ನರಭಕ್ಷಕ ಚಿರತೆಯನ್ನು ಹಿಡಿಯದಿದ್ದರೆ, ಅರಣ್ಯ ಕಛೇರಿಗೆ ಮುತ್ತಿಗೆ..!

ಚಿಕ್ಕನಾಯಕನಹಳ್ಳಿ:

      ನರಭಕ್ಷಕ ಚಿರತೆಯನ್ನು ಹಿಡಿದು ಜನ ಹಾಗೂ ಜಾನುವಾರಗಳ ಜೀವ ಉಳಿಸದಿದ್ದರೆ ಅರಣ್ಯ ಇಲಾಖೆಯ ಕಛೇರಿ ಮುಂದೆ ತೀವ್ರ ಸ್ವರೂಪದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್‍ಕುಮಾರ್ ಎಚ್ಚರಿಕೆ ನೀಡಿದ್ದಾರೆ.

      ತಾಲೂಕಿನ ಮದಲಿಂಗನ ಕಣಿವೆ ಭಾಗದಲ್ಲಿ ನರಭಕ್ಷಕ ಚಿರತೆಯೊಂದು ಗ್ರಾಮಗಳಿಗೆ ನುಗ್ಗಿ ಮನುಷ್ಯರ ಮೇಲೆ ದಾಳಿ ಮಾಡುವುದು, ಕುರಿ-ಮೇಕೆ, ಜಾನುವಾರಗಳನ್ನು ತಿನ್ನುವುದು ಸೇರಿದಂತೆ ಆ ಭಾಗದ ಗ್ರಾಮಸ್ಥರ ನೆಮ್ಮದಿಗೆ ಭಂಗ ತಂದಿದ್ದು, ಜನರು ಸಂಜೆ ಮೇಲೆ ಹೊಲ ತೋಟಗಳಿಗೆ ಹೋಗುವುದಕ್ಕೆ ಹೆದರುವಂತಾಗಿದೆ.

      ಇದೇ ತಿಂಗಳ 2ರಂದು ಆಶ್ರೀಹಾಲ್‍ನ ಮೂರ್ತಿ ಎಂಬುವವರ ಮೇಲೆ ದಾಳಿ ಮಾಡಿದೆ, ಅವರಿನ್ನೂ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇದಕ್ಕೂ ಹದಿನೈದು ದಿನಗಳ ಮುಂಚೆ ಆ ಭಾಗದಲ್ಲೇ ಮಹಿಳೆಯೊಬ್ಬರ ಮೇಲೆ ದಾಳಿಮಾಡಿದೆ, ಕಳೆದ ಮೂರು ತಿಂಗಳ ಈಚೆಗೆ ಸುಮಾರು ನಾಲ್ಕೈದು ಜನರನ್ನು ಘಾಸಿಗೊಳಿಸಿದೆ, ಅಲ್ಲದೆ ದಿನಂಪ್ರತಿ ಗುಡ್ಡಕ್ಕೆ ಮೇಯಲು ಹೋದ ಕುರಿ, ಮೇಕೆ, ದನಗಳನ್ನು ತಿನ್ನುವುದು ಹಾಗೂ ಅವುಗಳನ್ನು ಕಾಯಲು ಬಂದ ಜನರ ಮೇಲೆ ದಾಳಿ ಮಾಡುವುದನ್ನು ಮಾಡುತ್ತಿರುವ ಈ ಚಿರತೆ, ಆ ಭಾಗದ ಜನರ ಪಾಲಿನ ಯಮ ಸ್ವರೂಪಿಯಾಗಿದೆ, ಇದರಿಂದ ಜನರು ಭಯಭೀತರಾಗಿದ್ದು, ಇನ್ನು ಮೂರು ದಿನಗಳೊಳಗೆ ಈ ಚಿರತೆಗೆ ಅರವಳಿಕೆ ನೀಡಿ ಅಭಯಾರಣ್ಯಕ್ಕೆ ರವಾನಿಸದೇ ಹೋದರೆ ಅರಣ್ಯ ಇಲಾಖೆಯ ಮುಂದೆ ತೀವ್ರ ಸ್ವರೂಪದ ಪ್ರತಿಭಟನೆ ಮಾಡುವುದಾಗಿ ರಾಜ್‍ಕುಮಾರ್ ತಿಳಿಸಿದ್ದಾರೆ.

      ಆ ಚಿರತೆ ಹಿಡಿಯಲು ಅರಣ್ಯ ಇಲಾಖೆಗೆ ಮೂರು ದಿನಗಳ ಗಡವು ನೀಡಿದು, ಈ ಕಾಲಮಿತಿ ಒಳಗೆ ಚಿರತೆಯನ್ನು ಹಿಡಿದು ಅಭಯಾರಣ್ಯಕ್ಕೆ ರವಾನಿಸದೆ ಹೋದರೆ, ಅರಣ್ಯ ಇಲಾಖೆಯ ಕಛೇರಿ ಮುಂದೆ ಆ ಭಾಗದ ಗ್ರಾಮಸ್ಥರು ಠಿಕಾಣಿ ಹೂಡಿ, ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡುವ ಮೂಲಕ ಇಲಾಖೆಯ ಹಿರಿಯ ಅಧಿಕಾರಗಳನ್ನು ಕರೆಸುವಂತೆ ಒತ್ತಡ ತರುವುದುದಲ್ಲದೆ, ಚಿರತೆ ಹಿಡಿದು ರವಾನಿಸುವವರೆಗೆ ಸ್ಥಳವನ್ನು ಬಿಟ್ಟು ಕದಲುವುದಿಲ್ಲ ಎನ್ನುವ ಮಟ್ಟಿಗೆ ಜನ ಆ ಚಿರತೆಯಿಂದ ಜರ್ಝರಿತರಾಗಿ, ರೋಸಿ ಹೋಗಿದ್ದಾರೆ ಎಂದು ಸಿಂಗದಹಳ್ಳಿ ರಾಜ್‍ಕುಮಾರ್ ತಿಳಿಸಿದರು.

 

(Visited 17 times, 1 visits today)

Related posts

Leave a Comment