ಗೋಡಂಬಿ ಬೆಳೆಯಲು ಜಿಲ್ಲೆಯ ವಾತಾವರಣ ಹೇಳಿ ಮಾಡಿಸಿದಂತಿದೆ – ಸಚಿವ

ತುಮಕೂರು :

      ಕಲ್ಪತರು ನಾಡಾಗಿದ್ದ ತುಮಕೂರು ಜಿಲ್ಲೆಗೆ ಕಳೆದ 2-3 ವರ್ಷಗಳಿಂದ ಸರಿಯಾಗಿ ಮಳೆ ಬಾರದೆ ಬರ ಪರಿಸ್ಥಿತಿಯನ್ನು ಎದುರಿಸುವ ಪರಿಸ್ಥಿತಿ ಉಂಟಾಗಿದ್ದು, ಈ ಭಾಗದ ಜನರು ಕೇವಲ ತೆಂಗು ಬೆಳೆಗೆ ಮಾತ್ರ ಜೋತುಬೀಳದೆ ಗೋಡಂಬಿ ಬೆಳೆ ಬೆಳೆಯಲು ಮುಂದಾಗಬೇಕು. ಜಿಲ್ಲೆಯ ವಾತಾವರಣ ಗೋಡಂಬಿ ಬೆಳೆಗೆ ಹೇಳಿಮಾಡಿಸಿದಂತಿದೆ ಎಂದು ಕಾನೂನು ಸಂಸದೀಯ ವ್ಯವಹಾರ ಮತ್ತು ಸಣ್ಣ ನೀರಾವರಿ ಹಾಗೂ ತುಮಕೂರು ಜಿಲ್ಲಾ ಉಸ್ತವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

        ಅವರು ಜ.31ರಂದು ಫಲಪುಷ್ಪ ಪ್ರದರ್ಶನವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಎಲ್ಲಾ ಕಲಾವಿದರಿಗಿಂತ ಶ್ರೇಷ್ಠ ಕಲಾಕಾರನೆಂದರೆ ನಮ್ಮ ಪ್ರಕೃತಿ. ಈ ಪ್ರಕೃತಿಯ ಕಲಾಕೃತಿಯ ಮುಂದೆ ನಾವೆಲ್ಲ ಮಾಡುವುದು ಕೃತಕ. ಆದರೆ ಈಗಿನ ಧಾವಂತ ಬದುಕಿನಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ನಮ್ಮ ಎಲ್ಲಾ ಜೀವನದ ಬದುಕಿನಲ್ಲಿ ರೂಢಿಸಿಕೊಂಡಾಗ ಮಾತ್ರ ನಾವು ಅಭಿವೃದ್ಧಿ ಹೊಂದಲು ಸಾಧ್ಯ. ಕೃಷಿಯ ಜೊತೆಗೆ ಎಲ್ಲಾ ಉಪಕಸುಬುಗಳನ್ನು ಮಾಡುವ ಮೂಲಕ ರೈತರು ತಮ್ಮ ಆದಾಯವನ್ನು ದ್ವಿಗುಣಗೊಳಿಸಿಕೊಳ್ಳಬಹುದಾಗಿದೆ.

      ತುಮಕೂರು ಜಿಲ್ಲೆಯಲ್ಲಿ ಪುಷ್ಪ ಕೃಷಿಗೆ ಹೇರಳವಾದ ಅವಕಾಶವಿದ್ದು, ಜಿಲ್ಲೆಯ ಕೃಷಿಕರು ಇಂತಹ ಫಲಪುಷ್ಪ ಪ್ರದರ್ಶನವನ್ನು ನೋಡುವ ಮೂಲಕ ಇಲ್ಲಿ ಕೊಡುವ ಸಲಹೆ, ಮಾರ್ಗದರ್ಶನ ಮತ್ತು ತಂತ್ರಜ್ಞಾನವನ್ನು ಪಡೆದು ಮನಸ್ಸು ಮಾಡಿದ್ದಲ್ಲಿ ಹೆಚ್ಚಿನ ಆದಾಯ ಗಳಿಸಬಹುದಾಗಿದೆ. ಜೇನುಕೃಷಿ ಒಂದು ಉದಯಿಸುತ್ತಿರುವ ಉದ್ಯಮವಾಗಿದ್ದು, ಇದರಿಂದ ಬಹಳಷ್ಟು ಅನುಕೂಲವಿದೆ. ಅದಕ್ಕೆ ಅನುಭವಿಗಳಿಂದ ಸಲಹೆ ಪಡೆದು ತಮ್ಮ ಅನುಭವವನ್ನು ಅದರಲ್ಲಿ ಮೇಳೈಸಿ, ನಾವು ಬೆಳೆದಿರುವ ಬೆಳೆಗಳನ್ನು ನಾವು ಸಹ ಉಪಯೋಗಿಸುವುದರಿಂದ ಜೀವನದಲ್ಲಿ ಖುಷಿಪಡಬಹುದು. ಅದರ ಜೊತೆಗೆ ನೀರಿನ ಮಿತ ಬಳಕೆಯ ಬಗ್ಗೆ ಗಮನ ಹರಿಸಿ ಜಿಲ್ಲೆಯಲ್ಲಿ ಹೂವು ತರಕಾರಿ ಮತ್ತು ಕೈತೋಟದ ಅಭಿವೃದ್ಧಿಗೆ ಕಾರ್ಯಪ್ರವೃತ್ತರಾಗಬೇಕೆಂದು ಕರೆ ನೀಡಿದರು.

      ಮಹಾಪೌರರಾದ ಶ್ರೀಮತಿ ಫರೀದಾ ಬೇಗಂ ಮಾತನಾಡಿ, ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಮಾದರಿ ಕೃಷಿಯ ಬಗ್ಗೆ ಮಾಹಿತಿ ಪಡೆದು ರೈತರು ಹೆಚ್ಚಿನ ಆದಾಯ ಗಳಿಸಬೇಕು. ಮಹಾಪೌರರಾಗಿ ಸೇವೆ ಮಾಡಲು ಅವಕಾಶ ನೀಡಿದ ನಗರದ ಎಲ್ಲಾ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಮತ್ತು ನನಗೆ ನೀಡಿದ ಜವಾಬ್ದಾರಿಯನ್ನು ಸ್ಪೂರ್ತಿದಾಯಕವಾಗಿ ನಿರ್ವಹಿಸುತ್ತೇನೆಂದು ಅವರು ಭರವಸೆ ನೀಡಿದರು.

       ಜಿಲ್ಲಾಧಿಕಾರಿ ಡಾ|| ಕೆ. ರಾಕೇಶ್‍ಕುಮಾರ್ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಫಲಪುಷ್ಪ ಪ್ರದರ್ಶನದಿಂದ ರೈತರಿಗೆ ಒಂದೇ ಸೂರಿನಡಿ ಹೆಚ್ಚು ಮಾಹಿತಿ ಸಿಗುವುದರ ಜೊತೆಗೆ ಇರುವ ಸಂಪನ್ಮೂಲದಲ್ಲೇ ಸರ್ಕಾರಿ ನೌಕರರು ಪಡೆಯುವ ವೇತನದ ಮಾದರಿಯಲ್ಲಿ ಆದಾಯ ಹೇಗೆ ಗಳಿಸಿಕೊಳ್ಳಬಹುದು, ಮತ್ತು ಅಣಬೆ, ಕುರಿ-ಮೇಕೆ ಸಾಕಾಣಿಕೆಯಿಂದ ಬರಪೀಡಿತ ಜಿಲ್ಲೆಯಲ್ಲೂ ಆದಾಯ ಗಳಿಸಬಹುದು ಎಂದು ಅರಿತುಕೊಳ್ಳಲು ಸಲಹೆ ನೀಡಿದರು.

      ಜಿಲ್ಲಾ ಪಂಚಾಯಿತಿ ಉಪಾಧ್ಯಾಕ್ಷರಾದ ಶಾರದ ಎನ್. ನರಸಿಂಹಮೂರ್ತಿ ಅವರು ಸಮಾರಂಭವನ್ನು ಉದ್ಧೇಶಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನ ವಂಶೀಕೃಷ್ಣ, ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ನವ್ಯಬಾಬು, ಲಕ್ಷ್ಮೀನರಸಿಂಹಗೌಡ, ತೋಟಗಾರಿಕಾ ಸಂಘದ ಉಪಾಧ್ಯಕ್ಷ ಕೃಷ್ಣಪ್ಪ, ತೋಟಗಾರಿಕಾ ಉಪ ನಿರ್ದೇಶಕರಾದ ಡಿ. ರಘು, ರೂಪ ಸೇರಿದಂತೆ ಉಪಸ್ಥಿತರಿದ್ದರು.

(Visited 18 times, 1 visits today)

Related posts

Leave a Comment