ತುಮಕೂರು ವಿಶ್ವವಿದ್ಯಾನಿಲಯದಲ್ಲಿ ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಒತ್ತಾಯ

ಚಿಕ್ಕನಾಯಕನಹಳ್ಳಿ :

      ತುಮಕೂರು ವಿಶ್ವವಿದ್ಯಾನಿಲಯದಲ್ಲಿ ತೀ.ನಂ.ಶ್ರೀ ಅಧ್ಯಯನ ಕೇಂದ್ರ ಸ್ಥಾಪಿಸುವಂತೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದರು.
      ಪಟ್ಟಣದಲ್ಲಿ ತೀ.ನಂ.ಶ್ರೀ 113ನೇ ಜನ್ಮದಿನಾಚರಣೆ ಅಂಗವಾಗಿ ಆಚಾರ್ಯ ತೀ.ನಂ.ಶ್ರೀಕಂಠಯ್ಯನವರ ಪುಸ್ತಕ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ತೀ.ನಂ.ಶ್ರೀ ಗುರು ಪರಂಪರೆಯಲ್ಲಿ ಅದ್ವಿತೀಯ ನಾಯಕ ಹಾಗೂ ಚಿಂತಕ, ವಿದ್ವತ್ ಹಾಗೂ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಸಮಕಾಲೀನ ವಿದ್ವಾಂಸರೊಂದಿಗೆ ವಿನಯತೆಯನ್ನು ಸಾರಿದ ವ್ಯಕ್ತಿ, ತೀ.ನಂ.ಶ್ರೀಯವರ ಕಾವ್ಯಮೀಮಾಂಸೆ ಸಾಹಿತ್ಯದ ಅಧ್ಯಯನಕ್ಕೆ ಭದ್ರ ಬುನಾದಿ ಹಾಕಿದೆ, ಬಿ.ಎಲ್.ಎನ್.ಎನ್, ಬಿ.ಎಂ.ಶ್ರೀ ಮುಂತಾದವರ ಸಾಲಿನಲ್ಲಿ ತೀ.ನಂ.ಶ್ರೀಯವರ ಕಾವ್ಯ ಹೆಚ್ಚು ವಿಶಿಷ್ಠತೆಯನ್ನು ಮೆರೆದಿದೆ.

      ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳ ನಡುವೆ ತೀ.ನಂ.ಶ್ರೀಯವರ ವ್ಯಕ್ತಿತ್ವ ಇಂದಿನ ಯುವ ಪೀಳಿಗೆಗೆ ಆದರ್ಶ, ತಾಲ್ಲೂಕಿನಲ್ಲಿ ನಿರ್ಮಾಣವಾಗಿರುವ ತೀ.ನಂ.ಶ್ರೀ ಭವನ ಒಂದು ಸಾಂಸ್ಕøತಿಕ ಚಟುವಟಿಕೆಗಳ ಕೇಂದ್ರವಾಗಲಿ, ಶೈಕ್ಷಣಿಕವಾಗಿ ತೀ.ನಂ.ಶ್ರೀ ವಿಚಾರಗಳ ಕುರಿತು ಸಂಶೋಧನೆಗಳಾಗಲಿ ಎಂದು ಆಶಿಸಿದ ಅವರು, ತೀ.ನಂ.ಶ್ರೀ ಅಧ್ಯಯನ ಪೀಠದಲ್ಲಿ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಬೇಕು, ತೀ.ನಂ.ಶ್ರೀ ಸಭಾಂಗಣ ಸಾಹಿತ್ಯ ಸಾಂಸ್ಕøತಿಕ ವೇದಿಕೆಯಾಗಬೇಕು ಎಂದರು.

      ಅಧ್ಯಯನ ಕೇಂದ್ರ ಸ್ಥಾಪಿಸಿದರೆ ಅವರ ಜೀವನ ಚರಿತ್ರೆ ಹಾಗೂ ಹಿಂದಿನ ಗುರು ಪರಂಪರೆ ಹಾಗೂ ಶಿಷ್ಯ ಪರಂಪರೆಯಲ್ಲಿ ಅನೇಕ ಸಾಹಿತಿಗಳು ಬೆಳೆದು ಬಂದಿದ್ದು ತಿಳಿಸಬಹುದು, ತೀ.ನಂ.ಶ್ರೀರವರು 3 ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು, ಕನ್ನಡ, ಸಂಸ್ಕøತ, ಇಂಗ್ಲೀಷ್‍ನಲ್ಲಿ ಪಾಂಡಿತ್ಯ ಹೊಂದಿದ್ದರಿಂದ ತೀ.ನಂ.ಶ್ರೀಯವರ ಕಾವ್ಯ ಸಮೀಕ್ಷೆ ಪುಸ್ತಕದಲ್ಲಿ ಕಾಳಿದಾಸ ಹಾಗೂ ಕವಿ ರನ್ನ, ಕುಮಾರವ್ಯಾಸ, ಅಕ್ಕಮಹಾದೇವಿಯವರ ಕಾವ್ಯಗಳು ಚರ್ಚಿತವಾಗಿವೆ ಇದರಲ್ಲಿ ತೀ.ನಂ.ಶ್ರೀರವರ ವಿದ್ವತ್ತನ್ನು ಕಾಣಬಹುದು ಎಂದರು.
ತೀ.ನಂ.ಶ್ರೀಯವರಿಗೆ ಎ.ಎನ್.ಮೂರ್ತಿರಾವ್, ಡಿ.ಎಲ್.ನರಸಿಂಹಚಾರ್, ಜಿ.ಹನುಮಮತರಾವ್, ಶಿವರಾಮಶಾಸ್ತ್ರಿಗಳ ಒಡನಾಟವಿತ್ತು, ಕನ್ನಡ, ಇಂಗ್ಲೀಷ್ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಅನೇಕ ಪ್ರತಿಭಾವಂತರು ತೀ.ನಂ.ಶ್ರೀಯವರಿಗೆ ವಿದ್ಯಾರ್ಥಿಗಳಾಗಿದ್ದರು, ಇವರ ಪಾಠ, ಪ್ರವಚನದಲ್ಲಿ ಅವರ ಶಿಷ್ಯರು ಅಪಾರ ಆಸಕ್ತಿಯನ್ನು ತೋರಿಸುತ್ತಿದ್ದರು, ತೀ.ನಂ.ಶ್ರೀಯವರ ಕೆಲವು ಅಮೂಲ್ಯವಾದ ಸಂಶೋಧನೆಗಳು ನಡೆದು ಕೆಲವು ಕೃತಿಗಳು ಲೇಖನಗಳಾಗಿ ಮೂಡಿ ಬರಲು ಸಾಧ್ಯವಾಯಿತು, ತೀ.ನಂ.ಶ್ರೀಯವರು ಓದುತ್ತಿದ್ದರು ಆದರೆ ಬರಹ ಕಡಿಮೆ ಇತ್ತು, ಇವರು ಬರೆಯುವ ಮುನ್ನ ಪೂರ್ವ ಸಿದ್ದತೆ ಮಾಡಿಕೊಳ್ಳುತ್ತಿದ್ದರು ಎಂದರು.

      ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ನಮ್ಮ ಕುಟುಂಬದಲ್ಲಿ ತೀ.ನಂ.ಶ್ರೀಗಳ ಬಗ್ಗೆ ಮಾತನಾಡುತ್ತಿದ್ದರು, ತೀ.ನಂ.ಶ್ರೀ ಭವನಕ್ಕೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ 1.5ಕೋಟಿ ಹಣ ಬಿಡುಗಡೆ ಮಾಡಿದ್ದರು, ನವಂಬರ್ 26ರಂದು ಕನಕ ಜಯಂತಿ ಕಾರ್ಯಕ್ರಮ ಇರುವುದರಿಂದ ಎರಡು ದಿನ ಮುಂಚಿತವಾಗಿ ತೀ.ನಂ.ಶ್ರೀ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ, ತೀ.ನಂ.ಶ್ರೀ ಸಭಾಭವನಕ್ಕೆ 85ಲಕ್ಷ ರೂ ಮಂಜೂರಾಗಿ ಇನ್ನೂ 75ಲಕ್ಷ ರೂಪಾಯಿ ಬೇಕಾಗಿದೆ, ತೀ.ನಂ.ಶ್ರೀ ಸಭಾಂಗಣದಲ್ಲಿ ತಾಲ್ಲೂಕಿನ ಕೇಂದ್ರದಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದರೆ ಪಟ್ಟಣದಲ್ಲಿ ಹೆಚ್ಚು ಹೆಸರು ಬರುತ್ತದೆ ಎಂದರು.

      ನಿವೃತ್ತ ಪ್ರಾಧ್ಯಾಪಕ ಟಿ.ಎಸ್.ನಾಗಭೂಷಣ್ ಮಾತನಾಡಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ನವೋದಯ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತೀ.ನಂ.ಶ್ರೀ ಹೆಸರಿನಲ್ಲಿ ಪ್ರತಿ ಕಾಲೇಜಿಗೆ 10ಸಾವಿರ ರೂಪಾಯಿ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ನೀಡಲಾಗುವುದು ಎಂದು ತೀ.ನಂ.ಶ್ರೀಯವರ ಮಗ ಭರವಸೆ ನೀಡಿದರು.

      ಸಂಸ್ಕøತಿ ಚಿಂತಕ ಡಾ.ಡಿ.ಆರ್.ನಾಗೇಶ್ ಆಚಾರ್ಯ ತೀ.ನಂ.ಶ್ರೀ ಪುಸ್ತಕ ಬಿಡುಗಡೆ ಮಾಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ತೀ.ನಂ.ಶಂಕರನಾರಾಯಣ, ಸಾಹಿತಿ ಎಂ.ವಿ.ನಾಗರಾಜ್‍ರಾವ್, ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ, ಕನ್ನಡ ಸಂಘದ ಅಧ್ಯಕ್ಷ ಸಿ.ಬಿ.ರೇಣುಕಸ್ವಾಮಿ, ಉಪನ್ಯಾಸಕ ರವಿಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

 

(Visited 25 times, 1 visits today)

Related posts

Leave a Comment