ಕಾನ್ ಸ್ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆ : ನಾಳೆಯ ಪರೀಕ್ಷೆ ಮುಂದೂಡಿಕೆ

ಬೆಂಗಳೂರು:

      ನವೆಂಬರ್ 25ನೇ ತಾರೀಕು (ಭಾನುವಾರ) ನಿಗದಿಯಾಗಿದ್ದ ಸಿವಿಲ್ ಪೊಲೀಸ್ ಕಾನ್ ಸ್ಟೇಬಲ್ (2113 ಹುದ್ದೆಗಳು) ಹುದ್ದೆ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಆಗಿದ್ದರ ಬಗ್ಗೆ ರಾಜ್ಯದ ನಾನಾ ಭಾಗಗಳಿಂದ ದೂರುಗಳು ಬಂದಿದ್ದು, 116 ಅಭ್ಯರ್ಥಿಗಳು, ಆರೋಪಿ ಮತ್ತು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

      ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರ ಸಂತೆಯ ಕೊಠಡಿಯೊಂದರಲ್ಲಿ ಅಭ್ಯರ್ಥಿಗಳನ್ನೆಲ್ಲ ಒಟ್ಟಿಗೆ ಮಾಡಿಕೊಂಡು, ಪ್ರಶ್ನೆಪತ್ರಿಕೆ ಹಾಗೂ ಅದಕ್ಕೆ ಉತ್ತರ ಹೇಳಿಕೊಡಲು ಸಿದ್ಧತೆ ನಡೆಸಲಾಗಿತ್ತು. ಶಿವಕುಮಾರ್ ಹಾಗೂ ಬಸವರಾಜ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸುಳಿವು ಸಿಕ್ಕಿತ್ತು.

      ಆ ಮಾಹಿತಿ ಆಧರಿಸಿ ಎರಡು ತಂಡಗಳನ್ನು ರಚಿಸಿಕೊಂಡ ಸಿಸಿಬಿ ಪೊಲೀಸರು ಶನಿವಾರ ಬೆಳಗ್ಗೆ ದಾಳಿ ನಡೆಸಿದ್ದರು. ಈ ವೇಳೆ ಪ್ರಮುಖ ಆರೋಪಿ ಶಿವಕುಮಾರ್ ನನ್ನು ಬಂಧಿಸಲಾಗಿದೆ. ಪ್ರತಿ ಅಭ್ಯರ್ಥಿಯಿಂದ 6 ರಿಂದ 8 ಲಕ್ಷದವರೆಗೆ ಹಣ ಪಡೆದಿರುವುದಾಗಿಯೂ ಆತ ಒಪ್ಪಿಕೊಂಡಿದ್ದಾನೆ. ಈ ಕೃತ್ಯಕ್ಕಾಗಿ ಬೇರೆ ಬೇರೆ ವ್ಯಕ್ತಿಗಳ ಹೆಸರಿನ ದಾಖಲಾತಿಗಳನ್ನು ಬಳಸಿ, ಮೊಬೈಲ್ ಸಿಮ್ ಕಾರ್ಡ್ ಗಳನ್ನು ಪಡೆದಿರುವುದು ಗೊತ್ತಾಗಿದೆ.

      ಇದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿರುವುದು ಕೂಡ ತಿಳಿದು ಬಂದಿದೆ. ದಾಳಿ ವೇಳೆ ಬಸವರಾಜು ಎಂಬ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯ ಮುಂದುವರಿದಿದೆ. ಈ ಸಂಬಂಧ ಬೆಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಐಟಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ವಶಪಡಿಸಿಕೊಂಡ ಪ್ರಶ್ನೆ ಪತ್ರಿಕೆಯ ನೈಜತೆಯ ಬಗ್ಗೆ ಸಹ ತನಿಖೆ ಮುಂದುವರಿದಿದೆ.

(Visited 23 times, 1 visits today)

Related posts