‘ಬಸದಿ ಬೆಟ್ಟಕ್ಕೆ ರಸ್ತೆ ನಿರ್ಮಾಣದ ಕುರಿತು ಸಿಎಂರೊಟ್ಟಿಗೆ ಚರ್ಚಿಸುವೆ’ – ವಿಜಯೇಂದ್ರ

ತುಮಕೂರು : 

      ಮಂದಾರಗಿರಿಯ ಜೈನ ಬಸದಿ ಬೆಟ್ಟಕ್ಕೆ ರಸ್ತೆ ನಿರ್ಮಾಣಕ್ಕೆ ಅಗತ್ಯ ಇರುವ ಅನುದಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಶೀಘ್ರದಲ್ಲೇ ಒದಗಿಸಿಕೊಡುವುದಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿಜಯೇಂದ್ರ ಭರವಸೆ ನೀಡಿದರು.

      ನಗರದ ಹೊರವಲಯದಲ್ಲಿರುವ ಮಂದಗಿರಿಯ ಬಸದಿ ಬೆಟ್ಟಕ್ಕೆ ಭೇಟಿ ನೀಡಿ ಮುನಿಶ್ರೀಗಳ ಆಶೀರ್ವಾದ ಪಡೆದ ನಂತರ ಜೈನ ಸಮಾಜದ ಅಧ್ಯಕ್ಷರು ಮಾಡಿದ ಮನವಿಗೆ ಸ್ಪಂದಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲ ಸಮುದಾಯ, ಎಲ್ಲ ಧರ್ಮಗಳಿಗೂ ಅನುದಾನದ ನೆರವು ಒದಗಿಸುವ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತ್ತಾ ಬಂದಿದ್ದಾರೆ. ಹಾಗೆಯೇ ಹುಬ್ಬಳ್ಳಿ ಭಾಗದಲ್ಲೂ ಜೈನ ಸಮುದಾಯಕ್ಕೆ 2009 ರಲ್ಲಿ ಆರ್ಥಿಕ ನೆರವು ನೀಡಿದ್ದರು ಎಂದರು.

      ಮಂದರಗಿರಿ ಬೆಟ್ಟಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಪವಿತ್ರ ಕ್ಷೇತ್ರವಾಗಿರುವ ಈ ಸ್ಥಳಕ್ಕೆ ಇಷ್ಟು ವರ್ಷವಾದರೂ ಒಮ್ಮೆಯೂ ಬರಲು ಸಾಧ್ಯವಾಗಿರಲಿಲ್ಲ. ಇಂದು ಈ ಕ್ಷೇತ್ರಕ್ಕೆ ಬಂದು ಮುನಿಶ್ರೀಗಳ ದರ್ಶನಾಶೀರ್ವಾದ ಪಡೆದಿದ್ದೇನೆ. ಇದೊಂದು ಶಕ್ತಿ ಪೀಠ ಎಂದು ಹೇಳಿದರು.
ಮುನಿಶ್ರೀಗಫಳ ದರ್ಶನ ಪಡೆದು ನಮ್ಮ ಜೀವನ ಪಾವನವಾಗಿದೆ. ಮಂದರಗಿರಿ ಬೆಟ್ಟಕ್ಕೆ ಬಂದಿರುವುದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ ಎಂದರು.
ಈ ಕ್ಷೇತ್ರದ ಅಭಿವೃದ್ಧಿಗೆ ತತ್‍ಕ್ಷಣವೇ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಇನ್ನೊಂದು ವಾರ ಅಥವಾ 10 ದಿನಗಳಲ್ಲಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

      ಗುಡ್ಡದ ಮೇಲೆ ರಸ್ತೆ ನಿರ್ಮಾಣ ಆಗಬೇಕಾಗಿರುವುದರಿಂದ ಕಾಮಗಾರಿ ಕೆಲಸ ತುಂಬಾ ದಿನ ನಡೆಯಬೇಕಾಗುತ್ತದೆ. ಹಾಗಾಗಿ ಆದಷ್ಟು ಶೀಘ್ರವಾಗಿ ಅನುದಾನ ಕೊಡಿಸಲು ಶ್ರಮಿಸುವುದಾಗಿ ಹೇಳಿದರು.

      ಶಾಸಕ ಜ್ಯೋತಿಗಣೇಶ್ ಮಾತನಾಡಿ, ಜೈನ ಸಮುದಾಯದ ಪವಿತ್ರ ಕ್ಷೇತ್ರವಾದ ಈ ಮಂದರಗಿರಿ ಬಸದಿ ಬೆಟ್ಟಕ್ಕೆ ತಾವು ಸಹ ಇದೇ ಮೊದಲ ಬಾರಿಗೆ ಭೇಟಿ ನೀಡಿ ಮುನಿಶ್ರೀಗಳ ಆಶೀರ್ವಾದ ಪಡೆದಿರುವುದು ನನ್ನ ಸೌಭಾಗ್ಯ ಎಂದರು.

      ಸಮಾಜದ ಅಧ್ಯಕ್ಷ ಹೆಚ್.ಜೆ. ನಾಗರಾಜು ಮಾತನಾಡಿ, ಪ್ರತಿ ಶನಿವಾರ ಮತ್ತು ಭಾನುವಾರದಂದು ಸುಮಾರು 2 ಸಾವಿರ ಜನ ಪ್ರವಾಸಿಗರು ವೀಕ್ಷಣೆ ಮಾಡಲು ಬರುತ್ತಾರೆ. ನೀರಿನ ವ್ಯವಸ್ಥೆ ಹೊರತುಪಡಿಸಿ ಇತರೆ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಜರೂರಾಗಿ ರಸ್ತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.

      ಈ ಕ್ಷೇತ್ರ ಸುಮಾರು 1 ಸಾವಿರ ಇತಿಹಾಸ ಇರುವ ಕ್ಷೇತ್ರ. ಶ್ರವಣಬೆಳಗೊಳದ ಶ್ರೀಗಳು ಭೇಟಿ ನೀಡಿದಾಗ ಇದನ್ನು ದಕ್ಷಿಣದ ಕಾಶ್ಮೀರ ಎಂದು ಕರೆದರು ಎಂದರು.

      2ನೇ ಶ್ರವಣಬೆಳಗೊಳ ಮಾಡಬೇಕು ಎಂದು ಮುನಿಶ್ರೀಗಳು ಸಂಕಲ್ಪ ಮಾಡಿದ್ದಾರೆ ಎಂದ ಅವರು, ಮುಂದಿನ 6 ತಿಂಗಳಲ್ಲಿ ಪಂಚಕಲ್ಯಾಣ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಉದ್ಘಾಟಕರನ್ನಾಗಿ ಆಹ್ವಾನಿಸಲಾಗುವುದು ಎಂದರು.

      ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ. ಸುರೇಶ್‍ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ಹಾಸನ ಶಾಸಕ ಪ್ರೀತಂಗೌಡ, ಬಿಜೆಪಿ ಮುಖಂಡರಾದ ರಮೇಶ್‍ಗೌಡ, ಮಲ್ಲಸಂದ್ರ ಶಿವಣ್ಣ, ಎಂ.ಬಿ. ನಾಗೇಂದ್ರಪ್ಪ, ಆರ್.ಎ. ಸುರೇಶ್‍ಕುಮಾರ್, ಎನ್.ಡಿ. ವಿಜಯ್‍ಜೈನ್, ಬಾಹುಬಲಿಬಾಬು, ಪಾರ್ಶ್ವನಾಥ ಜಯಕೀರ್ತಿ, ಜೀನೇಶ್, ಶೀತಲ್, ವಿನಯ್‍ಜೈನ್ ಮತ್ತಿತರರು ಉಪಸ್ಥಿತರಿದ್ದರು.

(Visited 4 times, 1 visits today)

Related posts