ಪಿಂಚಣಿಗೆ ಆಧಾರ್ ಕಡ್ಡಾಯ : ಕಂದಾಯ ಸಚಿವ ಆರ್.ಅಶೋಕ್

ತುಮಕೂರು:

      ಮಿನಿವಿಧಾನಸೌಧವು ಬಡ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವಂತಹ ಸೌಧವಾಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ ಅವರು ತಿಳಿಸಿದರು.

      ಶಿರಾ ತಾಲೂಕಿನಲ್ಲಿ ನೂತನ ಮಿನಿ ವಿಧಾನಸೌಧ ಉದ್ಘಾಟಿಸಿ ಮಾತನಾಡಿದ ಅವರು, ಶಿರಾ ತಾಲೂಕಿನಲ್ಲಿ ಸುಮಾರು 11 ಎಕರೆ ಜಾಗದಲ್ಲಿ ಸುಮಾರು 9.85 ಕೋಟಿ ರೂ.ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಜನರ ಸೇವೆ ಮಾಡದೇ ದರ್ಪ ತೋರುವ ಅಧಿಕಾರಿಗಳನ್ನು ಮುಲಾಜಿಲ್ಲದೇ ಅಮಾನತುಗೊಳಿಸಲಾಗುವುದು. ಸರ್ಕಾರದ ಕೆಲಸ ದೇವರ ಕೆಲಸವಿದ್ದಂತೆ, ಬಡ ಜನರ ಕಷ್ಟಗಳಿಗೆ ಸ್ಪಂದಿಸಿ, ಜನರು ಅನಾವಶ್ಯಕವಾಗಿ ಓಡಾಡುವುದನ್ನು ತಪ್ಪಿಸುವುದೇ ನಮ್ಮ ಉದ್ದೇಶ ಎಂದು ಅವರು ತಿಳಿಸಿದರು.

      ಇನ್ನು ಮುಂದೆ ವೃದ್ಧಾಪ್ಯ ವೇತನ ಪಡೆಯಲು ಅನುಕೂಲವಾಗುವಂತೆ ನೂತನ ಯೋಜನೆಯನ್ನು ಜಾರಿಗೊಳಿಸಲಾಗುವುದು. 60 ವರ್ಷ ಪೂರ್ಣಗೊಂಡ ವೃದ್ಧ/ವೃದ್ಧೆಯ ಆಧಾರ್ ಕಾರ್ಡ್ ದಾಖಲೆಯ ಮೇಲೆ 60 ವರ್ಷ ತುಂಬಿದ ಬಗ್ಗೆ ಆಯಾ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ವೃದ್ಧ/ವೃದ್ಧೆಯರಿಗೆ ವೃದ್ಧಾಪ್ಯ ವೇತನ ಪಡೆಯಲು ಅಗತ್ಯವಿರುವ ದಾಖಲಾತಿಗಳು ನಮ್ಮ ಬಳಿಯಲ್ಲಿಯೇ ಇರುತ್ತವೆ ಎಂದ ಅವರು, ಈ ಯೋಜನೆಯು ಈಗಾಗಲೇ ಬಳ್ಳಾರಿ ಹಾಗೂ ಉಡುಪಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದು, ಸುಮಾರು 10 ಸಾವಿರ ಜನರನ್ನು ಗುರುತಿಸಿ ವೃದ್ಧಾಪ್ಯ ವೇತನ ನೀಡಿದ್ದಾರೆ. ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು.

      ರಾಜ್ಯ ಸರ್ಕಾರ ಪ್ರತಿ ವರ್ಷ ವೃದ್ಧಾಪ್ಯ ವೇತನ ನೀಡಲು 7 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿದೆ. ಕೆಲವು ಕಡೆ ನಕಲಿ ದಾಖಲೆ ಸೃಷ್ಠಿಸಿ ವೃದ್ಧಾಪ್ಯ ವೇತನ ಪಡೆಯುತ್ತಿದ್ದರು ಅಂತಹ ಬೋಗಸ್ ಖಾತೆಗಳನ್ನು ರದ್ಧುಗೊಳಿಸಲಾಗುವುದು. ಇದರಿಂದ 1 ಸಾವಿರ ಕೋಟಿ ಬೋಗಸ್ ಆಗಿ ಪಾವತಿಯಾಗುತ್ತಿರುವುದು ತಪ್ಪುತ್ತದೆ. ಇನ್ನು ಮುಂದೆ ಅಂಚೆ ಕಚೇರಿಗಳಿಂದ ಪಿಂಚಣಿ ಸೌಲಭ್ಯ ನೀಡಲಾಗುವುದಿಲ್ಲ ಮುಂದಿನ 3 ತಿಂಗಳೊಳಗಾಗಿ ಪಿಂಚಣಿದಾರರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಅವರು ತಿಳಿಸಿದರು.

      ಜಿಲ್ಲೆಯ ಬಡ ಜನರಿಗೆ ಅನುಕೂಲವಾಗುವಂತೆ ಎಲ್ಲಾ ತಾಲೂಕುಗಳಿಂದ ಸುಮಾರು 180 ಎಕರೆ ಜಮೀನಿನಲ್ಲಿ ಸರ್ಕಾರಿ ಶಾಲಾ-ಕಾಲೇಜು, ಅಂಗನವಾಡಿ ಸರ್ಕಾರಿ ಆಸ್ಪತ್ರೆ ನಿರ್ಮಾಣ, ಕುಣಿಗಲ್ ತಾಲೂಕಿನಲ್ಲಿ ಕೊಳಚೆ ನೀರು ಪರಿಷ್ಕರಣೆ ಘಟಕ, ನಿಟ್ಟೂರು ಹೋಬಳಿ ನಂದಿ ಗ್ರಾಮದಲ್ಲಿ ವಿದ್ಯುತ್ ಸ್ಥಾವರ ನಿರ್ಮಾಣ, ಹಲವಾರು ವ್ಯವಸಾಯ ಉತ್ಪನ್ನ ಮಾರುಕಟ್ಟೆಗಳನ್ನು ನಿರ್ಮಿಸಲು ಮಂಜೂರಾತಿ ನೀಡಲಾಗಿದೆ. ಪ್ರತಿ ಹಳ್ಳಿಯಲ್ಲೂ ಸ್ಮಶಾನಕ್ಕೆ ಜಾಗ ಮೀಸಲಿರಿಸಬೇಕು ಎಂದು ಅವರು ತಿಳಿಸಿದರು.

      ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಸಿ ಮಾಧುಸ್ವಾಮಿ ಅವರು ಮಾತನಾಡಿ, ಜನರ ಪಿಂಚಣಿ ಸಮಸ್ಯೆಗಳಿಗೆ ಸ್ಪಂದಿಸಿ ಕೂಡಲೇ ವ್ಯವಸ್ಥಿತವಾದ ಕ್ರಮ ತೆಗೆದುಕೊಳ್ಳಬೇಕು. ಮಿನಿ ವಿಧಾನಸೌಧ ಉದ್ಘಾಟನೆಯಾಗಿದ್ದು, ವಾರದೊಳಗೆ ಇಲ್ಲಿಯೇ ಕೆಲಸ ಕಾರ್ಯಗಳು ಆರಂಭಗೊಳ್ಳುತ್ತವೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ಆಲಿಸಿ, ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಶಿರಾ ತಾಲೂಕಿನ ಜನರು ಇದರ ಸದುಪಯೋಗಪಡೆದುಕೊಳ್ಳಬೇಕು. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳು ಶಿರಾ ತಾಲೂಕಿನಲ್ಲಿ ನಡೆಯಲಿವೆ ಇದಕ್ಕೆ ಇಲ್ಲಿನ ಜನರು ಸಹಕಾರ ನೀಡಬೇಕು ಎಂದು ಅವರು ತಿಳಿಸಿದರು.

      ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಸಚಿವ ಆನಂದ್‍ಸಿಂಗ್, ವಿಧಾನ ಪರಿಷತ್ ಶಾಸಕರಾದ ವೈ.ಎ.ನಾರಾಯಣಸ್ವಾಮಿ, ರವಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ರವಿಕುಮಾರ್, ಉಪವಿಭಾಗಾಧಿಕಾರಿ ಡಾ|| ಕೆ.ನಂದಿನಿದೇವಿ, ತಹಶೀಲ್ದಾರ್ ನಾಹಿದಾ ಜಂ ಜಂ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.

      ಚಿಕ್ಕನಾಯಕನಹಳ್ಳಿಯಲ್ಲಿ ಮಿನಿ ವಿಧಾನಸೌಧ ಶಂಕುಸ್ಥಾಪನೆ : ಚಿಕ್ಕನಾಯಕನಹಳ್ಳಿಯಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ಕಂದಾಯ ಸಚಿವ ಆರ್.ಅಶೋಕ್ ನೆರವೇರಿಸಿದರು. ಅನಂತರ ಮಾತನಾಡಿದ ಅವರು, ಹಳೆಯ ಕಟ್ಟಡ ದುರಸ್ಥಿಗೆ ತಗಲುವ ವೆಚ್ಚ ತಪ್ಪಿಸಿ ನೂತನ ಕಟ್ಟಡ ನಿರ್ಮಾಣ ಮಾಡುವಂತೆ ಮಾಧುಸ್ವಾಮಿ ಅವರು ನೀಡಿದ ಸಲಹೆಯಂತೆ ಇಂದು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಿನಿ ವಿಧಾನಸೌಧ ಶಂಕುಸ್ಥಾಪನೆ ನೆರವೇರಿಸಿದ್ದು, 18 ತಿಂಗಳೊಳಗಾಗಿ ಕಟ್ಟಡ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.

      ಸುಸಜ್ಜಿತ ಕಟ್ಟಡ ನಿರ್ಮಾಣದಿಂದ ವಿವಿಧ ಇಲಾಖೆಗಳ ಕಚೇರಿಗಳು ಒಂದೇ ಕಡೆ ಇರುತ್ತವೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ. ಸರ್ಕಾರಿ ಸೌಲಭ್ಯಕ್ಕಾಗಿ ಬರುವ ಸಾರ್ವಜನಿಕರಿಗೆ ಸ್ಪಂದಿಸಿ ಕೆಲಸ ಕಾರ್ಯಗಳನ್ನು ಮಾಡಬೇಕು. ಎಸಿ/ತಹಶೀಲ್ದಾರ್‍ಗಳು ಜನರಿಗೆ ಉಪಯೋಗವಾಗುವಂತಹ ಸವಲತ್ತು ನೀಡಬೇಕು ಎಂದು ಅವರು ತಿಳಿಸಿದರು.

      ಸಮಾಜಕ್ಕೆ ಸೇವೆ ಸಲ್ಲಿಸಿರುವವರು, ಅಂಗಲವಿಕಲರು, ವೃದ್ಧಾಪ್ಯ ವೇತನ ಪಡೆಯುವವರಿಗೆ ತಮ್ಮ ಮನೆ ಬಾಗಿಲಿಗೆ ಪಿಂಚಣಿ ನೀಡಲು ಹೊಸ ಯೋಜನೆಯನ್ನು ಜಾರಿಗೊಳಿಸಲಾಗಿದೆ ಅನಾವಶ್ಯಕವಾಗಿ ಜನರನ್ನು ಅಲೆದಾಡಿಸಬಾರದು ಎಂದರಲ್ಲದೇ ನೆರೆ ಪ್ರವಾಹದಿಂದಾಗಿ ಮನೆ ಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಡಲು ಸರ್ಕಾರ ಮುಂದಾಗಿದೆ ಎಂದು ಅವರು ತಿಳಿಸಿದರು.

      ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳ ಪಿ.ಡಿ ಖಾತೆಯಲ್ಲಿ 5 ಕೋಟಿ ರೂ. ಹಣ ಜಮೆ ಮಾಡುತ್ತೀದ್ದೇವೆ. ಮನೆ ಕಳೆದುಕೊಂಡವರಿಗೆ/ಬೆಳೆ ನಾಶವಾಗಿರುವವರಿಗೆ, ವೃದ್ಧಾಪ್ಯ ವೇತನ ಪಡೆಯುವವರಿಗೆ ಮೊದಲ ಆದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಅವರು ತಿಳಿಸಿದರು.

      ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ ಮಾಧುಸ್ವಾಮಿ, ಅರಣ್ಯ ಸಚಿವ ಆನಂದ್‍ಸಿಂಗ್, ವಿಧಾನ ಪರಿಷತ್ ಶಾಸಕಾರದ ವೈ.ಎ ನಾರಾಣಸ್ವಾಮಿ, ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ತಹಶೀಲ್ದಾರ್ ತೇಜಸ್ವಿನಿ ಮತ್ತಿತರು ಹಾಜರಿದ್ದರು.

        ಜಿಲ್ಲಾಧಿಕಾರಿ ಕಛೇರಿಯಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನೆ : ಜಿಲ್ಲೆಯಲ್ಲಿರುವ ಕಂದಾಯ ಇಲಾಖೆಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆಯನ್ನು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ನಡೆಸಿದರು. ಪ್ರತಿಯೊಂದು ಹಳ್ಳಿಯಲ್ಲಿಯೂ ಸಾರ್ವಜನಿಕ ಸ್ಮಶಾನವಿರಬೇಕು. ಗ್ರಾಮಗಳಲ್ಲಿ ಸಮುದಾಯಕ್ಕೊಂದು ರುದ್ರಭೂಮಿಬೇಕು ಎಂದು ಕೇಳಿದರೆ ಅವರ ಸ್ವಂತ ಜಮೀನುಗಳಿದ್ದರೆ, ಅಂತಹವರು ರುದ್ರಭೂಮಿಗೆ ಸಮುದಾಯದ ಹೆಸರನ್ನು ಇಟ್ಟುಕೊಳ್ಳಬಹುದು ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 333 ಗ್ರಾಮಗಳಲ್ಲಿ ರುದ್ರಭೂಮಿಗೆ ಅವಶ್ಯಕತೆಯಿದ್ದು, ಅವುಗಳನ್ನು ಮುಂದಿನ 2 ತಿಂಗಳೊಳಗಾಗಿ ವ್ಯವಸ್ಥೆ ಕಲ್ಪಿಸಬೇಕು. ಜಾತಿಗಳಿಗೆ ಪ್ರತ್ಯೇಕವಾಗಿ ಸ್ಮಶಾನ ನೀಡಲು ನಿಯಮದಲ್ಲಿ ಅವಕಾಶವಿಲ್ಲ ಎಂದರು.

      ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ಅವರು ಮಾತನಾಡಿ, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದ್ದು, ಕಳೆದ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತ್ಯುತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲಿದ್ದೇವೆ. ಈ ಬಾರಿ 163 ಮನೆಗಳು ಹಾನಿಯಾಗಿದ್ದು, ಹಾನಿಯಾದ ಕುಟುಂಬಗಳಿಗೆ ಆಯಾ ತಾಲೂಕು ತಹಶೀಲ್ದಾರ್ ಕಡೆಯಿಂದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಜಿಲ್ಲೆಯಾದ್ಯಂತ ಈ ತಿಂಗಳಲ್ಲಿ 4 ಸಾವಿರ ಟನ್ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯಿದೆ. ನಮ್ಮಲ್ಲಿ 5ಸಾವಿರ ಟನ್ ಗೊಬ್ಬರವನ್ನು ಸಂಗ್ರಹಣೆ ಮಾಡಲಾಗಿದೆ. ರೈತರಿಗೆ ಇದರಿಂದ ಯಾವುದೇ ರೀತಿಯ ಗೊಬ್ಬರದ ಕೊರತೆಯಾಗುವುದಿಲ್ಲ. ಅಗತ್ಯವಿರುವ ಕಡೆ ಸಹಕಾರ ಸಂಘಗಳ ಮೂಲಕ ಗೊಬ್ಬರವನ್ನು ರೈತರಿಗೆ ವಿತರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

      ಎಲ್ಲಾ ಪಿಂಚಣಿ ಯೋಜನೆಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿ ಮಾಡಿಸಬೇಕು. ಪೋಸ್ಟ್ ಆಫೀಸ್ ಬದಲಾಗಿ ಬ್ಯಾಂಕುಗಳಿಗೆ ಹಣ ಜಮೆಯಾಗುವಂತೆ ಮಾಡಬೇಕು ಎಂದು ಸಚಿವರು ತಹಶೀಲ್ದಾರ್‍ಗಳಿಗೆ ಸೂಚಿಸಿದರು.

      ಸಭೆಯಲ್ಲಿ ಶಾಸಕರುಗಳಾದ ಜಿ.ಬಿ.ಜ್ಯೋತಿಗಣೇಶ್, ಜಯರಾಂ, ನಾಗೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ: ಕೊನ ವಂಶಿಕೃಷ್ಣ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ ಸೇರಿದಂತೆ ಉಪವಿಭಾಗಾದಿಕಾರಿ, ತಾಲ್ಲೂಕು ಮಟ್ಟದ ತಹಶೀಲ್ದಾರರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಿದ್ದರು. 

(Visited 8 times, 1 visits today)

Related posts