ತುಮಕೂರು: ಭಾರತೀಯ ಸಂಸ್ಕೃತಿಯಲ್ಲಿ ದೇವಸ್ಥಾನಗಳಿಗೆ ವಿಶೇಷ ಮಹತ್ವವಿದೆ. ದೇವಸ್ಥಾನಗಳಲ್ಲಿ ಮನುಷ್ಯ ಶಾಂತಿ, ನೆಮ್ಮದಿ ಪಡೆಯಬಹುದಾಗಿದೆ. ನಮ್ಮ ಇತಿಹಾಸ ಪ್ರಸಿದ್ಧ ದೇವಸ್ಥಾನಗಳನ್ನು ರಕ್ಷಿಸಿ ಜೀಣೋದ್ಧಾರ ಮಾಡಬೇಕು ಎಂದು ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ನಗರದ ಸಮೀಪದ ಗೂಳೂರಿನ ಉಮಾಮಹೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸ್ವಾಮೀಜಿ ಅಲ್ಲಿ ಪೂಜೆ ಸಲ್ಲಿಸಿ ಭಕ್ತರಿಂದ ಪಾದಪೂಜೆ ಸ್ವೀಕರಿಸಿ ಮಾತನಾಡಿ, ಒಂದು ಸಾವಿರಕ್ಕೂ ಹೆಚ್ಚು ವರ್ಷಗಳ ಹಿಂದಿನ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಶ್ರೇಷ್ಠ ಕೆತ್ತನೆಯ ಅಪರೂಪದ ಮೂರ್ತಿಗಳನ್ನು ಕಾಣಬಹುದು. ಗೂಳೂರಿನ ಗಣಪತಿ, ಕೈದಾಳದ ಚೆನ್ನಕೇಶವ ದೇವಸ್ಥಾನಗಳನ್ನು ಒಳಗೊಂಡ ಪ್ರಸಿದ್ಧ ಕ್ಷೇತ್ರ ಇದು. ಇಲ್ಲಿನ ಮಠ ಬೇಲಿಮಠಕ್ಕೆ ಸೇರಿದ್ದಾಗಿ ಹೇಳಲಾಗಿದೆ. ಗದ್ದಿಗೆಗಳು ಮಠದ ಪರಂಪರೆಗೆ ಸಾಕ್ಷಿಯಾಗಿವೆ ಎಂದು ಹೇಳಿದರು.
ನಮ್ಮ ಪೂರ್ವಜನರು ನಿರ್ಮಿಸಿರುವ ದೇವಸ್ಥಾನಗಳು ಅಳಿದುಹೋಗದಂತೆ ನಾವು ರಕ್ಷಣೆ ಮಾಡಬೇಕು. ಶಿಥಿಲಗೊಂಡ ದೇವಸ್ಥಾನವನ್ನು ಜೀಣೋದ್ಧಾರ ಮಾಡಿ, ಅಗತ್ಯ ಅಭಿವೃದ್ಧಿ ಕೆಲಸ ಮಾಡಲು ಉದ್ಯಮಿಗಳಾದ ಸ್ಫೂರ್ತಿ ಚಿದಾನಂದ್ ಹಾಗೂ ಕೃಷ್ಣಪ್ಪ ಅವರು ಆಸಕ್ತರಾಗಿರುವುದು ಶ್ಲಾಘನೀಯ. ಇತರ ಭಕ್ತರೂ ಈ ಕಾರ್ಯದಲ್ಲಿ ಕೈ ಜೊಡಿಸಬೇಕು ಎಂದು ಸ್ವಾಮೀಜಿ ಹೇಳಿದರು.
ಸ್ಫೂರ್ತಿ ಡೆವಲಪ್‌ನ ಎಸ್.ಪಿ.ಚಿದಾನಂದ್ ಮಾತನಾಡಿ, ಸಾವಿರ ವರ್ಷಗಳ ಹಿಂದೆ ರಾಜಮಹಾರಾಜರು ಕಟ್ಟಿಸಿದ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಪ್ಪು ಶಿಲೆಯಲ್ಲಿ ಕೆತ್ತನೆಯಲ್ಲಿ ನಂದಿ, ಈಶ್ವರ, ಪಾರ್ವತಿ ಹಾಗೂ ಬಾಲಗಣಪತಿ ಮೂರ್ತಿ ಅರಳಿವೆ. ಈ ಅಪರೂಪದ ದೇವಸ್ಥಾನವನ್ನು ಅಭಿವೃದ್ಧಿ ಇದಕ್ಕಾಗಿ ನೀಲಿ ನಕಾಶೆ ತಯಾರಿಸಿ ಸುಸಜ್ಜಿತವಾಗಿ ನಿರ್ಮಾಣ ಮಾಡಿ ಧಾರ್ಮಿಕ ಕ್ಷೇತ್ರವನ್ನಾಗಿ ರೂಪಿಸಬೇಕು ಎಂದು ಹೇಳಿದರು.
ಇಲ್ಲಿ ಪ್ರತಿ ವರ್ಷ ಸಂಕ್ರಾAತಿಯAದು ವಿಶೇಷ ಜಾತ್ರೆ ನಡೆಯುತ್ತದೆ. ಸಾವಿರಾರು ಜನ ಭಾಗವಹಿಸಿ ದೇವರಿಗೆ ಪೂಜೆ, ಹರಕೆ ಸಲ್ಲಿಸುತ್ತಾರೆ. ನಿಯಮಿತವಾಗಿ ಪೂಜಾಕೈಂಕರ್ಯಗಳು ನಡೆಯುತ್ತಿವೆ. ಈ ಧಾರ್ಮಿಕ ಪರಂಪರೆಯನ್ನು ಮುಂದವರೆಸಬೇಕು ಎಂದರು.
ಸಮಾಜ ಸೇವಕ ಕೊಪ್ಪಲ್ ನಾಗರಾಜು ಮಾತನಾಡಿ, ಸಾಮನ್ಯವಾಗಿ ದೇವಸ್ಥಾನಗಳಲ್ಲಿ ಈಶ್ವರನನ್ನು ಲಿಂಗ ರೂಪದಲ್ಲಿ ಕಾಣುತ್ತೇವೆ. ಆದರೆ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಾನವರೂಪಿ ಈಶ್ವರನು ನಿಂತಿರುವ ನಂದಿ ಮೇಲೆ ಕುಳಿತಿದ್ದಾನೆ, ಶಿವನ ತೊಡೆಯ ಮೇಲೆ ಪಾರ್ವತಿ ಕುಳಿತಿದ್ದಾಳೆ, ಆಕೆ ಅಂಗೈಯಲ್ಲಿ ಮಾನವ ಮುಖದ ಬಾಲಗಣಪತಿಯನ್ನು ಕೆತ್ತಲಾಗಿದೆ. ಇಷ್ಟೂ ಮೂರ್ತಿಗಳನ್ನು ಒಂದೇ ಕಲ್ಲಿನಲ್ಲಿ ಕೆತ್ತಲಾಗಿದೆ ಎಂಬುದು ಮತ್ತೊಂದು ವಿಶೇಷ ಎಂದರು.
ವೀರಶೈವ ಪರಂಪರೆಯಲ್ಲಿ ಗದ್ದಿಗೆಗೆ ಮಹತ್ವವಿದೆ. ಇಲ್ಲಿರುವ ಗದ್ದಿಗೆಗಳು ಮಠದ ಸ್ವಾಮೀಜಿಗಳ ಪರಂಪರೆಯನ್ನು ಹೇಳುತ್ತವೆ. ಶಿಥಿಲಗೊಂಡಿದ್ದ ಗದ್ದಿಗೆಗಳನ್ನು ದುರಸ್ಥಿ ಮಾಡಲಾಗಿದೆ. ಜೊತೆಗೆ ಭಕ್ತರರಿಗಾಗಿ ಕುಡಿಯುವ ನೀರು, ಆಸನ ಮತ್ತಿತರ ಸೌಕರ್ಯ ಒದಗಿಲಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ಅರ್ಚಕರಾದ ಶಾಂತಮೂರ್ತಿಯವರು ದೇವಸ್ಥಾನ ಹಾಗೂ ಇಲ್ಲಿದ್ದ ಮಠದ ಪರಂಪರೆಯನ್ನು ವಿವರಿಸಿದರು.
(Visited 1 times, 1 visits today)