ಕಾಮಗಾರಿ ಸ್ಥಳದಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದ ಇಂಜಿನಿಯರುಗಳ ಮೇಲೆ ಕಾನೂನು ಕ್ರಮ!

ತುಮಕೂರು :

      ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುತ್ತಿರುವ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳದ ಇಂಜಿನಿಯರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‌ಕುಮಾರ್ ಕಡಕ್ ಸೂಚನೆ ನೀಡಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜರುಗಿದ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಸಮನ್ವಯ ಸಮತಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು ರಿಂಗ್ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಪ್ರತಿ ದಿನ ಕನಿಷ್ಠ 10 ದೂರವಾಣಿ ಕರೆಗಳು ಬರುತ್ತಿದ್ದು, ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿವೆ. ಕಾಮಗಾರಿ ಪ್ರಗತಿಯಲ್ಲಿರುವ ಜಾಗದಲ್ಲಿ ಸೂಚನಾ ಫಲಕಗಳನ್ನು ಪ್ರದರ್ಶಿಸದಿರುವುದು ಅಪಘಾತಗಳಿಗೆ ಕಾರಣವಾಗಿವೆ. ಮಳೆ ಬಂದಿರುವುದರಿದ ರಸ್ತೆ ಯಾವುದು..? ಹಳ್ಳ ಯಾವುದು..? ಎಂದು ಗೊತ್ತಾಗದೆ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ವಾಹನಗಳು ಕೆಸರಿನಲ್ಲಿ ಹೂತುಕೊಂಡು ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ರಿಂಗ್ ರಸ್ತೆಯಲ್ಲಿ ಅಪಘಾತ ಪ್ರಕರಣಗಳು ಮರುಕಳಿಸಿದರೆ ಇಂಜಿನಿಯರುಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು. ನಿಯೋಜಿಸಿರುವ ಇಂಜಿನಿಯರುಗಳು ಗುತ್ತಿಗೆದಾರರ ಮೇಲೆ ನೆಪ ಹೇಳದೆ ಸ್ಥಳದಲ್ಲೇ ಇದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗದಂತೆ ಆದ್ಯತೆ ಮೇಲೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.

      ರಿಂಗ್ ರಸ್ತೆ ಕಾಮಗಾರಿ ಪ್ರಗತಿ ವಿಳಂಬವಾಗುತ್ತಿದ್ದು, ಅಗತ್ಯ ಕ್ರಮವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ|| ಶಾಲಿನಿ ರಜನೀಶ್ ಕಟ್ಟುನಿಟ್ಟಿನ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಯಾವುದೇ ನೆಪ ಕೇಳಲು ನಾನು ಸಿದ್ಧನಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿಸಿದ ಸಮನ್ವಯ ಇಲಾಖೆಗಳ ನಡುವೆ ಸಮನ್ವಯತೆ ಇಲ್ಲದಿರುವುದೇ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ಇನ್ನಾದರೂ ಯಾವುದೇ ನೆಪ ಹೇಳದೆ ಹಗಲಿರುಳು ಕೆಲಸ ಮಾಡಿ ನಗರದಲ್ಲಿ ಕೈಗೆತ್ತಿಕೊಂಡಿರುವ 15 ರಸ್ತೆ ಅಭಿವೃದ್ಧಿ ಕಾರ್ಯ, ಮತ್ತಿತರ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ನಿಗಧಿತ ಅವಧಿಯಲ್ಲಿ ಮುಗಿಸಬೇಕು ಎಂದು ತಿಳಿಸಿದರು.

      ರಿಂಗ್ ರಸ್ತೆಯಲ್ಲಿ ಕಾಮಗಾರಿಗೆ ಅಡ್ಡಿಯಾಗಿರುವ ವಿದ್ಯುತ್ ಕಂಬಗಳನ್ನು ಕೂಡಲೇ ಸ್ಥಳಾಂತರಿಸಬೇಕೆAದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದಾಗ ಬೆಸ್ಕಾಂ ಅಧಿಕಾರಿ ಗೋವಿಂದಪ್ಪ ಮಾತನಾಡಿ ಅರಣ್ಯ ಇಲಾಖೆಯವರು ರಿಂಗ್ ರಸ್ತೆಯಲ್ಲಿರುವ ಮರಗಳ ಅನವಶ್ಯಕ ಭಾಗಗಳನ್ನು ಕತ್ತರಿಸ(ಟ್ರಿಮ್ಮಿಂಗ್)ದೆ ಇರುವುದರಿಂದ ಕಂಬಗಳನ್ನು ಸ್ಥಳಾಂತರಿಸಲು ವಿಳಂಬವಾಗುತ್ತಿದೆ ಎಂದು ಸಭೆಗೆ ಕಾರಣ ನೀಡಿದರು. ಕೂಡಲೇ ಮರಗಳ ಟ್ರಿಮ್ಮಿಂಗ್ ಕೆಲಸ ಮಾಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್ ಅವರಿಗೆ ಡೀಸಿ ನಿರ್ದೇಶನ ನೀಡಿದರು.

      ಗುಬ್ಬಿ ಗೇಟ್ ಬಳಿ ಒಳಚರಂಡಿ ಮಾರ್ಗವು ರಸ್ತೆ ಮಧ್ಯದಲ್ಲಿ ಹಾದು ಹೋಗಿರುವುದರಿಂದ ಕೂಡಲೇ ಸ್ಥಳಾಂತರಿಸಿ ಶಾಶ್ವತ ಕಾಮಗಾರಿಯನ್ನು ಕೈಗೊಳ್ಳಬೇಕು ಎಂದು ತಿಳಿಸಿದರಲ್ಲದೆ ರಿಂಗ್ ರಸ್ತೆಯಲ್ಲಿ ಮನೆಗಳಿಗೆ ಗೃಹ ಬಳಕೆಗಾಗಿ ಗ್ಯಾಸ್ ಸಂಪರ್ಕ, ನೀರು ಸರಬರಾಜು ಸಂಪರ್ಕ ನೀಡುವುದು ಕೈಬಿಟ್ಟು ಹೋಗಿದ್ದರೆ ತಕ್ಷಣ ಕ್ರಮ ಕೈಗೊಂಡು ದೃಢೀಕರಣ ಪತ್ರ ಒದಗಿಸಬೇಕೆಂದು ಪಾಲಿಕೆ ಹಾಗೂ ಗ್ಯಾಸ್ ಏಜೆನ್ಸಿಗೆ ಸೂಚಿಸಿದರು.

      ಬಿ.ಹೆಚ್. ರಸ್ತೆಯ ಗುಬ್ಬಿಗೇಟ್, ಬಿ.ಜಿ. ಪಾಳ್ಯ ಹಾಗೂ ಹೊರಪೇಟೆ ಬಳಿ ಒತ್ತುವರಿ ಪ್ರಕರಣಗಳಿರುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಪಾಲಿಕೆ ಉಪಾಯುಕ್ತ ಯೋಗಾನಂದ ಸಭೆಯ ಗಮನಕ್ಕೆ ತಂದಾಗ ಇನ್ನೆರಡು ದಿನಗಳಲ್ಲಿ ಸರ್ವೆ ಕಾರ್ಯ ಕೈಗೊಂಡು ಒತ್ತುವರಿಯನ್ನು ತೆರುವುಗೊಳಿಸಬೇಕೆಂದು ಸರ್ವೆ ಅಧಿಕಾರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

      ರಸ್ತೆ ಕಾಮಗಾರಿಗಾಗಿ ಅಗೆದಿರುವ ಮಣ್ಣನ್ನು ಹಾಗೇ ಬಿಡದೆ ಕಾಮಗಾರಿ ಪೂರ್ಣಗೊಂಡ ಕೂಡಲೇ ಮಣ್ಣು ಕುಸಿಯದಂತೆ ಮುಚ್ಚಬೇಕು ಹಾಗೂ ಕಾಮಗಾರಿಯಿಂದ ಉತ್ಪತ್ತಿಯಾದ ತ್ಯಾಜ್ಯವನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದರಲ್ಲದೆ ಪ್ರತಿ ಮೂರು ಸ್ಮಾರ್ಟ್ ರಸ್ತೆಗೆ ಒಬ್ಬ ಇಂಜಿನಿಯರನ್ನು ನೇಮಿಸಿ ಕಾರ್ಯಾದೇಶ ನೀಡಿದ ಜಿಲ್ಲಾಧಿಕಾರಿಗಳು ಒಬ್ಬ ಇಂಜನಿಯರ್ ಒಂದು ರಸ್ತೆಯಲ್ಲಿ ಕನಿಷ್ಠ ಅರ್ಧ ದಿನ ಕಳೆದು ಕಾಮಗಾರಿ ಗುಣಮಟ್ಟದ ಬಗ್ಗೆ ಪರಿಶೀಲಿಸಿ ಮೇಲುಸ್ತುವಾರಿ ನಡೆಸಬೇಕೆಂದು ಸೂಚನೆ ನೀಡಿದರು.

      ನಗರದಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಅಮಾನಿಕೆರೆ, ಅಕ್ಕ-ತಂಗಿ ಕೆರೆ ಸೇರಿದಂತೆ ಮತ್ತಿತರ ಕೆರೆಗಳ ಮೂಲ ಸ್ವರೂಪ ಹಾಳಾಗದಂತೆ ಕಾಮಗಾರಿ ಕೈಗೊಳ್ಳಬೇಕು. ನಮ್ಮ ನಗರ ಎಂಬ ಅಭಿಮಾನದ ಮೇಲೆ ಎಲ್ಲ ಸಮನ್ವಯ ಇಲಾಖೆಗಳು ಜನರಿಗೆ ವಿಶ್ವಾಸ ಮೂಡುವಂತೆ ಸ್ಮಾರ್ಟ್ ಸಿಟಿ ಕಾಮಗಾರಿ ಕೈಗೊಳ್ಳಬೇಕು ಎಂದು ತಿಳಿಸಿದರು.

      ಸಭೆಯಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ಪ್ರಧಾನ ವ್ಯವಸ್ಥಾಪಕ ಪಿ.ಎನ್. ಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜೇಗೌಡ, ಮತ್ತಿತರ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 19 times, 1 visits today)

Related posts

Leave a Comment