ಗುಬ್ಬಿ : ಮನೆಗಳ ಕಾಂಪೌಂಡ್ ತೆರೆವು ಕಾನೂನು ಬದ್ಧ

ಗುಬ್ಬಿ : 

      ತಾಲ್ಲೂಕಿನ ಎಸ್.ಕೊಡಗೀಹಳ್ಳಿ ಪಂಚಾಯಿತಿ ವ್ಯಾಪ್ತಿಯ ಎಂ.ಎಸ್.ಪಾಳ್ಯ ಗ್ರಾಮದಲ್ಲಿ ರಸ್ತೆಯನ್ನೇ ಒತ್ತುವರಿ ಮಾಡಿದ್ದ ಮನೆಗಳ ಕಾಂಪೌಂಡ್ ತೆರೆವಿಗೆ ಕಾನೂನು ಬದ್ದ ಕ್ರಮವನ್ನು ಅನುಸರಿಸಲಾಗಿದೆ. ಅಕ್ರಮ ಕಾಂಪೌಂಡ್ ನಿರ್ಮಾಣ ಮಾಡಿದ್ದು ಅಲ್ಲದೇ ಅಧಿಕಾರಿಗಳ ಮೇಲೆ ಸಲ್ಲದ ಲಂಚ ಆರೋಪ ಮಾಡುವುದು ಸರಿಯಲ್ಲ ಎಂದು ಎಸ್.ಕೊಡಗೀಹಳ್ಳಿ ಗ್ರಾಪಂ ಅಧ್ಯಕ್ಷೆ ಗೀತಾ ಪ್ರತಾಪ್ ಸ್ಪಷ್ಟನೆ ನೀಡಿದರು.

      ತಾಲ್ಲೂಕಿನ ಎಸ್.ಕೊಡಗೀಹಳ್ಳಿ ಗ್ರಾಪಂ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಎಂ.ಎಸ್.ಪಾಳ್ಯದಲ್ಲಿ ರಸ್ತೆ ಅಭಿವೃದ್ದಿ ಮತ್ತು ಬಾಕ್ಸ್ ಚರಂಡಿಗೆ ಕಾಮಗಾರಿ ಆರಂಭಿಸಲಾಗಿತ್ತು. ಬಾಕ್ಸ್ ಚರಂಡಿ ನಿರ್ಮಾಣಕ್ಕೂ ಮುನ್ನ ಈ ಹಿಂದೆ ಇದ್ದ ಚರಂಡಿ ಗುರುತು ಮಾಡಿ ಕೆಲಸ ಮಾಡಲು ಸೂಚಿಸಲಾಗಿತ್ತು. ಆದರೆ ಈ ರಸ್ತೆಯಲ್ಲಿ ಮುಸ್ತಾಫ್ ಎಂಬುವವರ ಮನೆಯ ಕಾಂಪೌಂಡ್ ರಸ್ತೆಯನ್ನೇ ಆವರಿಸಿಕೊಂಡು ಅತಿಕ್ರಮಣವಾಗಿರುವುದು ತಿಳಿಯಿತು ಎಂದರು.

       ಅಕ್ರಮ ಕಾಂಪೌಂಡ್ ತೆರವಿಗೆ ಮನೆಯ ಮಾಲೀಕನಿಗೆ ತಿಳುವಳಿಕೆ ಪತ್ರ ನೀಡಲಾಯಿತು. ಮೂರು ಬಾರಿ ಕಾನೂನು ರೀತಿ ನೋಟೀಸ್ ಜಾರಿ ಮಾಡಿದರೂ, ನೋಟೀಸ್ ತಿರಸ್ಕರಿಸಿದ ಮನೆ ಮಾಲೀಕ ಅಭಿವೃದ್ದಿ ಕೆಲಸಕ್ಕೆ ಅಡ್ಡಿಯಾದರು. ಮುಂದುವರೆದು ಪೊಲೀಸ್ ಸಹಕಾರದಲ್ಲಿ ಕಾಂಪೌಂಡ್ ತೆರವುಗೊಳಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ನಿಯಮಾನುಸಾರ ಕೆಲಸ ಮಾಡಿದ್ದಕ್ಕೆ ಅವರ ಮೇಲೆ ಸಲ್ಲದ ಆರೋಪ ಮಾಡಿದ್ದಾರೆ. 50 ಸಾವಿರ ಲಂಚ ಬೇಡಿಕೆ ಇಟ್ಟರು ಎಂದು ಸುಳ್ಳು ಆರೋಪ ಮಾಡಿ ವಿನಾಕಾರಣ ಗ್ರಾಮದ ಅಭಿವೃದ್ದಿಗೆ ಮಾರಕವಾಗಿದ್ದಾರೆ. ಇಡೀ ಗ್ರಾಮವೇ ಒಂದು ನಿರ್ಧಾರಕ್ಕೆ ಬಂದರೇ ಮುಸ್ತಾಫ್ ಎಂಬುವಾತ ಮಾತ್ರ ಕೆಲಸಕ್ಕೆ ಮಾರಕವಾಗಿದ್ದಾರೆ ಎಂದು ಆರೋಪ ಮಾಡಿದರು.

      ಹೆಬ್ಬೂರು ಸಂಪರ್ಕಿಸುವ ಈ ರಸ್ತೆಯು ಎರಡು ಪಂಚಾಯಿತಿಗೆ ಒಳಪಡುತ್ತದೆ. ಒಂದು ಬದಿ ಎಸ್.ಕೊಡಗೀಹಳ್ಳಿ ಮತ್ತೊಂದು ಬದಿ ಕಣಕುಪ್ಪೆ ಗ್ರಾಮ ಪಂಚಾಯಿತಿಗೆ ಸೇರಿದ್ದಾಗಿದೆ. ಈ ನಿಟ್ಟಿನಲ್ಲಿ ಎರಡೂ ಪಂಚಾಯಿತಿ ಒಗ್ಗೂಡಿ ಅಭಿವೃದ್ದಿ ಮಾಡಲಾಗುತ್ತಿದೆ. ನಿತ್ಯ ಸಾವಿರಾರು ಮಂದಿಗೆ ಅನುಕೂಲವಾಗುವ ಈ ರಸ್ತೆ ಅಗಲೀಕರಣ ಹಾಗೂ ಬಾಕ್ಸ್ ಚರಂಡಿ ನಿರ್ಮಾಣ ಅಗತ್ಯವಿದೆ. ಎಂ.ಎಸ್.ಪಾಳ್ಯ ಗ್ರಾಮದ ಎಲ್ಲರೂ ಈ ರಸ್ತೆಯ ಅಭಿವೃದ್ದಿಗೆ ಸಹಕಾರ ನೀಡಿದ್ದಾರೆ. ರಸ್ತೆ ಬದಿಯಲ್ಲಿದ್ದ ಅಂಗಡಿಗಳು ತೆರವು ಮಾಡಿದ್ದಾರೆ. ಕೆಲವರು ಮನೆಯ ಮುಂಭಾಗದ ಮೆಟ್ಟಿಲು ತೆಗೆದಿದ್ದಾರೆ. ಆದರೆ ಅಕ್ರಮವಾಗಿ ಒತ್ತುವರಿ ಮಾಡಿದ್ದ ವ್ಯಕ್ತಿ ಮಾತ್ರ ಅಭಿವೃದ್ದಿಗೆ ಮಾರಕವಾಗಿದ್ದಾರೆ. ಈ ಬಗ್ಗೆ ಖುದ್ದು ಗ್ರಾಮಸ್ಥರೇ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ತೆರೆವು ಕಾರ್ಯ ನಡೆಸಿದ್ದೇವೆ ಎಂದು ಸಮರ್ಥಿಸಿಕೊಂಡರು.

     ಕಣಕುಪ್ಪೆ ಗ್ರಾಪಂ ಸದಸ್ಯ ಅಸ್ಗರ್ ಆಲಿ ಮಾತನಾಡಿ ಪಂಚಾಯಿತಿ ಅಧಿಕಾರಿ ಮೇಲೆ ಲಂಚ ಆರೋಪ ಮಾಡಿದ ವ್ಯಕ್ತಿಯ ಬಳಿ ಸಾಕ್ಷ್ಯಾಧಾರ ಇದ್ದರೆ ಪ್ರಸ್ತುತ ಪಡಿಸಲಿ. ವಿನಾಕಾರಣ ಅಧಿಕಾರಿಗಳ ಮೇಲೆ ಆರೋಪ ಮಾಡುವುದು ಶಿಕ್ಷಾರ್ಹವಾಗಿರುತ್ತದೆ. ಮನೆ ನಿರ್ಮಾಣಕ್ಕೆ ಪರವಾನಗಿ ನೀಡಿರುವ ಪಂಚಾಯಿತಿ ಕಾಂಪೌಂಡ್ ನಿರ್ಮಾಣವನ್ನು ಪ್ರಶ್ನಿಸಿದೆ. ಅತಿಕ್ರಮಣ ಮಾಡಿ ರಸ್ತೆಯ ಸ್ಥಳವನ್ನೇ ಒತ್ತುವರಿ ಮಾಡಿರುವ ಕಾರಣ ರಸ್ತೆ ಅಭಿವೃದ್ದಿಗೆ ಕಾಂಪೌಂಡ್ ತೆರವು ಕಾನೂನಾತ್ಮಕವಾಗಿ ನಡೆಸಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಗ್ರಾಪಮ ಸದಸ್ಯೆ ಪದ್ಮಾವತಿ ಕೃಷ್ಣಮೂರ್ತಿ, ಮುಖಂಡರಾದ ಪ್ರತಾಪ್, ಇಲಿಯಾಜ್‍ಖಾನ್, ಹಮಾನುಲ್ಲಾ, ಸಲಾಂಸಾಬ್, ಶಹನಾಜ್‍ಸಾಬ್, ಸಜದ್‍ಆಲಿ ಇತರರು ಇದ್ದರು.

(Visited 35 times, 1 visits today)

Related posts