ಪೊಕ್ಸೊ ಕಾಯ್ದೆಯಡಿ ಜಿಲ್ಲೆಯಲ್ಲಿ 18 ಆರೋಪಿಗಳಿಗೆ ಶಿಕ್ಷೆ – ದಂಡ

ತುಮಕೂರು:

      ಜಿಲ್ಲೆಯಲ್ಲಿ ಪೊಕ್ಸೊ ಕಾಯ್ದೆ-2012ರಡಿ ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ 11 ಪ್ರಕರಣಗಳಿಗೆ ಸಂಬಂಧಿಸಿದಂತೆ 2019-20 ಹಾಗೂ 2020-21ನೇ ಸಾಲಿನಲ್ಲಿ 18 ಆರೋಪಿಗಳಿಗೆ ಶಿಕ್ಷೆ ನೀಡಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ತಿಳಿಸಿದ್ದಾರೆ.

      ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳಲ್ಲಿ ಸೂಕ್ತ ತನಿಖೆ ನಡೆಸಿ ಆರೋಪಿಗಳಿಗೆ ಒಂದು ವರ್ಷದಿಂದ ಜೀವಾವಧಿಯವರೆಗೂ ಕಠಿಣ ಶಿಕ್ಷೆ ಹಾಗೂ ದಂಡ ವಿಧಿಸಲು ಪೊಕ್ಸೊ ಕಾಯ್ದೆ ಸಹಕಾರಿಯಾಗಿದ್ದು, ಈ ಕಾಯ್ದೆಯಡಿ 18 ವರ್ಷದೊಳಗಿನ ಗಂಡು ಮತ್ತು ಹೆಣ್ಣು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೊಳಗಾದಾಗ ದೂರನ್ನು ದಾಖಲಿಸಲು ಅವಕಾಶವಿರುತ್ತದೆ. ಇಂತಹ ದೂರುಗಳ ವಿಚಾರಣೆಗಾಗಿ ರಾಜ್ಯದಲ್ಲಿ “ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯ”ವನ್ನು ಸ್ಥಾಪಿಸಲಾಗಿದ್ದು, ತುಮಕೂರಿನಲ್ಲಿಯೂ ಸದರಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ.

      ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ಮಕ್ಕಳ ಸ್ನೇಹಿ ವಿಶೇಷ ನ್ಯಾಯಾಲಯವನ್ನು ಫಾಸ್ಟ್ ಟ್ರ್ಯಾಕ್ ಕೋರ್ಟ್ (Fast track Court) ಎಂದು ಇತ್ತೀಚೆಗೆ ಪರಿವರ್ತಿಸಲಾಗಿದ್ದು, ಈ ಫಾಸ್ಟ್ ಟ್ರ್ಯಾಕ್ ಕೋರ್ಟ್‍ನಲ್ಲಿ 2019-20 ಹಾಗೂ 2020-21ನೇ ಸಾಲಿನಲ್ಲಿ ಈವರೆಗೆ ಶಿಕ್ಷೆ ಪ್ರಕಟಿಸಿದ 11 ಪ್ರಕರಣಗಳಲ್ಲಿ ಒಟ್ಟು 18 ಆರೋಪಿಗಳಿಗೆ ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗಿದೆ. ಈ ಪೈಕಿ ಇಬ್ಬರು ಆರೋಪಿಗಳಿಗೆ 20 ವರ್ಷ ಶಿಕ್ಷೆ ಹಾಗೂ ತಲಾ 5,000 ರೂ. ದಂಡ, ಒಬ್ಬ ಆರೋಪಿಗೆ 15 ವರ್ಷ ಶಿಕ್ಷೆ ಹಾಗೂ 50,000 ರೂ. ದಂಡ, ಇಬ್ಬರು ಆರೋಪಿಗಳಿಗೆ 12 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 5,000 ರೂ. ದಂಡ, 3 ಜನ ಆರೋಪಿಗಳಿಗೆ 5 ವರ್ಷ ಶಿಕ್ಷೆ ಹಾಗೂ ತಲಾ 20,000 ರೂ. ದಂಡ, 5 ಜನ ಆರೋಪಿಗಳಿಗೆ 5 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 5,000 ರೂ. ದಂಡ, ಇಬ್ಬರು ಆರೋಪಿಗಳಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ ತಲಾ 5,000 ರೂ. ದಂಡ, ಒಬ್ಬ ಆರೋಪಿಗೆ 3 ವರ್ಷ ಶಿಕ್ಷೆ ಹಾಗೂ 20,000 ರೂ. ದಂಡ, ಒಬ್ಬ ಆರೋಪಿಗೆ 2 ವರ್ಷ ಶಿಕ್ಷೆ ಹಾಗೂ 50,000 ರೂ. ದಂಡ, ಒಬ್ಬ ಆರೋಪಿಗೆ 3 ವರ್ಷ ಕಠಿಣ ಶಿಕ್ಷೆ ಹಾಗೂ 25,000 ರೂ.ಗಳ ದಂಡವನ್ನು ವಿಧಿಸಲಾಗಿದೆ.

      ಅಸಹಾಯಕ, ಮುಗ್ಧ ಮಕ್ಕಳನ್ನು ಸುಲಭವಾಗಿ ದುರ್ಬಳಕೆ ಮಾಡಿಕೊಳ್ಳಬಹುದು ಹಾಗೂ ಅವರಲ್ಲಿ ಭಯ ಹುಟ್ಟಿಸಿ ಲೈಂಗಿಕ ದೌರ್ಜನ್ಯ ಎಸಗಬಹುದೆಂದು ಯೋಚಿಸುವ ವಿಕೃತ ಮನಸ್ಥಿತಿಯುಳ್ಳವರು ಅತ್ಯಂತ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಮಕ್ಕಳ ಮೇಲೆ ಗಂಭೀರ ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ರೀತಿಯ ಸಣ್ಣ ಲೈಂಗಿಕ ದೌರ್ಜನ್ಯ ಎಸಗುವವರಿಗೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೌರ್ಜನ್ಯ ನಡೆದ ಪ್ರಕರಣದಲ್ಲಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಹಾಗೂ ಅವರಿಗೆ ಸೂಕ್ತ ಶಿಕ್ಷೆಯಾಗುವಂತೆ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಕಾನೂನು ಪರಿವೀಕ್ಷಣಾಧಿಕಾರಿ, ವೈದ್ಯಕೀಯ ತಪಾಸಣೆ ಮಾಡುವ ವೈದ್ಯರು ಹಾಗೂ ನ್ಯಾಯಾಲಯದಲ್ಲಿ ವಾದ ಮಂಡಿಸುವ ವಿಶೇಷ ಅಭಿಯೋಜಕರು ಸೇರಿದಂತೆ ಎಲ್ಲರೂ ಅತ್ಯಂತ ದಕ್ಷತೆ ಹಾಗೂ ಕಾಳಜಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

      ಪೊಕ್ಸೊ ಪ್ರಕರಣಗಳಲ್ಲಿ ಆರೋಪಿಗಳ ಮೇಲೆ ಃuಡಿಜeಟಿ oಜಿ Pಡಿooಜಿ (ಪುರಾವೆ ಹೊರೆ) ಇರುವುದರಿಂದ ಇಂತಹ ಪ್ರಕರಣಗಳಲ್ಲಿ ಆರೋಪಿಗಳಾಗುವವರು ಶಿಕ್ಷೆಯ ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಮಕ್ಕಳ ಮೇಲೆ ದೌರ್ಜನ್ಯ ಎಸಗುವ ಆಲೋಚನೆ ಇರುವ ವಿಕೃತ ಮನಸ್ಸುಳ್ಳವರು ಉತ್ತಮ ನಡವಳಿಕೆಯನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ.

      ಸಾರ್ವಜನಿಕರೂ ಸಹ ಪೊಕ್ಸೊ ಕಾಯ್ದೆ ಬಗ್ಗೆ ತಿಳಿದುಕೊಳ್ಳುವುದು ಹಾಗೂ ಇತರರಿಗೂ ತಿಳಿಸುವುದು ಮುಖ್ಯವಾಗಿರುತ್ತದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿರುವುದು ಕಂಡು ಬಂದಲ್ಲಿ ಮಕ್ಕಳ ಸಹಾಯವಾಣಿ 1098, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೂ.ವಾ.ಸಂ. 0816-2260021, ಪೊಲೀಸ್ ಇಲಾಖೆಯ 112 ಸಂಖ್ಯೆಗೆ ಮಾಹಿತಿ ನೀಡಬೇಕು. ಮಾಹಿತಿ ನೀಡಿದವರ ವಿವರವನ್ನು ಗೌಪ್ಯವಾಗಿಡಲಾಗುವುದು ಎಂದು ಅವರು ತಿಳಿಸಿದ್ದಾರೆ.

(Visited 2 times, 1 visits today)

Related posts

Leave a Comment