ತುಮಕೂರು : ತಾತ್ಕಾಲಿಕ ಬಸ್ ನಿಲ್ದಾಣ

ತುಮಕೂರು :

      ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ನಿಗಮದ ತುಮಕೂರು ಬಸ್‍ನಿಲ್ದಾಣವನ್ನು ಹೈಟೆಕ್ ಬಸ್‍ನಿಲ್ದಾಣವನ್ನಾಗಿ ಮಾರ್ಪಾಡು ಮಾಡುವ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಹಾಲಿ ಇರುವ ಬಸ್‍ನಿಲ್ದಾಣವನ್ನು ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ತುಮಕೂರು ಘಟಕ-1ರ ಸ್ಥಳಕ್ಕೆ ತಾತ್ಕಾಲಿಕವಾಗಿ ಸ್ಥಳಾಂತರಗೊಳಿಸಲಾಗಿದ್ದು ಈ ಸಂಚಾರ ವ್ಯವಸ್ಥೆಗೆ ಸಾರ್ವಜನಿಕರು ಹೊಂದಿಕೊಂಡು ಸಹಕರಿಸಬೇಕೆಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಅವರು ಮನವಿ ಮಾಡಿದರು.

ಕಾರ್ಯಾಚರಣೆ ಮಾಡಲಿರುವ ತಾತ್ಕಾಲಿಕ ಬಸ್ ನಿಲ್ದಾಣಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ಅಶೋಕ ರಸ್ತೆಯಲ್ಲಿರುವ ಹಳೆಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಭಾಗದಲ್ಲಿ ನೂತನ ಅತ್ಯಾಧುನಿಕ ಬಸ್‍ನಿಲ್ದಾಣ ನಿರ್ಮಿಸಲು ಸುಮಾರು 82 ಕೋಟಿ ರೂ.ಗಳ ಕಾಮಗಾರಿ ಕೆಲಸಗಳನ್ನು ಪ್ರಾರಂಭಿಸಲಾಗಿದ್ದು ಸುಮಾರು ಒಂದೂವರೆಯಿಂದ ಎರಡು ವರ್ಷಗಳಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಅದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಬಸವೇಶ್ವರ ರಸ್ತೆಯಲ್ಲಿರುವ ನಿಗಮದ ತುಮಕೂರು ಘಟಕ-1ರ ಸ್ಥಳಕ್ಕೆ ಸ್ಥಳಾಂತರಗೊಳಿಸಿದ್ದು, ಪ್ರಯಾಣಿಕರಿಗೆ ಯಾವುದೇ ವ್ಯತ್ಯಯವಾಗದಂತೆ ವಿಶಾಲವಾಗಿರುವ ತಾತ್ಕಾಲಿಕವಾಗಿ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದರು.

     ತಾತ್ಕಾಲಿಕ ಬಸ್ ನಿಲ್ದಾಣದ ಸ್ಥಳಾಂತರದ ಬಗ್ಗೆ ಸಾರ್ವಜನಿಕರಿಗೆ ಈಗಾಗಲೇ ಪತ್ರಿಕೆಗಳ ಮೂಲಕ ತಿಳಿಸಲಾಗಿದ್ದು, ಆದಾಗ್ಯೂ ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಇಂದು ಅನೌಪಚಾರಿಕವಾಗಿ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಅಲ್ಲದೇ ತುಮಕೂರು ಘಟಕದಿಂದ ತುಮಕೂರು-ತಿರುಪತಿ, ತುಮಕೂರು-ಮಧುರೈ, ತುಮಕೂರು-ತಿಪಟೂರು, ಹೊಸದುರ್ಗ-ಬೆಂಗಳೂರು ಮಾರ್ಗವಾಗಿ ಚಲಿಸುವ 4 ಹೊಸ ಬಸ್‍ಗಳನ್ನು ಕೂಡ ಇಂದು ಲೋಕಾರ್ಪಣೆ ಮಾಡಲಾಗಿದೆ ಎಂದರು.

    ತಾತ್ಕಾಲಿಕ ಬಸ್ ನಿಲ್ದಾಣದಿಂದ ಹೊರಡುವ ವಾಹನಗಳ ಸಂಚಾರ ದಟ್ಟಣೆಯನ್ನು ತಪ್ಪಿಸುವ ಸಲುವಾಗಿ ವಾಹನ ಸಂಚಾರದಲ್ಲಿ ಕೂಡ ಬದಲಾವಣೆ ಆಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದರು.

     ಈ ಸಂದರ್ಭದಲ್ಲಿ ಪಾಲಿಕೆಯ ಮೇಯರ್ ಲಲಿತ ರವೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ. ಭೂಬಾಲನ್, ಕೆಎಸ್‍ಆರ್‍ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಗಜೇಂದ್ರ ಕುಮಾರ್, ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಅಧಿಕಾರಿಗಳು, ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

(Visited 19 times, 1 visits today)

Related posts

Leave a Comment