ಪೀಕ್ ಅವರ್‍ನಲ್ಲಿ ಬಸ್ ಸಂಚಾರ ಅಂತರ ನಿಗಧಿಪಡಿಸಿ-ಸಚಿವ

ತುಮಕೂರು :

      ಕಚೇರಿ ಹಾಗೂ ಶಾಲಾ ಸಮಯದಂತಹ ಫೀಕ್ ಅವರ್‍ನಲ್ಲಿ ಬಸ್ಸುಗಳ ಸಂಚಾರ ಅಂತರದ ಸಮಯವನ್ನು ನಿಗದಿಪಡಿಸಿ ಹಾಗೂ ಜಿಲ್ಲೆಯಲ್ಲಿರುವ ಸಂಚಾರ ದಟ್ಟನೆಗೆ ತಕ್ಕಂತೆ ಬಸ್ಸುಗಳ ಟ್ರಿಪ್‍ಗಳನ್ನು ರೂಪಿಸುವಂತೆ ಕಾನೂನು ಹಾಗೂ ಸಂಸದೀಯ ವ್ಯವಹಾರಗಳು ಸಣ್ಣ ನೀರಾವರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜೆ ಸಿ ಮಾಧುಸ್ವಾಮಿ ಅವರು ಜಿಲ್ಲಾಧಿಕಾರಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ನಡೆದ ಜಿಲ್ಲಾ ಸುರಕ್ಷತಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

      ಮಧುಗಿರಿ ರಸ್ತೆಯಲ್ಲಿ ಸಂಚರಿಸುವ ಖಾಸಗಿ ಬಸ್ಸುಗಳ ಸಂಚಾರ ಸಮಯದಲ್ಲಿ ಅಂತರವಿರಬೇಕು. ಈ ಬಸ್ಸುಗಳು ಮಾರ್ಗ ಮಧ್ಯದಲ್ಲಿ ಬರುವ ಹಳ್ಳಿಗಳ ಜನರನ್ನು ಹಾಗೂ ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳುವುದಿಲ್ಲ ಎಂದು ದೂರುಗಳನ್ನು ಸಾರ್ವಜನಿಕರಿಂದ ಕೇಳಿದ್ದೇವೆ. ಶಾಲಾ ಮಕ್ಕಳನ್ನು ಹತ್ತಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್‍ಗಳನ್ನು ಓಡಿಸಲಾಗುವುದು ಎಂದು ಖಾಸಗಿ ಬಸ್ ಮಾಲೀಕರಿಗೆ ತಿಳಿಸಿದರು.

      ಗುಬ್ಬಿ, ಹುಳಿಯಾರು, ಮಧುಗಿರಿ ಹಾಗೂ ಪಾವಗಡ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೆಚ್ಚಿನ ಸಮಯದಲ್ಲಿ ಕೆಎಸ್ಸಾರ್ಟಿಸಿ ಬಸ್‍ಗಳನ್ನು ಓಡಿಸಬೇಕು ಎಂದರಲ್ಲದೇ ಬಸ್‍ಗಳ ವೇಳಾಪಟ್ಟಿಯ ಸಮಯವನ್ನು ಬದಲಾಯಿಸಿ ಬಸ್ಸುಗಳಿಂದ ಸಾರ್ವಜನಿಕರಿಗೆ ಅನುಕೂಲವಾಗಬೇಕು. ಎಲ್ಲಾ ಹಳ್ಳಿಗಳಿಗೂ ಬಸ್ ಸಂಪರ್ಕ ಕಲ್ಪಿಸಿ ಜಾತ್ರೆ, ಮಕ್ಕಳು ಶಾಲೆಗೆ ಹೋಗುವ ಸಮಯ, ಗಾರ್ಮೆಂಟ್ಸ್‍ಗಳಿಗೆ ಕಾರ್ಮಿಕರು, ತೆರಳುವ ಸಮಯ, ರಜಾ ಮುಗಿದ ನಂತರದ ದಿನಗಳಲ್ಲಿ ಹೆಚ್ಚಿನ ಬಸ್ ಓಡಿಸಬೇಕು. ಗಾರ್ಮೆಂಟ್ಸ್‍ಗಳಲ್ಲಿ ಕೆಲಸ ಮಾಡುವ ಮಹಿಳೆಯರು ಹೆಚ್ಚಿನದಾಗಿ ಆಟೋ, ಗೂಡ್ಸ್ ಆಟೋ ಸೇರಿದಂತೆ ಸ್ಥಳೀಯವಾಗಿ ಸಿಗುವ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಇಂತಹವರಿಗೆ ಬಸ್‍ಪಾಸ್‍ಗಳನ್ನು ವಿತರಿಸಿ ಅವರು ಕೆಲಸಕ್ಕೆ ತೆರಳುವ ಸಮಯಗಳಲ್ಲಿ ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಸೂಚಿಸಿದರು.

      ತುಮಕೂರು ಜಿಲ್ಲೆಯ ಟ್ರಾಫಿಕ್ ತಕ್ಕಂತೆ ಟ್ರೀಪ್‍ಗಳನ್ನು ರೂಪಿಸಿ ಬಸ್ಸುಗಳನ್ನು ಓಡಿಸಲು ಕಾರ್ಯಕ್ರಮವನ್ನು ರೂಪಿಸುವಂತೆ ಜಿಲ್ಲಾಧಿಕಾರಿ ಹಾಗೂ ಆರ್‍ಟಿಓ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

      ಬ್ಲಾಕ್‍ಸ್ಪಾಟ್‍ಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹೆದ್ದಾರಿ ರಸ್ತೆಗಳನ್ನು ಸಂಪರ್ಕಿಸುವ ಹಳ್ಳಿ ರಸ್ತೆಗಳಲ್ಲಿ ಹಮ್ಸ್ಪ್ ಹಾಕಬೇಕು ಎಂದು ಜಿಲ್ಲಾ ಪಂಚಾಯತ್ ಸಿಇಓಗೆ ಸೂಚಿಸಿದರಲ್ಲದೇ ಹೆದ್ದಾರಿಗಳಲ್ಲಿ ಅವಘಡಗಳು ನಡೆದರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಸಿದರು.

      ಸ್ಮಾರ್ಟ್‍ಸಿಟಿ ಯೋಜನೆಯಡಿ ಯುಜಿಡಿ, ಬೆಸ್ಕಾಂ, ಮತ್ತಿತರ ನಾಗರಿಕ ಸೌಲಭ್ಯಗಳ ಕಾಮಗಾರಿಗಳನ್ನು ಮುಗಿಸಿದ ನಂತರ ರಸ್ತೆ ಅಭಿವೃದ್ಧಿ ಕೈಗೊಳ್ಳಬೇಕು. ರಸ್ತೆ ಸಂಚಾರಕ್ಕೆ ಅಡ್ಡಿಯಾಗದಂತೆ ರಸ್ತೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

      ಸಭೆಯಲ್ಲಿ ಶಾಸಕರಾದ ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಡಾ|| ರಾಕೇಶ್‍ಕುಮಾರ್ ಜಿಲ್ಲಾ ಪಂಚಾಯತ್ ಸಿಇಓ ಶುಭಾ ಕಲ್ಯಾಣ್, ಪೊಲೀಸ್ ವರಿಷ್ಠಾಧಿಕಾರಿ ಡಾ|| ಕೋನವಂಶಿಕೃಷ್ಣ, ಸಾರಿಗೆ ಇಲಾಖೆ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 13 times, 1 visits today)

Related posts

Leave a Comment