ತುಮಕೂರು:

      ಪೌರಾಣಿಕ ನಾಟಕಗಳ ತವರೂರಾಗಿರುವ ತುಮಕೂರು ಜಿಲ್ಲೆಯಲ್ಲಿ ಕಲಾವಿದರಿಗೆ ಜನರು ಗೌರವ ನೀಡುತ್ತಾರೆ, ಸುದೀರ್ಘವಾಗಿ ನಾಟಕಗಳಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿರುವ ಕಲಾವಿದರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದು ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

      ನಗರದ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಹನುಮಜಯಂತಿ ಅಂಗವಾಗಿ ಕೋಟೇ ಆಂಜನೇಯಸ್ವಾಮಿ ಸೇವಾ ಸಮಿತಿ, ಕೆಂಪೇಗೌಡ ಕಲಾಸಮಿತಿ ಆಶ್ರಯದಲ್ಲಿ ಆಯೋಜಿಸಿದ್ದ ಸಂಪೂರ್ಣ ರಾಮಾಯಣ ನಾಟಕದಲ್ಲಿ ಹಿರಿಯ ಕಲಾವಿದ ್ಲ ಕೆ.ಎಚ್.ನಾಗರಾಜ್ À ಪತ್ನಿ ಹೇಮಾವತಿ, ಅವರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡಿ ಅವರು ಮಾತನಾಡಿದರು.

      ಕಲಾವಿದರಿಗೆ ಬೆಳ್ಳಿ ಕಿರೀಟ ಪ್ರದಾನ ಮಾಡುವುದೆಂದರೆ, ಗೌರವ ಡಾಕ್ಟರೇಟ್ ಪಡೆದಂತೆ, ಗೌರವ ಡಾಕ್ಟರೇಟ್ ಪಡೆಯಲು ಲಾಬಿ ನಡೆಸಬೇಕು ಆದರೆ, ನಾಟಕಗಳಲ್ಲಿ ಅವರು ಪೋಷಿಸಿರುವ ಪಾತ್ರಗಳು ಹಾಗೂ ಅವರ ಸುಧೀರ್ಘ ಸೇವೆಯನ್ನು ಗುರುತಿಸಿ, ಕಲಾವಿದರೆ ನೀಡುವ ಬೆಳ್ಳಿ ಕಿರೀಟ, ಗೌರವ ಡಾಕ್ಟರೇಟ್‍ಗೆ ಸಮವಾಗಿದೆ. ಪ್ರವೃತಿಯಲ್ಲಿ ರಂಗಭೂಮಿ ಸೇವೆಯನ್ನು ಸಲ್ಲಿಸಿರುವ ಕೆ.ಎಚ್.ನಾಗರಾಜ್ ಅವರ ಸೇವೆ ಗುರುತಿಸಿ ಬೆಳ್ಳಿಕಿರೀಟ ಪ್ರದಾನ ಮಾಡುತ್ತಿರುವುದು ಸಂತಸದ ವಿಷಯ ಎಂದು ಹೇಳಿದರು.

      ಜಿಲ್ಲೆಯಲ್ಲಿ ಪೌರಾಣಿಕ ನಾಟಕಗಳಿಗೆ ಇತಿಹಾಸವಿದ್ದು, ಪೌರಾಣಿಕ ನಾಟಕಗಳು ಪ್ರವೃತ್ತಿಯಾಗಿ ಬೆಳೆದಿದೆ, ಪ್ರತಿ ಕಲಾವಿದರ ಸೇವೆಯನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಬೇಕಾಗಿದೆ. ರಾಮಾಯಣ, ಮಹಾಭಾರತದ ದೇಶದ ಸಂಪನ್ಮೂಲ, ದೇಶವನ್ನು ಸುತ್ತಿ ಕೋಶವನ್ನು ಓದುವ ಬದಲಾಗಿ, ರಾಮಾಯಣ, ಮಹಾಭಾರತವನ್ನು ಓದಿದರೆ ಸಾಕು ಎಂದು ಹೇಳಿದರು.

      ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾತನಾಡಿ ಎಲ್ಲೆಡೆ ಹನುಮ ಜಯಂತಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದು, ನಾಗರಾಜು ಅವರ ಕಲಾಸೇವೆಯನ್ನು ಗುರುತಿಸಿ ಸನ್ಮಾನಿಸುತ್ತಿರುವುದು ಉತ್ತಮ ಕೆಲಸ ಎಂದ ಅವರು, ಪುರಾತನ ಇತಿಹಾಸವಿರು ನಾಟಕ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಮುಂದುವರೆಸಬೇಕಾದ ಜವಾಬ್ದಾರಿ ಯುವ ಜನರ ಮೇಲಿದೆ, ನಾಟಕ ಜೀವಂತ ಕಲೆ ಎಂದು ಅಭಿಪ್ರಾಯಪಟ್ಟರು.

      ಬೆಳ್ಳಿಕಿರೀಟ ಸ್ವೀಕರಿಸಿ ಮಾತನಾಡಿದ ಕೆ.ಎಚ್.ನಾಗರಾಜು ಅವರು, ಧಾರವಾಹಿ ಹಾಗೂ ಸಾಮಾಜಿಕ ಜಾಲತಾಣಗಳ ಮೋಜಿನಲ್ಲಿ ಯುವ ಜನರು ಸಾಂಪ್ರದಾಯಿಕ ಕಲೆಗಳನ್ನು ಕಡೆಗಣನೆ ಮಾಡುತ್ತಿದ್ದು, ಪೌರಾಣಿಕ ನಾಟಕಗಳನ್ನು ಕಲೆ ಪ್ರೋತ್ಸಾಹಿಸುವ ಮೂಲಕ ಬೆಳೆಸಬೇಕಾದ ಹೊಣೆಗಾರಿಕೆ ಯುವ ಜನರ ಮೇಲಿದೆ ಎಂದರು.

      ಕೋಟೆ ಆಂಜನೇಯಸ್ವಾಮಿ ಸೇವ ಸಮಿತಿ ಅಧ್ಯಕ್ಷ ಸಿವಿ ಮಹಾದೇವಯ್ಯ ಮಾತನಾಡಿ, ಜಿಲ್ಲೆಗೆ ಪೌರಾಣಿಕ ನಾಟಕಗಳ ಇತಿಹಾಸವಿದೆ, ರಂಗಭೂಮಿಗೆ ಗಣನೀಯ ಸೇವೆ ಸಲ್ಲಿಸಿದ ಗುಬ್ಬಿ ವೀರಣ್ಣ, ಹಿರಣಯ್ಯ, ಬೆಳ್ಳಾವೆ ನರಹರಿಶಾಸ್ತ್ರಿ ಅವರಂತ ಘಟಾನುಘಟಿ ದಿಗ್ಗಜರು ಜಿಲ್ಲೆಯ ರಂಗಭೂಮಿ ಚರಿತ್ರೆಯನ್ನು ಬೆಳೆಸಿದವರು ಎಂದು ಹೇಳಿದರು.

      ಕಾರ್ಯಕ್ರಮದಲಿ ಕೆಂಪೇಗೌಡ ಕಲಾಸಂಘದ ಅಧ್ಯಕ್ಷ ವೈ.ಎನ್.ಶಿವಣ್ಣ, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಡಿ.ಶಿವಮಹದೇವಯ್ಯ, ಪಾಲಿಕೆ ಸದಸ್ಯ ಟಿ.ಎಂ.ಮಹೇಶ್, ತು.ಬಿ.ಮಲ್ಲೇಶ್, ಯೋಗಾನಂದ್, ಸಂಗೀತ ನಿರ್ದೇಶಕ ತಿಮ್ಮಗಿರಿ ಗೌಡಯ್ಯ, ಡಿ.ಕಲ್ಕೆರೆ ನರಸಿಂಹಮೂರ್ತಿ, ಮಲ್ಲಿಕಣ್ಣ, ರಂಗಪ್ಪ, ನಂಜಪ್ಪಶೆಟ್ಟಿ, ಎಂ.ವಿ.ನಾಗಣ್ಣ, ಮೋಹನ್, ರಾಮಣ್ಣ ಇತರರು ಉಪಸ್ಥಿತರಿದ್ದರು.

(Visited 63 times, 1 visits today)