ತುಮಕೂರು : ಪಿಜಿಗಳು ಪಾಲಿಕೆ ಪರವಾನಿಗೆ ಅವಶ್ಯಕ – ಗಿರಿಜಾ ಧನಿಯಾಕುಮಾರ್

ತುಮಕೂರು:

      ವಾರ್ಡ್‍ನಂ-15ರಲ್ಲಿರುವ ವಸತಿಸಂಸ್ಥೆ(ಪಿಜಿ) ಹಾಸ್ಟೆಲ್‍ಗಳನ್ನು ನಡೆಸಲು ಪಾಲಿಕೆಯಿಂದ ಅಧಿಕೃತವಾಗಿ ಪರವಾನಿಗೆ ಪಡೆಯಬೇಕು ಹಾಗೂ ಕಮರ್ಷಿಯಲ್ ಆಗಿ ಬದಲಾಯಿಸಿಕೊಳ್ಳಬೇಕು ಎಂದು ಪಾಲಿಕೆ ಸದಸ್ಯೆ ಗಿರಿಜಾಧನಿಯಾಕುಮಾರ್ ತಿಳಿಸಿದ್ದಾರೆ.

      ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ನೇ ವಾರ್ಡ್ ವ್ಯಾಪ್ತಿಯಲ್ಲಿರುವ ರೈಲ್ವೆ ನಿಲ್ದಾಣದ ಬಳಿ ಆಟೋ ನಿಲ್ದಾಣದಿಂದ ಟ್ರಾಫಿಕ್ ಸಮಸ್ಯೆಯಾಗುತ್ತಿದ್ದು, ಪ್ರತಿದಿನ 25 ಸಾವಿರಕ್ಕೂ ಹೆಚ್ಚು ಮಂದಿ ಓಡಾಟ ಮಾಡುತ್ತಿದ್ದು, ಆಟೋಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡುತ್ತಿರುವುದರಿಂದ ಸಂಚಾರ ದಟ್ಟಣೆಯಾಗುತ್ತಿದ್ದು, ಟ್ರಾಫಿಕ್ ಪೊಲೀಸರು ಇಲ್ಲಿ ಕಾರ್ಯನಿರ್ವಹಿಸಬೇಕು ಹಾಗೂ ಸ್ಮಾರ್ಟ್‍ಸಿಟಿ ಅಡಿಯಲ್ಲಿ ಸ್ಮಾರ್ಟ್ ಆಟೋ ನಿಲ್ದಾಣವನ್ನು ಮಾಡಬೇಕು ಎಂದು ಒತ್ತಾಯಿಸಿದರು.

       ಗಾಂಧಿನಗರದಲ್ಲಿರುವ ಟ್ಯಾಕ್ಸಿ ಹಾಗೂ ಟಿಟಿ ವಾಹನಗಳ ನಿಲ್ದಾಣವನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಸಾರ್ವಜನಿಕರು ದೂರು ನೀಡುತ್ತಿದ್ದು, ಪಾಲಿಕೆ ಟ್ಯಾಕ್ಸಿ ಹಾಗೂ ಟಿಟಿ ವಾಹನ ನಿಲ್ದಾಣಕ್ಕೆ ಪಾಲಿಕೆ ಜಾಗ ಗುರುತಿಸಬೇಕು ಎಂದು ವಾರ್ಡ್ ವ್ಯಾಪ್ತಿಯಲ್ಲಿರುವ ಪಿಜಿಗಳಿಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕು ಹಾಗೂ ಸ್ವಚ್ಛತೆಯನ್ನು ಕಾಪಾಡಬೇಕು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

      ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ವಾರ್ಡ್ ವ್ಯಾಪ್ತಿಯಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ತೆರವಿಗೆ ಅನುವು ಮಾಡಿಕೊಡಬೇಕು, ಜಿಲ್ಲಾಡಳಿತ ತೆಗೆದುಕೊಳ್ಳುವ ಕ್ರಮಕ್ಕೆ ಜನರು ಸಹಕಾರ ನೀಡಬೇಕು ಎಂದು ಮನವಿ ಮಾಡಿದ ಅವರು, ರೈಲ್ವೆ ನಿಲ್ದಾಣ ರಸ್ತೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ, ರಸ್ತೆಯ ಬದಿ ವ್ಯಾಪಾರಿಗಳು ಸ್ವಚ್ಛತೆಯನ್ನು ಕಾಪಾಡಬೇಕು, ಸ್ವಚ್ಛತೆಯನ್ನು ಕಾಪಾಡದಿದ್ದರೆ ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.

      ವಾರ್ಡ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ 24*7 ನೀರು ಪೂರೈಕೆ ಕಾಮಗಾರಿ ಗಾಂಧೀನಗರ, ಸಿಎಸ್‍ಐ ಲೇಔಟ್‍ನಲ್ಲಿ ಹದಿನೈದು ದಿನದಲ್ಲಿ ಪೂರ್ಣಗೊಳ್ಳಲಿದ್ದು, ಸೋಮೇಶ್ವರದಲ್ಲಿ ಇನ್ನು ಐವತ್ತು ದಿನದಲ್ಲಿ ಕೆಲಸ ಪೂರ್ಣಗೊಳ್ಳಲಿದ್ದು, ಸಾರ್ವಜನಿಕರು ಸಹಕಾರ ನೀಡಬೇಕು ಎಂದರು, ಗ್ಯಾಸ್ ಸಂಪರ್ಕ ಕಾಮಗಾರಿ ಸೋಮೇಶ್ವರದಲ್ಲಿ ಪೂರ್ಣಗೊಂಡಿದ್ದು, ಸಿಎಸ್‍ಐ ಲೇಔಟ್‍ನಲ್ಲಿ ಕೆಲವೇ ದಿನದಲ್ಲಿ ಪೂರ್ಣಗೊಳ್ಳಲಿದೆ ಎಂದರು.

      ಸ್ಮಾರ್ಟ್‍ಸಿಟಿ ಕಾಮಗಾರಿ ಹಿನ್ನೆಲೆಯಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ನೀರು, ಯುಜಿಡಿ ಪೈಪ್‍ಲೈನ್ ಹಾಳಾಗುತ್ತಿರುವುದರಿಂದ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು, ವಾರ್ಡ್‍ನ ಜನರು ಸಹಕಾರ ನೀಡಬೇಕು ಹಾಗೂ ನೀರನ್ನು ಮಿತವಾಗಿ ಬಳಸಬೇಕು ಎಂದು ಸಾರ್ವಜನಿಕರಲ್ಲಿ ಪಾಲಿಕೆ ಸದಸ್ಯೆ ಗಿರಿಜಾ ಧನಿಯಾಕುಮಾರ್ ಮನವಿ ಮಾಡಿದರು.

(Visited 9 times, 1 visits today)

Related posts