ಭೂ ಸ್ವಾಧೀನ ಪಡಿಸಿಕೊಂಡು ಶ್ರೀಗಂಧ ಬೆಳೆಗಾರರಿಗೆ ತೊಂದರೆ

ತುಮಕೂರು : 

      ರಾಷ್ಟ್ರೀಯ ಹೆದ್ದಾರಿ-206ಕ್ಕಾಗಿ ಭೂ ಸ್ವಾಧೀನ ಪಡಿಸಿಕೊಂಡಿರುವ ಭೂಮಿ ಹಾಗೂ ಶ್ರೀಗಂಧ ಮರಗಳಿಗೆ ಪರಿಹಾರವನ್ನು ನೀಡದೇ ಶ್ರೀಗಂಧ ಬೆಳೆಗಾರರಿಗೆ ತೊಂದರೆ ನೀಡಲಾಗುತ್ತಿದೆ ಎಂದು ಶ್ರೀಗಂಧ ಬೆಳೆಗಾರರು ಮತ್ತು ಬಳಕೆದಾರರ ಸಂಘದ ರಾಜ್ಯಾಧ್ಯಕ್ಷ ರಘುರಾವ್.ಬಿ.ಆರ್. ಆರೋಪಿಸಿದರು.

      ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ-206 ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಂಡಿದ್ದು, 22 ರೈತರ ಶ್ರೀಗಂಧ ಬೆಳೆಗೆ 62 ಕೋಟಿ ಪರಿಹಾರವನ್ನು ನಿಗದಿ ಪಡಿಸಿ, ಅರಣ್ಯ ಇಲಾಖೆ ವರದಿ ನೀಡಿದ್ದರು ಸಹ ಕಳೆದ ನಾಲ್ಕು ವರ್ಷಗಳಿಂದ ಪರಿಹಾರವನ್ನು ನೀಡಿಲ್ಲ ಎಂದು ದೂರಿದರು.

      ಅರಣ್ಯ ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ 2002ರಲ್ಲಿ ಸರ್ಕಾರ ಶ್ರೀಗಂಧ ಬೆಳೆಯಲು ಮುಕ್ತ ಅವಕಾಶವನ್ನು ಕಲ್ಪಿಸಿದ್ದು, ಮಳೆಯಾಶ್ರಿತ ಭೂಮಿಯಲ್ಲಿ ಶ್ರೀಗಂಧ ಬೆಳೆಯುವುದರಿಂದ ಉತ್ತಮ ಲಾಭವನ್ನು ರೈತರು ಪಡೆದುಕೊಳ್ಳಬಹುದಾಗಿದ್ದು, ಪರಿಸರ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿಯೂ ಅರಣ್ಯ ಕೃಷಿ ಮಾಡುವುದು ಅವಶ್ಯಕವಾಗಿದ್ದು, ಸರ್ಕಾರದ ಯೋಜನೆಗಳಿಗೆ ಭೂ ಸ್ವಾಧೀನ ಮಾಡಿಕೊಂಡಾಗ ಶೀಘ್ರ ಪರಿಹಾರವನ್ನು ನೀಡಬೇಕೆಂದು ಆಗ್ರಹಿಸಿದರು.

      ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರದ ತುಮಕೂರು ವಿಭಾಗದ ಯೋಜನಾ ನಿರ್ದೇಶಕರು ಸಂತ್ರಸ್ಥ ರೈತರಿಗೆ ಪರಿಹಾರವನ್ನು ಶೀಘ್ರ ನೀಡದೇ ಹೋದರೆ ಕಚೇರಿ ಎದುರು ಶ್ರೀಗಂಧ ಬೆಳೆಗಾರರು ಮತ್ತು ಬಳಕೆದಾರರ ಸಂಘ ಸೇರಿದಂತೆ ಎಲ್ಲ ಶ್ರೀಗಂಧ ಬೆಳೆಗಾರರೊಂದಿಗೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲು ಬೆಳಿಗ್ಗೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

      ಶ್ರೀಗಂಧ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎನ್.ವಿಶುಕುಮಾರ್ ಮಾತನಾಡಿ, ತರೀಕೆರೆ ಭಾಗದಲ್ಲಿ ಭೂ ಸ್ವಾಧೀನ ಮಾಡಿರುವ ಭೂಮಿಗೆ ಸರಿಯಾದ ಪರಿಹಾರವನ್ನು ನೀಡಿಲ್ಲ, ರೈತರು ಭೂಮಿಯನ್ನು ಖರೀದಿ ಮಾಡಿದ್ದಕ್ಕಿಂತ ಕಡಿಮೆ ದರವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡುತ್ತಿದೆ ಹಾಗೆಯೇ ರೈತರು ಬೆಳೆದಿರುವ ಶ್ರೀಗಂಧ ಮರಗಳಿಗೆ ಸೂಕ್ತ ಪರಿಹಾರವನ್ನು ನೀಡಲು ಹಿಂದೇಟು ಹಾಕುತ್ತಿದೆ ಎಂದು ಹೇಳಿದರು.

      ತರೀಕೆರೆಯಲ್ಲಿ 22 ರೈತರ ಸುಮಾರು ಐನೂರಕ್ಕೂ ಹೆಚ್ಚು ಶ್ರೀಗಂಧದ ಮರಗಳು ಭೂಸ್ವಾಧೀನದಲ್ಲಿ ನೊಟೀಫಿಕೇಷನ್ ಮಾಡಲಾಗಿದೆ, ಈ ಮರಗಳಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಹಣವನ್ನು ಅರಣ್ಯ ಇಲಾಖೆ ಅಂದಾಜಿಸಿ ವರದಿ ನೀಡಿದೆ, 62 ಕೋಟಿ ಪರಿಹಾರವನ್ನು ಶ್ರೀಗಂಧ ಬೆಳೆಗಾರರಿಗೆ ನೀಡಲು ಅರಣ್ಯ ಇಲಾಖೆ ವರದಿ ಸಲ್ಲಿಸಿದ್ದರು ಹಣ ನೀಡಲು ಎನ್‍ಎಚ್ ಪ್ರಾಧಿಕಾರ ಹಿಂದೇಟು ಹಾಕುತ್ತಿದೆ ಎಂದರು.

      ಅರಣ್ಯ ಇಲಾಖೆ ನೀಡಿರುವ ವರದಿಯಂತೆ 62 ಕೋಟಿ ಪರಿಹಾರಕ್ಕಾಗಿ ರೈತರನ್ನು ಅಲೆದಾಡಿಸುತ್ತಿರುವ ಬಗ್ಗೆ ಶ್ರೀಗಂಧ ಬೆಳೆಗಾರರು ಹೈಕೋರ್ಟ್ ಮೊರೆ ಹೋದಾಗ, ನ್ಯಾಯಾಲಯ ಶೀಘ್ರ ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದು, ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ ಮಧ್ಯಂತರ ಅರ್ಜಿ ಸಲ್ಲಿಸಿ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿ, ಪರಿಹಾರ ನೀಡುವುದರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ನ್ಯಾಯಾಲಯ ಮಧ್ಯಂತರ ಅರ್ಜಿಯನ್ನು ವಜಾಗೊಳಿಸಿದ್ದು, ರೈತರಿಗೆ ಶೀಘ್ರ ಪರಿಹಾರ ವಿತರಿಸುವಂತೆ ಒತ್ತಾಯಿಸಿದರು.

      ತೋಟಗಾರಿಕಾ ಬೆಳೆಗಳಂತೆ ಶ್ರೀಗಂಧಕ್ಕೂ ಜೀವಿತಾವಧಿ ಬೆಲೆಯನ್ನು ನೀಡುವಂತೆ ಒತ್ತಾಯಿಸಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದ ಅವರು, ನ್ಯಾಯಾಲಯದ ಆದೇಶದಂತೆ ರಾಷ್ಟ್ರೀಯ ಹೆದ್ದಾರಿ ಯೋಜನಾ ಪ್ರಾಧಿಕಾರ ತುಮಕೂರು ವಿಭಾಗದ ಯೋಜನಾ ನಿರ್ದೇಶಕರು ರೈತರಿಗೆ ಪರಿಹಾರ ನೀಡಲು ಒಪ್ಪದೇ ಇದ್ದಲ್ಲಿ, ಅನಿರ್ದಿಷ್ಟಾವಧಿ ಧರಣಿ ನಡೆಸಲು ಬೆಳೆಗಾರರು ಸಿದ್ಧವಿರುವುದಾಗಿ ತಿಳಿಸಿದರು.

      ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥ ರೈತ ಕೆ.ಆರ್.ಪ್ರತಾಪ್‍ಕುಮಾರ್, ರಾಜ್ಯ ಬಿದಿರು ಮತ್ತು ಶ್ರೀಗಂಧ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಎ.ಎಸ್.ಈಶ್ವರಪ್ಪ, ರಾಮನಗರ ಭೈರಪ್ಪ, ನಾಗರಾಜು,ಶಿವಕುಮಾರ್, ಎಸ್.ಪಿ.ನಾಗರಾಜು ಸೇರಿದಂತೆ ಶ್ರೀಗಂಧ ಬೆಳೆಗಾರರು ಉಪಸ್ಥಿತರಿದ್ದರು.

(Visited 4 times, 1 visits today)

Related posts

Leave a Comment