ಪೊಕ್ಸೊ ಕಾಯ್ದೆಯಡಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು – ಡಿಸಿ ಡಾ||ಕೆ.ರಾಕೇಶ್‍ಕುಮಾರ್

ತುಮಕೂರು :

         ತುಮಕೂರು ಜಿಲ್ಲೆಯಲ್ಲಿ 2019-20ನೇ ಸಾಲಿನಲ್ಲಿ ಪೊಕ್ಸೊ ಕಾಯ್ದೆಯಡಿ 105 ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ 11 ಖುಲಾಸೆಯಾಗಿದ್ದು, 2 ಶಿಕ್ಷೆಯಾಗಿದೆ ಉಳಿದ 92 ಪ್ರಕರಣಗಳು ಬಾಕಿಯಿವೆ. ಒಮ್ಮೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾದರೆ ಯಾರೇ ತಪ್ಪಿತಸ್ಥರಿದ್ದರೂ ಅವರಿಗೆ ಕಾನೂನಿನಡಿಯಲ್ಲಿ ಶಿಕ್ಷೆ ಆಗಬೇಕು ಆಗ ಮಾತ್ರ ಇಂತಹ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ಜಿಲ್ಲಾಧಿಕಾರಿ ಡಾ||ಕೆ.ರಾಕೇಶ್‍ಕುಮಾರ್ ತಿಳಿಸಿದರು.

       ಅವರು ಇಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಗ್ರ ಮಕ್ಕಳ ರಕ್ಷಣಾ ಯೋಜನೆ ಹಾಗೂ ಜಿಲ್ಲಾಮಟ್ಟದ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. ಪೊಕ್ಸೊ ಕಾಯ್ದೆಯಡಿ ಪ್ರಕರಣಗಳ ಸರಿಯಾದ ತನಿಖೆಯಾಗಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಮತ್ತು ತೊಂದರೆಗೊಳಗಾದವರಿಗೆ ನ್ಯಾಯ ದೊರಕಿಸಬೇಕೆಂದು ಅವರು ಹೇಳಿದರು.

      ಬಾಲಕಿಯರ ಬಾಲಮಂದಿರಗಳಲ್ಲಿ ಗೃಹಪಾಲಕರ ಪುರುಷ ಸಿಬ್ಬಂದಿಯ ಬದಲು ಮಹಿಳಾ ಸಿಬ್ಬಂದಿಯರವನ್ನು ನೇಮಿಸಬೇಕು ಹಾಗೂ ರಾತ್ರಿ ಕಾವಲುಗಾರರಾಗಿ ಗೃಹರಕ್ಷದಳದ ಸೇವೆಯನ್ನು ಪಡೆಯಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.

      ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಮತ್ತು ಶಿಸ್ತು ಹೊರತುಪಡಿಸಿ, ಹೊಡೆಯುವುದು ಹೀನಾಯವಾಗಿ ಕಾಣುವುದು ಮತ್ತು ಆತ್ಮಹತ್ಯೆ ಮಾಡಿಕೊಳ್ಳುವಂತಹ ಒತ್ತಡ ಹೇರದಂತೆ ಸಂಬಂಧಿಸಿದ ವಸತಿ ಶಾಲೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ ಸರಿಯಾದ ಕ್ರಮ ಜರುಗಿಸಬೇಕು. ಇದಕ್ಕಾಗಿ ರಕ್ಷಣಾ ಇಲಾಖೆಯ ಸಹಕಾರ ಪಡೆಯಬೇಕೆಂದು ಅವರು ತಿಳಿಸಿದರು.

      ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಕ್ಕಳ ರಕ್ಷಣಾ ಕೇಂದ್ರಗಳಿಗೆ ಮತ್ತು 567 ಶಾಲೆಗಳಿಗೆ ಕಾಪೌಂಡ್, ವಾಟರ್ ಫಿಲ್ಟರ್ ವ್ಯವಸ್ಥೆ ಮಾಡಿಕೊಡುವಂತೆ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಿಗೆ ತಿಳಿಸಿದರು. ಶಾಲೆ ಬಿಟ್ಟ ಮಕ್ಕಳನ್ನು ಮರು ಶಾಲೆಗೆ ಕರೆದು ತರುವುದು ಮತ್ತು ಶಾಲೆಗೆ ದಾಖಲಾಗದೇ ಇರುವ ಅಲೆಮಾರಿ ಜನಗಳ ಮಕ್ಕಳನ್ನು ಸಹ ಶಾಲೆಗೆ ಸೇರಿಸುವಲ್ಲಿ ಅಧಿಕಾರಿಗಳು ನಿಗಾವಹಿಸಿ ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.

      ಬಾಲ್ಯವಿವಾಹ ನಿಷೇಧ, ಮಕ್ಕಳ ಮಾರಾಟ ಸಾಗಾಣಿಕೆ, ಮಕ್ಕಳ ಹಕ್ಕು ಮತ್ತು ಮಹಿಳೆಯರ ರಕ್ಷಣೆ ಕುರಿತು ಇಲಾಖೆ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕೆಂದು ಅವರು ತಾಕೀತು ಮಾಡಿದರು. ಪರಿತ್ಯಕ್ತ ಮಕ್ಕಳನ್ನು ಮೊದಲು ಇಲಾಖೆ ವ್ಯಾಪ್ತಿಯಲ್ಲಿ ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಮಾಡಿ ದತ್ತು ಕೊಡುವ ವ್ಯವಸ್ಥೆ ಮುಂದುವರೆಸಬೇಕೆಂದು ಅವರು ಸಲಹೆ ಮಾಡಿದರು. 

      ಬಾಲ ನ್ಯಾಯ ಮಂಡಳಿಯಲ್ಲಿ 66 ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 8 ಪ್ರಕರಣಗಳು ಇತ್ಯರ್ಥಗೊಂಡಿದ್ದು, 58 ಪ್ರಕರಣಗಳು ಬಾಕಿಯಿವೆ. ಪರಿತ್ಯಕ್ತ ಮಕ್ಕಳ ಸ್ವೀಕಾರದ ಬಗ್ಗೆ ಜಿಲ್ಲೆಯಲ್ಲಿ 344 ಶಿಬಿರಗಳನ್ನು ನಡೆಸಿ ಜಾಗೃತಿ ಮೂಡಿಸಲಾಗಿದೆ ಎಂದು ಮಹಿಳಾ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಸಭೆಗೆ ಮಾಹಿತಿ ನೀಡಿದರು.

      ಸಭೆಯಲ್ಲಿ ವಿಶೇಷ ಪಾಲನಾ ಯೋಜನೆ, ಪ್ರಾಯೋಗಿಕ ಕಾರ್ಯಕ್ರಮಗಳ ಪ್ರಗತಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು, ತಾಲೂಕುಮಟ್ಟದ ಮಕ್ಕಳಾ ರಕ್ಷಣಾ ಸಮಿತಿ ಹಾಗೂ ಪಾಲನಾ ಸಂಸ್ಥೆಗಳಿಗೆ ಜಿಲ್ಲಾ ಸಮಿತಿ ಭೇಟಿ ನೀಡಿ ವಿವರ ನೀಡಿದ ಬಗ್ಗೆ ಚರ್ಚಿಸಲಾಯಿತು.

      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

(Visited 7 times, 1 visits today)

Related posts

Leave a Comment