ನಾದೋಪಾಸನ ತಂಡದಿಂದ ಕನ್ನಡ, ಹಿಂದಿ ಚಿತ್ರಗೀತೆಗಳ ರಸಮಂಜರಿ

ತುಮಕೂರು:

      ರಾಜ್ಯದ ಲೋಕೋಪಯೋಗಿ ಸೇರಿದಂತೆ ವಿವಿಧ ಅಭಿವೃದ್ಧಿ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂಜಿನಿಯರ್‍ಗಳು ಕರ್ತವ್ಯದ ನಂತರ ಬಿಡುವಿನ ವೇಳೆಯಲ್ಲಿ ಹವ್ಯಾಸಕ್ಕೆಂದು ಹಳೆಯ ಜನಪ್ರಿಯ ಕನ್ನಡ ಹಾಗೂ ಹಿಂದಿ ಚಲನಚಿತ್ರ ಗೀತೆಗಳನ್ನು ಹಾಡುತ್ತ,ಹಾಡುತ್ತ ಒಂದು ತಂಡವಾಗಿ ರೂಪುಗೊಂಡಿದ್ದಾರೆ. ಮುಖ್ಯ ಇಂಜಿನಿಯರ್ ಡಿ.ಉದಯಶಂಕರ್ ಈ ತಂಡದ ಸಂಸ್ಥಾಪಕ ಅಧ್ಯಕ್ಷರಾಗಿ “ನಾದೋಪಾಸನ” ಎಂಬ ಹೆಸರಿನ ನೊಂದಾಯಿತ ಸಂಗೀತ ತಂಡವೊಂದನ್ನು ರಚಿಸಿಕೊಂಡಿದ್ದಾರೆ. ಇವರು ಈಗಾಗಲೇ ರಾಜಧಾನಿ ಬೆಂಗಳೂರಿನ ವಿವಿಧೆಡೆ ಐದಾರು ಸಂಗೀತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ. ಮೈಸೂರು ದಸರಾ, ಚಿತ್ರಕಲಾಪರಿಷತ್ತಿನ ಚಿತ್ರಸಂತೆ, ಕರ್ನಾಟಕ ಸಚಿವಾಲಯ ಕ್ಲಬ್, ಇಂಜಿನಿಯರ್ಸ್ ಕ್ಲಬ್ ಮೊದಲಾದೆಡೆ ಜನಾಕರ್ಷಣೀಯ ಕಾರ್ಯಕ್ರಮಗಳನ್ನು ನೀಡಿ ಜನಮನ್ನಣೆ ಪಡೆದಿದ್ದಾರೆ.

      “ಒಳಿತು ಮಾಡು ಮನುಜ ನೀನಿರೋದು ಮೂರು ದಿವಸ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮಗಳನ್ನು ನೀಡುತ್ತ, ಅಂಧರು, ಅಶಕ್ತರು ಹಾಗೂ ಅನಾಥರನ್ನು ಸಂಗೀತ ಸಂಜೆಗೆ ಕರೆಸಿ, ಅವರ ಮನರಂಜಿಸಿ, ಅಲ್ಲಿ ಸಹೃದಯರು ಉದಾರವಾಗಿ ನೀಡುವ ನಿಧಿಯನ್ನು ಈ ತಂಡಗಳಿಗೆ ನೀಡುತ್ತ ಬಂದಿದೆ.

      ಇದೀಗ ಈ ನಾದೋಪಾಸನ ತಂಡವು ತುಮಕೂರಿನಲ್ಲಿ ಮೊದಲ ಬಾರಿಗೆ ಸಂಗೀತ ಸಂಜೆಯನ್ನು ನಗರದ ಹಳೇ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ಭವನದಲ್ಲಿ ಜನವರಿ 12ರ ಶನಿವಾರ ಸಂಜೆ 4.30ಗಂಟೆಗೆ ಏರ್ಪಡಿಸಿದೆ. ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿಯವರಾದ ಶ್ರೀ ಕೆ.ಜೈಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಮೊದಲು ಬಂದವರಿಗೆ ಆದ್ಯತೆಯಿರುತ್ತದೆ. ಸಂಗೀತಾಭಿಮಾನಿಗಳು ಈ ಅವಕಾಶದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೋರಿದೆ.

(Visited 62 times, 1 visits today)

Related posts

Leave a Comment