ಜನಸಂದಣಿ ಇಲ್ಲದಂತೆ ಸ್ವಾತಂತ್ರ್ಯ ದಿನಾಚರಣೆ – ಡಿಸಿ

ತುಮಕೂರು:

      ಕೊರೋನಾ ಮಧ್ಯೆ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯನ್ನು ಸರಳವಾಗಿ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ಡಾ: ಕೆ. ರಾಕೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

       ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕೋವಿಡ್-19ರ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಕೇಂದ್ರ ಸರ್ಕಾರ ಮಾರ್ಗ ಸೂಚಿಗಳನ್ನು ಹೊರಡಿಸಿದ್ದು, ಅದರಂತೆ ಸಾಮಾಜಿಕ ಅಂತರ

      ಜಿಲ್ಲಾ ಮಟ್ಟದ ಕಛೇರಿಯಿಂದ ಗ್ರಾಮಪಂಚಾಯತಿಯವರೆಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಕಡ್ಡಾಯವಾಗಿ ಆಚರಿಸಬೇಕು. ಜಿಲ್ಲಾ ಮಟ್ಟದಲ್ಲಿ ಪ್ರತಿವರ್ಷದಂತೆ ನಗರದ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಲಿದ್ದಾರೆ ಎಂದು ಅವರು ತಿಳಿಸಿದರು.
ಈ ಬಾರಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಸಂಜೆಯ ಕಾರ್ಯಕ್ರಮವಿರುವುದಿಲ್ಲ. 18 ವರ್ಷಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳ ಎನ್‍ಸಿಸಿ, ಸ್ಕೌಟ್ಸ್ ಹಾಗೂ ಪೊಲೀಸ್ ಕವಾಯಿತು ಇರುತ್ತದೆ ಎಂದು ಅವರು ತಿಳಿಸಿದರು.

     ಕಳೆದ ಬಾರಿಯಂತೆ ಈ ಬಾರಿಯೂ ಶಿವಕುಮಾರ್ ಸ್ವಾಮೀಜಿ ಸರ್ಕಲ್, ಟೌನ್‍ಹಾಲ್ ಸರ್ಕಲ್, ಡಿಸಿ ಕಛೇರಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ದೀಪಾಲಂಕಾರ ಮಾಡಬೇಕು. ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ವೇದಿಕೆ ನಿರ್ಮಾಣ, ಅಲಂಕಾರ, ಬ್ಯಾರಿಕೇಡ್‍ಗಳ ನಿರ್ಮಾಣವನ್ನು ಮಾಡುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದರು.  

      ವೈದ್ಯರು, ಸ್ಟಾಫ್‍ನರ್ಸ್, ಪೌರಕಾರ್ಮಿಕರು ಸೇರಿದಂತೆ ಕೊರೋನಾ ವಾರಿಯರ್ಸ್‍ಗಳನ್ನು ಈ ಬಾರಿ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಗೌರವಿಸಲಾಗುವುದು ಎಂದ ಅವರು, ಪ್ರತಿ ಸರ್ಕಾರಿ ಕಛೇರಿಯಲ್ಲಿ ಅಂದು ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿ, ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಸಮಾರಂಭದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅವರು ತಿಳಿಸಿದರು.

      ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮವನ್ನು ಸ್ಥಳೀಯ ಕೇಬಲ್, ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಕೈಗೊಳ್ಳಬೇಕು. ಅಲ್ಲದೆ ಜಿಲ್ಲೆಯ ಜನರು ಮನೆಯಲ್ಲಿಯೇ ಕುಳಿತು ಕಾರ್ಯಕ್ರಮ ವೀಕ್ಷಿಸುವ ಸೌಲಭ್ಯ ಕಲ್ಪಿಸಬೇಕು ಎಂದು ಸಂಬಂಧಿಸಿದವರಿಗೆ ಸೂಚಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತಿ ಸಿಇಓ ಶುಭಾ ಕಲ್ಯಾಣ್, ಡಿಜಿಟಲ್ ಪ್ಲಾಟ್‍ಫಾರಂ ಮೂಲಕ ಮಕ್ಕಳಿಗೆ ಕ್ವಿಜ್ ಮತ್ತಿತರ ಸ್ಪರ್ಧೆ/ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಶಿಕ್ಷಣ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೆ. ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ಅಜಯ್, ಪಾಲಿಕೆ ಆಯುಕ್ತೆ ರೇಣುಕಾ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 6 times, 1 visits today)

Related posts