ತುಮಕೂರು:

ತುಮಕೂರು:

      ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲಿಯೇ ಕೋವಿಡ್ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿಯ ಕೆಸ್ವಾನ್ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಜಿಲ್ಲೆಯ ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ವೀಡಿಯೋ ಸಂವಾದ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚಾಗದಂತೆ ತಡೆಯಲು 45 ವರ್ಷ ಹಾಗೂ ಮೇಲ್ಪಟ್ಟವರಿಗೆ ಕಡ್ಡಾಯವಾಗಿ ಕೋವಿಡ್ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪ್ರಥಮಾದ್ಯತೆಯಾಗಿ ಶಿಕ್ಷಕರಿಗೆ ಅವರ ಕಾರ್ಯ ಸ್ಥಳದಲ್ಲಿಯೇ ಕೋವಿಡ್ ವ್ಯಾಕ್ಸಿನೇಷನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ ಕಾರ್ಯ ಸ್ಥಳದಲ್ಲಿ 100ಕ್ಕಿಂತ ಹೆಚ್ಚು ಫಲಾನುಭವಿಗಳಿದ್ದಲ್ಲಿ ಮಾತ್ರ ಲಸಿಕೆ ನೀಡಲು ತಾತ್ಕಲಿಕವಾಗಿ ಲಸಿಕಾ ಉಪ ಕೇಂದ್ರಗಳನ್ನು ತೆರದು ಲಸಿಕಾಕರಣ ಮಾಡಲಾಗುವುದು ಎಂದರು. ಸಾಮಾಜಿಕವಾಗಿ ಜನರೊಂದಿಗೆ ಒಡನಾಟ ಹೊಂದಿದ್ದು, ಲಸಿಕೆ ಬಗ್ಗೆ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಿ ಈವರೆಗೂ ಲಸಿಕೆ ಪಡೆಯದವರಿಗೆ ಅರಿವು ಮೂಡಿಸಲು ಅನುಕೂಲವಾಗುತ್ತದೆ ಎನ್ನುವ ದೃಷ್ಟಿಯಿಂದ 45 ವರ್ಷ ಮೇಲ್ಪಟ್ಟ ಶಿಕ್ಷಕರಿಗಾಗಿ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದರಲ್ಲದೆ ಶಿಕ್ಷಕರು ತಮ್ಮೊಂದಿಗೆ 45 ವರ್ಷ ಮೇಲ್ಪಟ್ಟಿರುವ ತಮ್ಮ ಕುಟುಂಬ ಸದಸ್ಯರು ಹಾಗೂ ತಲಾ 10 ಮಂದಿ ಫಲಾನುಭವಿಗಳನ್ನು ಲಸಿಕಾ ಕೇಂದ್ರಕ್ಕೆ ಕರೆತಂದು ಲಸಿಕೆ ಕೊಡಿಸಬೇಕು. ಸಂಬಂಧಿಸಿದ ಬಿಆರ್‍ಪಿ, ಬಿಆರ್‍ಸಿ, ಸಿಆರ್‍ಸಿ, ಸಿಆರ್‍ಪಿಗಳು ತಮ್ಮ ಕ್ಷೇತ್ರದ ಶಿಕ್ಷಕರಿಗೆ ಲಸಿಕಾ ಉಪ ಕೇಂದ್ರದ ಬಗ್ಗೆ ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.
 

      ತಾತ್ಕಾಲಿಕ ಲಸಿಕಾ ಉಪಕೇಂದ್ರದಲ್ಲಿ ಕನಿಷ್ಟ 3 ಕೊಠಡಿ, 30 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ, ಕುಡಿಯುವ ನೀಡಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಲಸಿಕೆ ಪಡೆಯುವವರು ತಮ್ಮ ವಯಸ್ಸಿನ ದಾಖಲೆ ಸಹಿತ ಭಾವಚಿತ್ರ ಹೊಂದಿರುವ ಗುರುತಿನ ಚೀಟಿಯನ್ನು ಹಾಜರುಪಡಿಸಬೇಕು ಎಂದರು.

      ಜಿಲ್ಲೆಯಲ್ಲಿ ಈಗಾಗಲೇ ಸುಮಾರು 2.09ಲಕ್ಷ ಜನರಿಗೆ ಲಸಿಕೆ ನೀಡಲಾಗಿದ್ದು, ಲಸಿಕೆಯಿಂದ ಅಡ್ಡಪರಿಣಾಮ ಉಂಟಾಗಿರುವ ಬಗ್ಗೆ ವರದಿಯಾಗಿರುವುದಿಲ್ಲ. ಲಸಿಕೆ ಬಗ್ಗೆ ಯಾವುದೇ ಸುಳ್ಳುವದಂತಿಗಳಿಗೆ ಕಿವಿಗೊಡಬಾರದು. ಲಸಿಕೆ ಪಡೆದವರು ದಿನನಿತ್ಯ ಸೇವಿಸುವ ಆಹಾರ ಕ್ರಮ, ಔಷಧಿಗಳನ್ನು ಮುಂದುವರೆಸಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಮದ್ಯವ್ಯಸನಿಗಳಿಗೂ ಈ ಲಸಿಕೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ಪೂರ್ವಾಗ್ರಹಪೀಡಿತರಾಗದೆ ನಿರಾತಂಕದಿಂದ ಲಸಿಕೆ ಪಡೆಯುವ ಬಗ್ಗೆ ಜನರಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕೆಂದರು.

     ಜನರಲ್ಲಿ 45 ವರ್ಷಗಳ ನಂತರ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಪ್ರಸ್ತುತ 45 ಮತ್ತು ಅದಕ್ಕೂ ಮೇಲ್ಪಟ್ಟವರಿಗೆ ಮಾತ್ರ ವ್ಯಾಕ್ಸಿನೇಷನ್ ಮಾಡಲಾಗುತ್ತಿದ್ದು, ವ್ಯಾಕ್ಸಿನೇಷನ್ ಪಡೆಯುವುದರಿಂದ ಸಾವಿನ ಪ್ರಕರಣಗಳು ಸಂಭವಿಸುವುದನ್ನು ತಪ್ಪಿಸಬಹುದಾಗಿದೆ ಎಂದರು.

      ಬರುವ ಏಪ್ರಿಲ್ 12ರಂದು ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕೋವಿಡ್ ಲಸಿಕಾ ಉಪಕೇಂದ್ರ ತೆರೆದು ಬೆಳಿಗ್ಗೆ 10 ರಿಂದ ವಿ.ವಿ.ಯಲ್ಲಿ ಕಾರ್ಯನಿರ್ವಹಿಸುವ 45 ವರ್ಷ ಮೇಲ್ಪಟ್ಟ ಬೋಧಕ ಹಾಗೂ ಬೋಧಕೇತರ ವರ್ಗದವರಿಗಾಗಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ಕೇಂದ್ರದಲ್ಲಿ ಸಾರ್ವಜನಿಕರೂ ಸಹ ಪಾಲ್ಗೊಂಡು ಭಾವಚಿತ್ರ ಸಹಿತ ಗುರುತಿನ ಚೀಟಿ ಹಾಜರುಪಡಿಸಿ ಲಸಿಕೆ ಪಡೆಯಬಹುದೆಂದು ಅವರು ತಿಳಿಸಿದರು.

      ವೈದ್ಯಕೀಯ ರಜೆ ಮೇಲೆ ತೆರಳಿದವರನ್ನು ಹೊರತುಪಡಿಸಿ ಉಳಿದೆಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿಗಳಿಗೆ ತಪ್ಪದೇ ಲಸಿಕೆ ಕೊಡಿಸುವ ಬಗ್ಗೆ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಸೂಚಿಸಬೇಕು ಎಂದು ನಿರ್ದೇಶನ ನೀಡಿದರು.
ಅನುದಾನಿತ/ ಅನುದಾನ ರಹಿತ/ ಖಾಸಗಿ ಶಾಲೆಗಳ ಶಿಕ್ಷಕರು ಈ ಲಸಿಕಾಕರಣದಿಂದ ತಪ್ಪಿ ಹೋಗಬಾರದು. ವ್ಯಾಕ್ಸಿನೇಷನ್ ಪಡೆಯದ ಶಿಕ್ಷಕರಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದರು.

ಮನೆ ಮಂದಿಯೊಂದಿಗೆ ಮಾತ್ರ ಯುಗಾದಿ ಆಚರಣೆಗೆ ಮನವಿ :-

      ಸಾರ್ವಜನಿಕರು ಏಪ್ರಿಲ್ 13ರಂದು ಆಚರಿಸಲಾಗುವ ಯುಗಾದಿ ಹಬ್ಬವನ್ನು ಗುಂಪು ಸೇರದೆ ಮನೆ ಮಂದಿಯೊಂದಿಗೆ ಶಾಂತಿರೀತಿಯಿಂದ ತಮ್ಮ ಮನೆಯಲ್ಲಿಯೇ ಮನವಿ ಮಾಡಿದರು.

      ನಗರ ಪ್ರದೇಶದಲ್ಲಿ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಶಾಲೆ, ಸಮುದಾಯಭವನಗಳಲ್ಲಿ ತಾತ್ಕಾಲಿಕ ಲಸಿಕಾ ಕೇಂದ್ರ ತೆರೆಯಲು ವ್ಯವಸ್ಥೆ ಮಾಡಬಹುದೆಂದು ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ನಾಗೇಂದ್ರಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ: ಸುರೇಶ್‍ಬಾಬು, ಆರ್.ಸಿ.ಹೆಚ್. ಅಧಿಕಾರಿ ಕೇಶವರಾಜ್, ಜಿಲ್ಲಾ ಸರ್ವೆಲೆನ್ಸ್ ಅಧಿಕಾರಿ ಡಾ: ಮೋಹನ್‍ದಾಸ್, ಬಿ.ಆರ್.ಪಿ., ಸಿ.ಆರ್.ಪಿ., ಮತ್ತಿತರರು ಉಪಸ್ಥಿತರಿದ್ದರು.

(Visited 1 times, 1 visits today)

Related posts

Leave a Comment