ಪಿ.ಎಂ.ಎಸ್.ವೈ.ಎಂ. ಯೋಜನೆಯಡಿ ಫಲಾನುಭವಿಗಳಾಗಲು ನೋಂದಾಯಿಸಿಕೊಳ್ಳಿ – ಡಿಸಿ

ತುಮಕೂರು :

      ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಯೋಜನೆಯಡಿ ಫಲಾನುಭವಿಗಳಾಗಲು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ.) ಗಳಲ್ಲಿ ನೋಂದಾಯಿಸಿಕೊಳ್ಳಿ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್ ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿಂದು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ (ಪಿ.ಎಂ-ಎಸ್.ವೈ.ಎಂ) ಯೋಜನೆ, ವ್ಯಾಪಾರಿಗಳು ಹಾಗೂ ಸ್ವಯಂ ಉದ್ಯೋಗಿಗಳಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಹಾಗೂ ಬಾಲಕಾರ್ಮಿಕ ಮತ್ತು ಕಿಶೋರಾವಸ್ಥೆ ಕಾರ್ಮಿಕ ಪದ್ಧತಿ ವಿರುದ್ಧ ಜನ ಜಾಗೃತಿ ಮೂಡಿಸುವ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

      ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಗೃಹ ಆಧಾರಿತ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಬಿಸಿಯೂಟ ಸಿದ್ಧಪಡಿಸುವವರು, ಹಮಾಲಿಗಳು, ಇಟ್ಟಿಗೆ ಭಟ್ಟಿ ಕಾರ್ಮಿಕರು, ಚಮ್ಮಾರರು, ಚಿಂದಿ ಆಯುವವರು, ಮನೆ ಕೆಲಸದವರು, ಅಗಸರು, ರಿಕ್ಷಾ ಚಾಲಕರು, ಭೂರಹಿತ ಕಾರ್ಮಿಕರು, ಸ್ವಯಂ ಉದ್ಯೊಗಿಗಳು, ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀಡಿ ಕಾರ್ಮಿಕರು, ಕೈಮಗ್ಗ ಕಾರ್ಮಿಕರು, ಚರ್ಮೋದ್ಯಮದ ಕಾರ್ಮಿಕರು, ಧ್ವನಿ ಮತ್ತು ದೃಶ್ಯ ಕಾರ್ಮಿಕರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದರು.

     ಸದರಿ ಕಾರ್ಮಿಕರು 18 ವರ್ಷ ರಿಂದ 40 ವರ್ಷದೊಳಗಿನ, ಮಾಸಿಕ 15 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯವಿರುವ ಕಾರ್ಮಿಕರನ್ನು ಹತ್ತಿರದ ಕಾಮನ್ ಸರ್ವೀಸ್ ಸೆಂಟರ್ (ಸಿ.ಎಸ್.ಸಿ.) ಗಳಲ್ಲಿ ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲಾಗುತ್ತಿದೆ ಎಂದರಲ್ಲದೆ, ಸಿ.ಎಸ್.ಸಿ.ಗಳ ವಿವರಗಳನ್ನು ಹತ್ತಿರದ ಎಲ್.ಐ.ಸಿ. ಶಾಖೆಗಳು, ಕಾರ್ಮಿಕ ಇಲಾಖೆ, ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆ, ಇ.ಎಸ್.ಐ. ಕಾರ್ಪೋರೇಶನ್ ಹಾಗೂ ಭವಿಷ್ಯನಿಧಿ ಸಂಘಟನೆಗಳ ಕಛೇರಿಗಳು ಹಾಗೂ ಇಲಾಖೆಯ ವೆಬ್‍ಸೈಟ್ http://locator.csccloud.in ಗಳಲ್ಲಿ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

      ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಗೆ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಹಾಗೂ ಫಲಾನುಭವಿಯು ವಯಸ್ಸು 60 ವರ್ಷ ಪೂರ್ಣಗೊಂಡ ನಂತರ ತಿಂಗಳಿಗೆ 3,000 ರೂ.ಗಳ ಖಚಿತ ಕನಿಷ್ಠ ಮಾಸಿಕ ಪಿಂಚಣಿಯನ್ನು ಪಡೆಯಲು ಅರ್ಹರಾಗುತ್ತಾರೆ ಎಂದರು.

       ಜಿಲ್ಲೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಸದರಿ ಅಸಂಘಟಿತ ವಲಯದ ಕಾರ್ಮಿಕರು ಆಧಾರ್ ಸಂಖ್ಯೆ, ಮೊಬೈಲ್ ಹ್ಯಾಂಡ್‍ಸೆಟ್, ಎಸ್.ಬಿ.ಖಾತೆ ಹಾಗೂ ಆರಂಭಿಕ ವಂತಿಕೆಯೊಂದಿಗೆ ಸ್ಥಳೀಯ ಸಿ.ಎಸ್.ಸಿ. ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು ಪಿಂಚಣಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ ಎಂದು ಅವರು ಹೇಳಿದರು.

     ಈ ಸಂದರ್ಭದಲ್ಲಿ ಜಿಲ್ಲೆಯ ಕಾರ್ಮಿಕ ಅಧಿಕಾರಿ ಸುಭಾಷ್ ಎಂ. ಆಲದಕಟ್ಟಿ, ಇಲಾಖೆಯ ಕಾರ್ಮಿಕ ನಿರೀಕ್ಷಕರುಗಳು, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್.ನಟರಾಜ್, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆಯ ಜಂಟಿ ನಿರ್ದೇಶಕ ಸೇರಿದಂತೆ ಸಂಘ ಸಂಸ್ಥೆಗಳ ಕಾರ್ಮಿಕರು ಹಾಜರಿದ್ದರು.

(Visited 29 times, 1 visits today)

Related posts

Leave a Comment