ಭೂ ವ್ಯಾಜ್ಯಗಳ ಮೇಲೆ ಪೊಲೀಸರು ತಲೆ ಹಾಕುವಂತಿಲ್ಲ – ಡಿಜಿಪಿ ನೀಲಮಣಿ ಎನ್.ರಾಜು

      ಭೂಮಿಗೆ ಸಂಬಂಧಿಸಿದ  ವ್ಯಾಜ್ಯಗಳ ಕುರಿತು ಪೊಲೀಸರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಅವರು ಸುತ್ತೋಲೆಯೊಂದನ್ನ ಹೊರಡಿಸಿದ್ದಾರೆ.

     ಭೂ ದಾಖಲೆಗಳು ಯಾರ ಹೆಸರಿನಲ್ಲಿವೆಯೋ ಆತನಿಗೇ ರಕ್ಷಣೆ ನೀಡಬೇಕು ಸಂಬಂಧಿಸಿದ ವ್ಯಾಜ್ಯ ನ್ಯಾಯಾಲಯದಲ್ಲಿಯೇ ಪರಿಹಾರವಾಗಬೇಕು ಎಂದು ಡಿಜಿ ಐಜಿ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

      ಜನರಲ್ ಪವರ್​ ಆಫ್ ಅಟಾರ್ನಿ ಮೂಲಕ ಕೃಷಿ ಅಥವಾ ಕೃಷಿಯೇತರ ಭೂಮಿಯ ಸ್ವಾಧೀನ ಪಡೆಯಲು ಬಯಸುವ ವ್ಯಕ್ತಿಗೆ ರಕ್ಷಣೆ ನೀಡುವಂತಿಲ್ಲ ಎಂದೂ ಅವರು ತಾಕೀತು ಮಾಡಿದ್ದಾರೆ. ಒಂದು ವೇಳೆ ಪ್ರಕರಣಗಳು ನ್ಯಾಯಾಲಯದ ಕಟೆಕಟೆಗೆ ಹೋದರೆ ಕಾನೂನು ಸಲಹೆಗಾರರ ಸಲಹೆ ಪಡೆದು ನ್ಯಾಯಾಲಯಕ್ಕೆ ಸೂಕ್ತ ಕಾರಣಗಳೊಂದಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸೂಚಿಸಿದ್ದಾರೆ.

ಡಿಜಿಐಜಿ ನೀಲಮಣಿ ರಾಜು ಸುತ್ತೋಲೆ:

      ಜಮೀನು ಮಾರಾಟದ ಒಪ್ಪಂದ ಪತ್ರ, ಅಡ್ವಾನ್ಸ್ ಹಣ ನೀಡಿರುವ ದಾಖಲೆಗಳ ಆಧಾರದ ಮೇಲೆ ಒಂದು ವೇಳೆ ನಿಜವಾದ ಮಾಲೀಕನನ್ನ ಹೊರ ಹಾಕಿದರೆ ಸಂಬಂಧಪಟ್ಟ ಪೊಲೀಸರು ಕರ್ತವ್ಯ ಲೋಪದ ಆರೋಪ ಎದುರಿಸಬೇಕಾಗುತ್ತದೆ.
ಜಮೀನಿಗೆ ಸಂಬಂಧಿಸಿದಂತೆ ಯಾರೇ ನ್ಯಾಯಾಲಯದ ತಡೆಯಾದೇಶ ಪ್ರತಿ ಅಥವಾ ಯಾವುದೇ ಆದೇಶ ಪ್ರತಿ ತಂದಲ್ಲಿ ಸ್ಥಳೀಯ ತಹಸೀಲ್ದಾರ್ ಜೊತೆ ಚರ್ಚಿಸಿ ಲಿಖಿತ ಸೂಚನೆ ಪಡೆಯತಕ್ಕದ್ದು.

      ಕೃಷಿ ಜಮೀನಿನ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ತಕರಾರುಗಳು ಬಂದಾಗ ಸ್ಥಳೀಯ ತಹಸೀಲ್ದಾರ್​ ಜೊತೆ ತೆರಳಿ ಸರ್ವೆ ಮಾಡಿಸಿ, ನಿರ್ಧರಿಸಬೇಕು. ಮತ್ತು ಸಂಬಂಧಿಸಿದವರಿಗೆ ರಕ್ಷಣೆ ನೀಡಬೇಕು. ಕೃಷಿಯೇತರ ಜಮೀನಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಗರ ಸಭೆ ಅಥವಾ ಸಂಬಂಧಪಟ್ಟ ಇಲಾಖೆಯಿಂದ ಸರ್ವೆ ಮಾಡಿಸಿ ನಿರ್ಧರಿಸಿ ಅದರ ಅಧಿಕಾರ ಹೊಂದಿದ ವ್ಯಕ್ತಿಗೆ ರಕ್ಷಣೆ ನೀಡಬೇಕು.

      ಕೃಷಿಯೇತರ ಜಮೀನಿನ ಅಧಿಕಾರದ ಕುರಿತು ಎರಡೂ ಕಡೆಯವರು ಪಹಣಿ ದಾಖಲೆಗಳನ್ನ ಹಾಜರುಪಡಿಸಿದಾಗ ಪರಿಶೀಲಿಸಿ ಸುಳ್ಳು ದಾಖಲೆ ನೀಡಿದವರ ವಿರುದ್ಧ ದೂರು ದಾಖಲಿಸಿಕೊಳ್ಳಬೇಕು. ನ್ಯಾಯಾಲಯದ ಆದೇಶ ಪಾಲಿಸಲು ಸಾಧ್ಯವಾಗದಿದ್ದ ಪಕ್ಷದಲ್ಲಿ ಅಭಿಯೋಜಕ ಸಹಾಯಕ ನಿರ್ದೇಶಕರು, ಕಾನೂನು ಸಲಹೆಗಾರರ ಸಲಹೆ ಪಡೆದು, ನ್ಯಾಯಾಲಯಕ್ಕೆ ಸೂಕ್ತ ಕಾರಣಗಳ ವರದಿ ನೀಡಬೇಕು.

      ಒಂದೇ ಸ್ವತ್ತನ್ನ ಹಲವರಿಗೆ ಮಾರಾಟ ಮಾಡಿದ ದೂರುಗಳು ಬಂದರೆ ಪ್ರಥಮ ಖರೀದಿದಾರ ಆ ಸ್ವತ್ತಿನ ಮಾಲೀಕನಾಗುತ್ತಾನೆ. ಉಳಿದವರು ವಂಚಿತರಾಗಿದ್ದು ಅವರ ದೂರನ್ನ ದಾಖಲಿಸಿಕೊಂಡು ಕ್ರಮ ಕೈಗೊಳ್ಳತಕ್ಕದ್ದು ಎಂದು ಡಿಜಿಐಜಿ ನೀಲಮಣಿ ರಾಜು ಸುತ್ತೋಲೆಯಲ್ಲಿ ಆದೇಶ ನೀಡಿದ್ದಾರೆ.

(Visited 294 times, 1 visits today)

Related posts

Leave a Comment