ಪ್ರಪಂಚದ ಮುಂದುವರೆದ ದೇಶಗಳು ಡಾ.ಬಿ.ಆರ್.ಅಂಬೇಡ್ಕರ್ ರನ್ನು ಸ್ಮರಿಸುತ್ತವೆ

ತುಮಕೂರು:

     ಪ್ರಪಂಚದ ಮುಂದುವರೆದ ದೇಶಗಳು ಡಾ.ಬಿ.ಆರ್.ಅಂಬೇಡ್ಕರ್ ರನ್ನು ಸ್ಮರಿಸುತ್ತವೆ ಎಂದು ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷರಾದ ಎನ್.ಕೆ. ನಿಧಿಕುಮಾರ್ ತಿಳಿಸಿದರು.

      ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಹಾಗೂ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 62ನೇ ಮಹಾಪರಿನಿರ್ವಾಣ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಶೋಷಿತ ಸಮುದಾಯದ ಏಳ್ಗೆಗಾಗಿ ಶ್ರಮಿಸಿದ ಡಾ.ಅಂಬೇಡ್ಕರ್ ಅವರು, ಕಡುಬಡತನದ ನಡುವೆಯೇ ಭಾರತಕ್ಕೆ ಪ್ರಪಂಚದಲ್ಲಿಯೇ ಶ್ರೇಷ್ಠ ಸಮುದಾಯವನ್ನು ನೀಡಿದವರು. ದೇಶದ ಮೂಲ ನಿವಾಸಿಗಳಾದ ದಲಿತರ ಮೇಲಿನ ಅಸ್ಪಶ್ಯತೆ ವಿರುದ್ಧ ಹೋರಾಡಿದ ಫಲವಾಗಿಯೇ ಸಂವಿಧಾನವನ್ನು ಸಮಾನತೆಯ ತಳಹದಿಯ ಮೇಲೆ ರೂಪಿಸಿದ್ದಾರೆ ಎಂದರು.

       ಅತ್ಯಂತ ಬಲಿಷ್ಠ ಸಂವಿಧಾನವನ್ನು ರೂಪಿಸಿದ ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಲೇ ಇಲ್ಲ ಎನ್ನುವಂತಹ ಸುಳ್ಳು ವದಂತಿಗಳನ್ನು ವ್ಯವಸ್ಥಿತವಾಗಿ ಹರಡುತ್ತಿದ್ದು, ಯುವ ಸಮುದಾಯ ಅಂಬೇಡ್ಕರ್ ಅವರ ಬಗ್ಗೆ ಅರಿಯುವ ಅವಶ್ಯಕತೆ ಇದೆ. ಭಾರತದ ಸಂವಿಧಾನದ ಆತ್ಮ ಅಂಬೇಡ್ಕರ್ ಎನ್ನುವುದನ್ನು ಯಾರು ಅಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

      ಜಿಲ್ಲಾ ಛಲವಾದಿ ಮಹಾಸಭಾದ ಉಪಾಧ್ಯಕ್ಷರಾದ ಸಿ.ಭಾನುಪ್ರಕಾಶ್ ಮಾತನಾಡಿ, ದಲಿತ ಸೂರ್ಯ ಡಾ.ಬಿ.ಆರ್.ಅಂಬೇಡ್ಕರ್ ದಲಿತರಿಗಷ್ಟೇ ಬೆಳಕು ನೀಡಲಿಲ್ಲ, ಸಮಾನತೆ, ಸ್ವಾತಂತ್ರ್ಯ, ಭಾತೃತ್ವದ ತಳಹದಿಯ ಮೇಲೆ ರೂಪಿಸಿದ ಸಂವಿಧಾನದ ಮೂಲಕ ಈ ದೇಶದ ಜನರಿಗೆ ಸ್ವಾತಂತ್ರ್ಯವನ್ನು ಕಲ್ಪಿಸಿದ್ದಾರೆ. ಅಸ್ಪøಶ್ಯತೆಯ ಕರಾಳತೆಯನ್ನು ಅನುಭವಿಸಿದ ಅವರು ಹಿಂದೂ ಧರ್ಮವನ್ನು ತೊರೆದು ಸಾವಿರಾರು ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರವಾಗುವ ಮೂಲಕ ಸಮಾನತೆಯ ಸ್ವಾತಂತ್ರ್ಯ ವಿಲ್ಲದ ಧರ್ಮದಲ್ಲಿ ಜೀವಿಸಲಾರೆ ಎಂದು ಸಾರಿ ಹೇಳಿದವರು ಎಂದರು.

      ಬದುಕಿದ್ದಷ್ಟು ದಿನವೂ ದಲಿತರ ಏಳ್ಗೆಗಾಗಿ, ದಲಿತರ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಧೀಮಂತ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಎನ್ನುವುದನ್ನು ಎಲ್ಲರೂ ಒಪ್ಪಲೇಬೇಕಾದ ಸತ್ಯ. ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ಇಂದು ದಲಿತರು ಶಿಕ್ಷಣ, ಉದ್ಯೋಗವನ್ನು ಪಡೆಯುವ ಮೂಲಕ ಉತ್ತಮ ಜೀವನ ಕಂಡುಕೊಳ್ಳಲು ಸಾಧ್ಯವಾಗಿದೆ. ಎಲ್ಲ ಸಮುದಾಯಗಳ ಶೋಷಿತ ವರ್ಗಕ್ಕೆ ಧ್ವನಿಯನ್ನು ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಸ್ಮರಣಾರ್ಥ ಡಿಸೆಂಬರ್6ರಂದು ಬೌದ್ಧ ಧರ್ಮದಂತೆ ಪರಿನಿರ್ವಾಣ ದಿನವನ್ನು ಆಚರಿಸಲಾಗುತ್ತಿದೆ ಎಂದರು.

      ಅಖಿಲ ಭಾರತ ಡಾ.ಅಂಬೇಡ್ಕರ್ ಪ್ರಚಾರ ಸಮಿತಿ ಯುವ ಘಟಕದ ಜಿಲ್ಲಾಧ್ಯಕ್ಷ ಕೆ.ಗೋವಿಂದರಾಜು ಮಾತನಾಡಿ, ಇಂದಿನ ಯುವ ಸಮುದಾಯ ಅಂಬೇಡ್ಕರ್ ಅವರ ಸಾಧನೆ ಹಾಗೂ ಹಿನ್ನೆಲೆಯನ್ನು ತಿಳಿದುಕೊಳ್ಳದೇ ಅವರಿಗೆ ಅಪಮಾನವನ್ನುಂಟು ಮಾಡುವಂತೆ ಸಾ ಮಾಜಿಕ ಜಾಲತಾಣಗಳಲ್ಲಿ ಚರ್ಚಿಸಲಾಗುತ್ತಿದೆ. ಇದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಶಿಕ್ಷಿತ ಸಮುದಾಯ ಮುಂದಾಗಬೇಕಿದೆ. ಅಂಬೇಡ್ಕರ್ ಎಂದರೆ ದಲಿತರು ಎನ್ನುವಂತೆ ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅಂಬೇಡ್ಕರ್ ದಲಿತರಿಗೆ ಮಾತ್ರವಲ್ಲ ದೇಶದ ಎಲ್ಲ ಸಮುದಾಯಗಳಿಗೆ ಬೆಳಕನ್ನು ನೀಡಿದವರು ಎನ್ನುವ ಸತ್ಯವನ್ನು ಅರಿತುಕೊಳ್ಳಬೇಕಿದೆ ಎಂದು ತಿಳಿಸಿದರು. 

      ಕಾರ್ಯಕ್ರಮದಲ್ಲಿ ಹಿರಿಯ ದಲಿತ ಹೋರಾಟಗಾರ ಅಪ್ಪಾಜಿ, ಅಖಿಲ ಭಾರತ ಅಂಬೇಡ್ಕರ್ ಪ್ರಚಾರ ಸಮಿತಿ ಪ್ರಧಾನ ಕಾರ್ಯದರ್ಶಿ ಜಿ.ಆರ್.ಗಿರೀಶ್, ಛಲವಾದಿ ಶೇಖರ್, ಸಿದ್ದಲಿಂಗಯ್ಯ.ಸಿ.ಜಿ, ಚಿಕ್ಕಕೊರಟಗೆರೆ ಕುಮಾರ್, ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ್.ಜಿ.ಆರ್, ಸಿದ್ದರಾಜು ಕೆ.ಜಿ, ರಾಜೇಶ್.ಹೆಚ್.ಬಿ, ಊರ್ಡಿಗೆರೆ ಕೆಂಪರಾಜು, ರಾಮಾಂಜಿ, ಮಂಜುನಾಥ್, ಜಿ.ಎಸ್, ವೆಂಕಟೇಶ್, ಟಿ.ಆರ್.ನಾಗೇಶ್, ಕಲ್ಕೆರೆ ಶ್ರೀನಿವಾಸ್, ಎ.ರಂಜನ್, ಹಬ್ಬತ್ತನಹಳ್ಳಿ ಶ್ರೀನಿವಾಸ್, ಬಾಬಾ, ರಾಜಣ್ಣ, ಮಂಜು ಸೇರಿದಂತೆ ಇತರರು ಉಪಸ್ಥಿತರಿದ್ದರು.

(Visited 42 times, 1 visits today)

Related posts