಗಳ ಅವ್ಯವಹಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಕಳೆದ 10 ವರ್ಷದಿಂದ ಆದ ಸಮಸ್ಯೆ ಬಗ್ಗೆ ತಿಳಿಸಿದ ಬಿಜೆಪಿ ಮುಖಂಡರಾದ ಜಿ.ಎನ್.ಬೆಟ್ಟಸ್ವಾಮಿ ಮತ್ತು ಎಚ್.ಟಿ.ಭೈರಪ್ಪ ಘಟಕದ ಸುತ್ತಲಿನ ನಿವಾಸಿಗಳಲ್ಲಿ ಕಾಣಿಸಿಕೊಂಡ ರೋಗಗಳ ಬಗ್ಗೆ ಮಾಹಿತಿ ನೀಡಿದರು. 2 ಕೋಟಿ ರೂಗಳ ಅನುದಾನದ ಬಗ್ಗೆ, ಕಸಕ್ಕೆ ಬೆಂಕಿ ಇಡುವ ಬಗ್ಗೆ, ಕಾವಲುಗಾರರ ನೇಮಕದ ಬಗ್ಗೆ ವಿವರಿಸಿದರು.

      ಸ್ಥಳೀಯ ಲಕ್ಷ್ಮಮ್ಮ ಮಾತನಾಡಿ ಕಳೆದ 10 ವರ್ಷದಿಂದ 15 ಬಾರಿ ಮನವಿ ನೀಡಿದ್ದೇವೆ. ಬರೀ ಭರವಸೆಗಳನ್ನು ನೀಡಿ ಕಸವನ್ನು ಮತ್ತೇ ಅದೇ ರೀತಿ ಬಿಸಾಡಲಾಗಿದೆ. ಮಾರುತಿನಗರ ಬಡಾವಣೆ ಜತೆಗೆ ಪಕ್ಕದಲ್ಲೇ ಸಾಲುಮರದ ತಿಮ್ಮಕ್ಕ ಉದ್ಯಾನವನವಿದೆ. ಸಮೀಪದಲ್ಲೇ ಹೆದ್ದಾರಿ ರಸ್ತೆ ಹಾದು ಹೋಗಿದೆ. ಆದರೂ ಕೊಳೆತು ನಾರುವ ಕಸವನ್ನು ಯಂತ್ರದ ಮೂಲಕ ಈಗ ಎತ್ತಲು ಮುಂದಾಗಿದ್ದಾರೆ. ಬೆಳಿಗ್ಗೆಯಿಂದ ದುರ್ವಾಸನೆಯು ಸುತ್ತಲಿನ ಗ್ರಾಮಗಳಿಗೆ ಹರಿಡಿದೆ. ನಾಯಿಗಳು, ಹಸುಗಳ ಕಳೇಬರ ಮಾರಕ ರೋಗಗಳಿಗೆ ಮೂಲವಾಗಲಿದೆ. ಈ ಬಗ್ಗೆ ಕ್ರಮವಹಿಸದಿದ್ದರೇ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

      ಪ್ರತಿಭಟನಾಕಾರರ ದೂರಗಳನ್ನು ಆಲಿಸಿದ ತಹಸೀಲ್ದಾರ್ ಎಂ.ಮಮತಾ ಘಟಕದ ಅಭಿವೃದ್ದಿಗೆ ಬಂದ ಅನುದಾನ ಸೇರಿದಂತೆ ಘಟಕದ ಸ್ವಚ್ಚತೆ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲು ಒಂದು ವಾರದ ಕಾಲಾವಕಾಶ ಬೇಕಿದೆ. ಜಿಲ್ಲಾಢಳಿತದೊಂದಿಗೆ ಮಾತನಾಡಿ ಇಲ್ಲಿನ ಸಮಸ್ಯಗೆ ಶಾಶ್ವತ ಪರಿಹಾರ ಒದಗಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು.

      ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ವಿನಯ್, ಮುಖಂಡರಾದ ರವಿಕುಮಾರ್, ಸ್ವಾಮಿ, ನಾಗರಾಜು, ಸಾವಿತ್ರಮ್ಮ, ಪಪಂ ಸದಸ್ಯರಾದ ಜಿ.ಸಿ.ಕೃಷ್ಣಮೂರ್ತಿ, ಜಿ.ಎನ್.ಅಣ್ಣಪ್ಪಸ್ವಾಮಿ, ಶಶಿಕುಮಾರ್ ಇತರರು ಇದ್ದರು.

(Visited 22 times, 1 visits today)

Related posts

Leave a Comment