ನಾಗರಕಟ್ಟೆ, ದರ್ಗಾ ತೆರವಿಗೆ ಬಜರಂಗದಳ ವಿರೋಧ

 ತುಮಕೂರು:

      ನಗರದ ಟೌನ್‍ಹಾಲ್ ಸರ್ಕಲ್‍ನಲ್ಲಿರುವ ನಾಗರಕಟ್ಟೆ ಗಣಪತಿ ದೇವಾಲಯದ ತೆರವಿಗೆ ನಗರಪಾಲಿಕೆ ನೊಟೀಷ್ ನೀಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಬಜರಂಗದಳ ಹಾಗೂ ನಾಗರಕಟ್ಟೆ ಗಣಪತಿ ದೇವಾಲಯ ಕಮಿಟಿ ಸದಸ್ಯರು, ನೊಟೀಷ್‍ನ್ನು ಕೂಡಲೇ ಹಿಂಪಡೆಯಬೇಕೆಂದು ಆಗ್ರಹಿಸಿದರು.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಬಜರಂಗದಳ ಹಾಗೂ ದೇವಾಲಯದ ಕಮಿಟಿಯ ಸದಸ್ಯರು, ನಾಗರಕಟ್ಟೆ ಗಣಪತಿ ದೇವಾಲಯ ಹಿಂದೂ ಸಮಾಜ ಬಾಂಧವರ ಶ್ರದ್ದಾ, ಭಕ್ತಿಯ ಕೇಂದ್ರವಾಗಿದೆ.ಹಾಗೆಯೇ ಪಕ್ಕದಲ್ಲಿಯೇ ಇರುವ ದರ್ಗಾ ಕೂಡಲೇ ಬಹಳ ವರ್ಷಗಳಿಂದ ಆ ಸಮುದಾಯದ ಆರಾಧನಾ ಕೇಂದ್ರವಾಗಿದೆ.ಎರಡು ಸ್ಥಳಗಳಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ.ದರ್ಗಾದ ವಿರುದ್ದ ಹಿಂದೂಗಳಾಗಲಿ,ನಾಗರಕಟ್ಟೆ ವಿರುದ್ದ ಮುಸ್ಲಿಂರಾಗಲಿ ದೂರು ನೀಡಿಲ್ಲ. ಹೀಗಿದ್ದರೂ ಜಿಲ್ಲಾಡಳಿತ ಎರಡು ಕೇಂದ್ರಗಳನ್ನು ತೆರೆವು ಮಾಡಲು ಮುಂದಾಗುವ ಮೂಲಕ ನಗರದಲ್ಲಿ ಕೋಮು ಸೌಹಾರ್ಧತೆಯನ್ನು ಕದಡಲು ಮುಂದಾಗಿದೆ ಎಂದು ಚಂದ್ರಶೇಖರ್ ಆರೋಪಿಸಿದರು.

      ಈಗಾಗಲೇ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 206ನ್ನು ನಗರದ ಹೊರಭಾಗದಲ್ಲಿ ತೆಗೆದುಕೊಂಡು ಹೋಗಲು ತೀರ್ಮಾನಿಸಲಾಗಿದೆ. ಆದ್ದರಿಂದ ರಸ್ತೆಯ ಇಕ್ಕೆಲ್ಲದಲ್ಲಿ ಈ ಧಾರ್ಮಿಕ ಕೇಂದ್ರಗಳು ಇರುವುದರಿಂದ ಯಾವುದೇ ತೊಂದರೆಯಾಗದು. ಒಂದು ವೇಳೆ ಸುಪ್ರಿಂಕೋರ್ಟಿನ ಆದೇಶ ಪಾಲನೆ ಮಾಡಲೇಬೇಕು ಎಂಬ ತೀರ್ಮಾನಕ್ಕೆ ಜಿಲ್ಲಾಡಳಿತ ಬಂದರೆ, ದರ್ಗಾ ಮತ್ತು ನಾಗರಕಟ್ಟೆಗಳಿಗೆ ಪರ್ಯಾಯ ಜಾಗ ನೀಡಿ, ಏಕಕಾಲಕ್ಕೆ ಎರಡು ಕೇಂದ್ರಗಳ ತೆರವಿಗೆ ಮುಂದಾದರೆ, ನಾಗರಕಟ್ಟೆಯನ್ನು ಧಾರ್ಮಿಕ ವಿಧಿವಿಧಾನದ ಮೂಲಕ ದೇವಾಲಯದ ಸಮಿತಿಯೇ ಸ್ಥಳಾಂತರ ಮಾಡಲು ಸಿದ್ದ.ಆದರೆ ಈ ಬಗ್ಗೆ ಜಿಲ್ಲಾಡಳಿತ ಸ್ಪಷ್ಟ ಭರವಸೆ ನೀಡಬೇಕು. ಯಾವುದೇ ತಾರತಮ್ಯ ಮಾಡಬಾರದು. ಒಂದು ವೇಳೆ ತಾರತಮ್ಯ ಮಾಡಿದ್ದೇ ಆದರೆ ಉಗ್ರ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಹೆಚ್.ಎನ್.ಚಂದ್ರಶೇಖರ್ ಎಚ್ಚರಿಸಿದರು.

      ಸುದ್ದಿಗೋಷ್ಠಿಯಲ್ಲಿ ನಾಗರಕಟ್ಟೆ ಗಣಪತಿ ದೇವಾಲಯದ ಅರ್ಚಕ ಮೋಹನಭಟ್ಟ, ಹಿಂದೂ ಯುವವಾಹಿನಿಯ ಬಸವರಾಜು, ಬಜರಂಗದಳದ ನಗರ ಅಧ್ಯಕ್ಷ ಮಂಜು ಭಾರ್ಗವ, ಪಾಲಿಕೆ ಸದಸ್ಯರಾದ ಮಲ್ಲಿಕಾರ್ಜುನ್, ಗಿರಿಜಾ, ನವೀನ್, ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.

(Visited 15 times, 1 visits today)

Related posts

Leave a Comment