ಭೂ ಮಾಫಿಯಾಗಳಿಗೆ ಜಮೀನು ನೀಡುತ್ತಿರುವುದ ಖಂಡಿಸಿ ತಾಲೂಕು ಕಚೇರಿಗೆ ಮುತ್ತಿಗೆ

ಗುಬ್ಬಿ :

      ಬೃಹತ್ ಎಚ್‍ಎಎಲ್ ಕಾರ್ಖಾನೆ ಸ್ಥಾಪನೆಗೆ ಭೂಮಿ ಬಿಟ್ಟುಕೊಟ್ಟ ಮಾರಶೆಟ್ಟಿಹಳ್ಳಿ ಗೊಲ್ಲರಹಟ್ಟಿ ರೈತರನ್ನು ಒಕ್ಕಲೆಬ್ಬಿಸುತ್ತಿರುವ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತ ಗ್ರಾಮಸ್ಥರಿಗೆ ನೀಡಿದ ಯಾವುದೇ ಭರವಸೆಯನ್ನು ಈಡೇರಿಸದೆ ಈಗ ಬಗರ್‍ಹುಕುಂ ಮಂಜೂರಾತಿ ಹೆಸರಿನಲ್ಲಿ ಭೂ ಮಾಫಿಯಾಗಳಿಗೆ ಜಮೀನು ನೀಡುತ್ತಿರುವ ಭ್ರಷ್ಟಾಚಾರವನ್ನು ಖಂಡಿಸಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

      ಪಟ್ಟಣದ ಸರ್ಕಲ್ ಬಳಿ ಜಮಾಯಿಸಿದ ನಿಟ್ಟೂರು ಹೋಬಳಿ ಮಾರಶೆಟ್ಟಿಹಳ್ಳಿ ಗೊಲ್ಲರಹಟ್ಟಿ ಗ್ರಾಮಸ್ಥರು ಪಾದಯಾತ್ರೆ ಮೂಲಕ ತಾಲ್ಲೂಕು ಕಚೇರಿಗೆ ತಲುಪಿ ತಾಲ್ಲೂಕು ಆಡಳಿತದ ವಿರುದ್ದ ಘೋಷಣೆ ಕೂಗಿದರು. ರೈತರನ್ನು ಒಕ್ಕಲೆಬ್ಬಿಸುವ ಸರ್ಕಾರದ ಧೋರಣೆಯನ್ನು ಖಂಡಿಸಿ ನಮ್ಮ ಭೂಮಿ ನಮಗೆ ಉಳಿಸಿಕೊಡಲು ಆಗ್ರಹಿಸಿದರು.

      ಸುಮಾರು 60 ವರ್ಷಕ್ಕೂ ಅಧಿಕ ಅನುಭವದಲ್ಲಿರುವ ಗೊಲ್ಲರಹಟ್ಟಿ ಗ್ರಾಮಸ್ಥರು ಸುಮಾರು 130 ಎಕರೆ ಪ್ರದೇಶದಲ್ಲೇ ಕೃಷಿ ನಡೆಸಿಕೊಂಡು 70 ಕ್ಕೂ ಅಧಿಕ ಕುಟುಂಬ ಬದುಕು ಕಟ್ಟಿಕೊಂಡಿದೆ. ದಿಢೀರ್ ಪ್ರತ್ಯಕ್ಷವಾದ ಎಚ್‍ಎಎಲ್ ಕಾರ್ಖಾನೆ ನಮ್ಮ ಜೀವನವನ್ನೇ ಬೀದಿಗೆ ತಂದಿದೆ. ಆರಂಭದಿಂದಲೂ ಸುಳ್ಳು ಭರವಸೆ ನೀಡಿದ ಜಿಲ್ಲಾಡಳಿತ ಮತ್ತು ಎಚ್‍ಎಎಲ್ ಅಧಿಕಾರಿಗಳು ಭೂಮಿ ಬಿಟ್ಟುಕೊಟ್ಟ ಕುಟುಂಬಕ್ಕೆ ಉದ್ಯೋಗ, ಮಾಂಗಲ್ಯಕ್ಕೊಂದು ನಿವೇಶನ ಮನೆ ಹೀಗೆ ಆಸೆ ತೋರಿದ್ದರು. ನಂಬಿದ ಮುಗ್ದ ರೈತರು ತಮ್ಮ ಜಮೀನು ಬಿಟ್ಟುಕೊಟ್ಟು ಈಗ ಬದುಕಿಗೆ ಹೋರಾಟ ನಡೆಸುವ ಅನಿವಾರ್ಯ ಎದುರಾಗಿದೆ. ಈ ಪರಿಸ್ಥಿತಿಗೆ ಕಾರಣವಾದ ಅಧಿಕಾರಿಗಳು, ರಾಜಕಾರಣಿಗಳು ಬಂದು ನ್ಯಾಯ ಒದಗಿಸುವವವರೆಗೆ ನಮ್ಮ ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಮುಖಂಡ ನಟರಾಜ್ ಕಿಡಿಕಾರಿದರು.

     ಬಗರ್‍ಹುಕುಂ ಅಡಿಯಲ್ಲಿ ಗೊಲ್ಲರಹಟ್ಟಿ ಗ್ರಾಮಸ್ಥರ ಜಮೀನನ್ನು ಬೇರೆಯವರಿಗೆ ದಾಖಲೆ ಮಾಡಿಕೊಟ್ಟ ತಾಲ್ಲೂಕು ಆಡಳಿತ ಅವ್ಯವಹಾರ ನಡೆಸಿರುವ ಬಗ್ಗೆ ಮೇಲ್ನೋಟಕ್ಕೆ ಕಾಣುತ್ತಿದೆ. 50 ವರ್ಷಕ್ಕೂ ಅಧಿಕ ಅನುಭವದಲ್ಲಿದ್ದ ರೈತರ ಜಮೀನಿಗೆ ಮತ್ತೊಬ್ಬರು ಒಡೆತನ ಸ್ಥಾಪಿಸಲು ಹೇಗೆ ಸಾಧ್ಯ. ಕೊಳವೆಬಾವಿ ಕೊರೆಸಿ ತೆಂಗು, ಅಡಕೆಮರಗಳನ್ನು ಕಷ್ಟಪಟ್ಟು ಬೆಳೆಸಿದ ಗೊಲ್ಲ ಸಲುದಾಯದ ರೈತರು ಏಕಾಏಕಿ ಜಮೀನು ಬಿಟ್ಟು ಬದುಕಲು ಸಾಧ್ಯವಿಲ್ಲ. ನೂರಾರು ರೈತರ ಜಮೀನು ಕಬಳಿಸುವ ಕೆಲಸಕ್ಕೆ ಸರ್ವೆಯರ್‍ಗಳು ಕೂಡಾ ಮುಂದಾಗಿದ್ದಾರೆ. ದೂರು ನೀಡಿದರೂ ಸ್ಪಂದಿಸದ ತಹಸೀಲ್ದಾರ್ ಜನರನ್ನು ಜಾಗ ಖಾಲಿ ಮಾಡಲು ಆದೇಶಿಸುತ್ತಿದ್ದಾರೆ. ಮಾನವೀಯತೆ ಮರೆತು ಭೂ ಮಾಫಿಯಾ ದಂಧೆಯವರಿಗೆ ಕೈಜೋಡಿಸಿದ ಅಧಿಕಾರಿಗಳು ತಮ್ಮ ಸಂಬಂಧಿಕರ ಹೆಸರಿನಲ್ಲಿ ಜಮೀನು ದಾಖಲೆ ಮಾಡಿಕೊಂಡ ನಿದರ್ಶನ ಈ ಸ್ಥಳದಲ್ಲಿವೆ ಎಂದು ಮುಖಂಡ ಕದರಯ್ಯ ಆರೋಪಿಸಿದರು.

      ಸ್ಥಳಕ್ಕೆ ಧಾವಿಸಿದ ತಹಸೀಲ್ದಾರ್ ಡಾ.ಪ್ರದೀಪ್‍ಕುಮಾರ್ ಹಿರೇಮಠ ಅವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು ಹಾಗೂ ರೈತಸಂಘದ ಪದಾಧಿಕಾರಿಗಳು ಜಮೀನನ್ನು ಎಚ್‍ಎಎಲ್ ಘಟಕ್ಕೆ ಬಿಟ್ಟುಕೊಟ್ಟು ಉಳಿದ ಜಮೀನಿನಲ್ಲಿ ಬದುಕು ನಡೆಸುತ್ತಿದ್ದೇವೆ. ಆದರೆ ಜಮೀನನ್ನು ನೋಡಿಲ್ಲದವರಿಗೆ ಇಲ್ಲಿನ ಜಮೀನು ಮಂಜೂರು ಮಾಡಿಕೊಡುವುದಾದರೆ ನಮಗೆ ವಿಷ ನೀಡಿ ನಂತರ ಜಮೀನು ಪಡೆದುಕೊಳ್ಳಿ ಎಂದು ತಮ್ಮ ಆಕ್ರೋಶ ಹೊರಹಾಕಿದರು. ನಂತರ ಕಾನೂನು ರಿತ್ಯಾ ಕ್ರಮ ಕೈಗೊಳ್ಳುವ ಜತೆಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಗೊಲ್ಲರಹಟ್ಟಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಬಳಿಕ ಇದೇ ತಿಂಗಳ 26 ರೊಳಗೆ ನಮಗೆ ನ್ಯಾಯ ನೀಡಿದಿದ್ದಲ್ಲಿ ಉಗ್ರ ಹೋರಾಟ ನಡೆಸುತ್ತೇವೆ. ವಿಧಾನಸೌಧ ಚಲೋ ನಡೆಸುತ್ತೇವೆ ಎಂದು ಎಚ್ಚರಿಸಿ ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದರು.

     ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಈರಣ್ಣ, ಗೌಡಯ್ಯ, ಚಿತ್ತಯ್ಯ, ಉಮೇಶ್, ಮಹಾಲಿಂಗಯ್ಯ, ಕೃಷ್ಣಮೂರ್ತಿ, ನಾಗಮ್ಮ, ಶಾರದಮ್ಮ, ನಿಂಗಮ್ಮ, ಕಾಟಮ್ಮ, ಗೌಡಯ್ಯ, ಮಂಜುನಾಥ್ ಇತರರು ಇದ್ದರು.

(Visited 8 times, 1 visits today)

Related posts

Leave a Comment