ತುಮಕೂರು :

      ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಮತದಾನದ ಅರಿವು ಕುರಿತು ಜಿಲ್ಲೆಯಲ್ಲಿ ಕೈಗೊಂಡಿರುವ ಸ್ವೀಪ್ ಕಾರ್ಯಕ್ರಮಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿ ಕಚೇರಿಯ ರಾಜ್ಯಮಟ್ಟದ ಸ್ವೀಪ್ ಸಂಚಾಲಕರಾದ ಪಿ.ಎಸ್.ವಸ್ತ್ರದ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

      ಜಿಲ್ಲಾ ಪಂಚಾಯತ್ ಕಚೇರಿಯಲ್ಲಿರುವ ಮಿನಿ ಸಭಾಂಗಣದಲ್ಲಿಂದು ನಡೆದ ಸಭೆಯ ಅಧ್ಯಕ್ಷತೆವಹಿಸಿ ಜಿಲ್ಲೆಯಲ್ಲಿ ಕೈಗೊಂಡಿರುವ ಸ್ವೀಪ್ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿದರು.

       ಲೋಕಸಭಾ ಸಾರ್ವತ್ರಿಕ-2019ರ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ವಿಭಿನ್ನ ರೀತಿಯ ಪ್ರಚಾರ ಕಾರ್ಯಕ್ರಮಗಳು ರಾಜ್ಯಕ್ಕೆ ಮಾದರಿಯಾಗಿವೆ. ಈ ರೀತಿಯ ಸ್ವೀಪ್ ಕಾರ್ಯದಿಂದಾಗಿ ಜಿಲ್ಲೆಯಲ್ಲಿ ಉತ್ತಮ ರೀತಿಯಲ್ಲಿ ಮತದಾನವಾಗಿದೆ ಎಂದು ಅವರು ತಿಳಿಸಿದರು.

      ಜಿಲ್ಲೆಯಲ್ಲಿ 1-1-2020ಕ್ಕೆ 18 ವರ್ಷ ತುಂಬಿರುವವರು ಮತದಾರರ ಪಟ್ಟಿಗೆ ಕಡ್ಡಾಯವಾಗಿ ತಮ್ಮ ಹೆಸರನ್ನು ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಯುವ ಮತದಾರರನ್ನು ನೋಂದಾಯಿಸುವಲ್ಲಿ ಪಿಯುಸಿ, ಪ್ರಥಮದರ್ಜೆ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳ ಪಾತ್ರ ಅತಿ ದೊಡ್ಡದು. ಈಗಾಗಲೇ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಕಡ್ಡಾಯವಾಗಿ ಮತದಾರರ ಪಟ್ಟಿಗೆ ನೋಂದಾಯಿಸಲು ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಅವರು ಸೂಚಿಸಿದರು.

      ಶಾಲಾ ಮಕ್ಕಳಿಗೆ ಚುನಾವಣಾ ಮತದಾರರ ನೋಂದಣಿ ಹಾಗೂ ಚುನಾವಣಾ ಮತದಾನದ ಮಹತ್ವದ ಬಗ್ಗೆ ನಾಟಕ ಸ್ಪರ್ಧೆಗಳನ್ನು ಏರ್ಪಡಿಸಲು ಹೆಚ್ಚಿನ ಒತ್ತು ನೀಡಬೇಕು ಎಂದರು.

      ಜಿಲ್ಲೆಯಲ್ಲಿ ಸುಮಾರು 22 ಲಕ್ಷ ಮತದಾರರಿದ್ದಾರೆ. ಜಿಲ್ಲೆಯು ವಿಕಲಚೇತನ ಮತದಾರರ ಸಂಖ್ಯೆಯು ಹೆಚ್ಚು ಹೊಂದಿದೆ. ಕಳೆದ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಮತದಾನದ ಬಗ್ಗೆ ವ್ಯಾಪಕ ಅರಿವಿನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಕೈಗೊಳ್ಳಲಾಗಿದ್ದು, ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪಕಾರ್ಯದರ್ಶಿಗಳಾದ ಕೃಷ್ಣಮೂರ್ತಿ, ರಮೇಶ್, ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಜಾವೇದ್‍ಕರಂಗಿ ಮತ್ತಿತರರು ಹಾಜರಿದ್ದರು.

(Visited 6 times, 1 visits today)