ಕೃಷಿ ಚಟುವಟಿಕೆಗಳು ವಿನಾಶದ ಹಾದಿ ತಲುಪುತ್ತಿವೆ : ಬಿ.ಸಿ.ನಾಗೇಶ್

 ತಿಪಟೂರು :

      ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕೃಷಿ ಚಟುವಟಿಕೆಗಳು ಭಾರತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ವಿನಾಶದ ಹಾದಿ ತಲುಪುತ್ತಿರುವುದು ವಿಷಾಧನೀಯ ಎಂದು ಶಾಸಕ ಬಿ.ಸಿ.ನಾಗೇಶ್ ತಿಳಿಸಿದರು.

      ನಗರದ ಸಹಾಯಕ ಕೃಷಿ ಇಲಾಖೆಯ ಕಛೇರಿಯ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಐ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ ಕೊನೆಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆಯ ಉದ್ಘಾಟಿಸಿ ಮಾತನಾಡಿದ ಅವರು, ಮನುಷ್ಯನ ದುರಾಸೆಗೆ ಕೀಟ ನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚುತ್ತಿದ್ದು ಮಣ್ಣಿನ ಸಾರಾಂಶ ಕಡಿಮೆಯಾಗಿ ಫಲವತ್ತತೆ ಕಳೆದುಕೊಳ್ಳುತ್ತಿದೆ. ಹಿಂದೆ ಭೂಮಿಯಲ್ಲಿ ಬೇಕಾದ ಬೆಳೆಯನ್ನು ಬೆಳೆಯುವ ಕಾಲವಿತ್ತು. ಆದರೆ ಇಂದು ರಾಸಾಯನಿಕ ಗೊಬ್ಬರಗಳ ಸಿಂಪಡಣೆಯಿಂದ ಬೆಳೆದ ಬೆಳೆಗಳನ್ನು ತಿನ್ನುವಂತಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಗೊಬ್ಬರಗಳಿಂದ ಕೊಟ್ಯಾಂತರ ಕ್ರಿಮಿ, ಕೀಟಗಳು ನಶಿಸಿ ಹೋಗುತ್ತಿರುವುದರಿಂದ ಇಂದಿನ ದಿನಮಾನಗಳಲ್ಲಿ ಮಣ್ಣಿನ ಸಂರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕೆಂದರು.

      ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, ನಮ್ಮ ತಪ್ಪಿನಿಂದಾಗಿ ಇಂದು ಮಣ್ಣಿನ ಪರೀಕ್ಷೆಯನ್ನು ಮಾಡಿಸಿ ಬೆಳೆ ಬೆಳೆಯುವಂತಹ ಪರಿಸ್ಥಿತಿ ಎದುರಾಗಿದೆ. ಹಿಂದಿನ ನಮ್ಮ ಹಿರಿಯರು ಬೆಳೆಗಳಿಗೆ ಯಾವುದೇ ರಾಸಾಯನಿಕ ಗೊಬ್ಬರಗಳನ್ನು ಬಳಸದೆ ಬೆಳೆ ಬೆಳೆಯುತ್ತಿದ್ದರು. ನಾವು ಬೆಳೆಯುವ ಪ್ರತಿಯೊಂದು ಬೆಳೆಗೆ ಔಷಧಿಯನ್ನು ಸಿಂಪಡಿಸಿ ಭೂಮಿಯಲ್ಲಿರುವ ಸತ್ವವನ್ನು ಕಳೆದಿರುವುದರಿಂದ ಮಣ್ಣು ಪರೀಕ್ಷೆಯನ್ನು ಮಾಡಿಸುತ್ತಿರುವುದು ದುರ್ದೈವವಾಗಿದೆ ಎಂದರು.

      ಈ ಸಂದರ್ಭದಲ್ಲಿ ರೈತರಿಗೆ ಮಣ್ಣು ಪರೀಕ್ಷಾ ಕಾರ್ಡ್‍ಗಳನ್ನು ವಿತರಿಸಿದರು. ಅರ್ಹ ಫಲಾನುಭವಿಗಳಿಗೆ ಕೃಷಿ ಯಾಂತ್ರೀಕರಣ ಯೋಜನೆಯ ಅಡಿಯಲ್ಲಿ ಕೃಷಿ ಉಪಕರಣಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸದದ್ಯರಾದ ಮಮತಾಉಮೇಶ್, ಭಾಗ್ಯಮ್ಮಗೋವಿಂದಪ್ಪ, ಎಪಿಎಂಸಿ ನಿರ್ದೇಶಕ ತರಕಾರಿ ನಾಗರಾಜು, ಕೃಷಿಕ ಸಮಾಜದ ಅಧ್ಯಕ್ಷ ದೇವರಾಜು, ಜಿಲ್ಲಾ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ, ಸಹಾಯಕ ಕೃಷಿ ನಿರ್ದೇಶಕ ಬಿ.ಜೆ.ಜಯಪ್ಪ, ಸುಧಾಕರ್, ಕೆ.ವಿ.ಕೆ ಕೃಷಿ ವಿಜ್ಞಾನಿ ಡಾ.ಕೆ.ವಿ.ಶ್ರೀನಿವಾಸ್ ಮತ್ತಿತರರಿದ್ದರು.

(Visited 20 times, 1 visits today)

Related posts