ಮಾದರಿ ಜಿಲ್ಲಾಸ್ಪತ್ರೆ: ಆರೋಗ್ಯ ಸಚಿವರಿಂದ ಮೆಚ್ಚುಗೆ

 ತುಮಕೂರು :

      ಜಿಲ್ಲಾಸ್ಪತ್ರೆಯು ಇತರೆ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ್ ಮೆಚ್ಚುಗೆ ವ್ಯಕ್ತಪಡಿಸಿದರು.

      ಜಿಲ್ಲಾಸ್ಪತ್ರೆಗಿಂದು ಭೇಟಿ ನೀಡಿ ಪರಿಶೀಲಿಸಿದ ಅವರು, ತುಮಕೂರಿನ ಜನತೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗದಂತೆ ಜಿಲ್ಲಾಸ್ಪತ್ರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸರ್ಕಾರದ ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಗಳಿಂದ ಆಸ್ಪತ್ರೆಗಳಿಗೆ ಆದಾಯ ಬರುತ್ತಿದ್ದು, ಈ ಯೋಜನೆಯಡಿ ತುಮಕೂರು ಜಿಲ್ಲಾಸ್ಪತ್ರೆಯು ಮಾಹೆಯಾನ 30ಲಕ್ಷ ರೂ.ಗಳಿಗೂ ಹೆಚ್ಚು ಆದಾಯವನ್ನು ಗಳಿಸುವ ಮೂಲಕ ಇತರೆ ಜಿಲ್ಲೆಗಳಿಗಿಂತ ಮುಂಚೂಣಿಯಲ್ಲಿದೆ. ಗಳಿಸಿದ ಆದಾಯದ ಹಣವನ್ನು ಶೇ. 50ರಷ್ಟು ಜಿಲ್ಲಾಸ್ಪತ್ರೆಯ ಅಭಿವೃದ್ಧಿ, ಶೇ. 30ರಷ್ಟು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳ ಪ್ರೋತ್ಸಾಹಧನಕ್ಕಾಗಿ ವಿನಿಯೋಗಿಸಲಾಗುವುದಲ್ಲದೆ ಉಳಿದ ಶೇ.20ರಷ್ಟು ಹಣವನ್ನು ಸರ್ಕಾರದ ಖಾತೆಗೆ ಜಮಾ ಮಾಡಲಾಗುವುದು ಎಂದು ತಿಳಿಸಿದರು.

       ಸ್ಮಾರ್ಟ್ ಸಿಟಿ ಯೋಜನೆಯಡಿ ಜಿಲ್ಲಾಸ್ಪತ್ರೆಯಲ್ಲಿ ಹೊಸದಾಗಿ ಅಪಘಾತ ಚಿಕಿತ್ಸಾ ವಿಭಾಗ ಹಾಗೂ 100 ಹಾಸಿಗೆಗಳುಳ್ಳ ಸುಸಜ್ಜಿತ ತಾಯಿ-ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದು ಇಲ್ಲಿನ ಸುವ್ಯವಸ್ಥೆಗಳೇ ಕಾರಣವಾಗಿದೆ. ಆರೋಗ್ಯ ಕ್ಷೇತ್ರದ ಸೇವೆಗಾಗಿ ರಾಜ್ಯಕ್ಕೆ ರಾಷ್ಟ್ರೀಯ ಪುರಸ್ಕಾರ ಸಂದಿರುವುದು ಸಂತಸ ತಂದಿದೆ. ರಾಜ್ಯದ ಜನತೆಯ ಉತ್ತಮ ಆರೋಗ್ಯಕ್ಕೆ ಗುಣಮಟ್ಟದ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿರುವ ಸವಲತ್ತುಗಳನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು. ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಕೇಂದ್ರ, ಐಸಿಯು ಘಟಕ, ಲೇಬರ್ ವಾರ್ಡ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. 

      ಈ ಸಂದರ್ಭದಲ್ಲಿ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ, ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಡಿ.ಹೆಚ್.ಓ. ಡಾ: ಚಂದ್ರಿಕಾ, ಜಿಲ್ಲಾ ಸರ್ಜನ್ ಡಾ: ವೀರಭದ್ರಯ್ಯ, ರಾಷ್ಟ್ರೀಯ ಆರೋಗ್ಯ ಅಭಿಯಾನ ಅಧ್ಯಯನ ನಿರ್ದೇಶಕ ರಮೇಶ್, ಮತ್ತಿತರರು ಉಪಸ್ಥಿತರಿದ್ದರು.

ಸಚಿವರ ಸ್ಪಷ್ಟನೆ:-

      ಜಿಲ್ಲಾಸ್ಪತ್ರೆಗಿಂದು ಸಚಿವರು ಭೇಟಿ ನೀಡಿದ ಸಂದರ್ಭದಲ್ಲಿ ಮಹಿಳೆಯೊಬ್ಬರು ತನ್ನ ಮಗುವಿನೊಂದಿಗೆ ವಾರ್ಡ್ ಸಿಗದೆ ಜಿಲ್ಲಾಸ್ಪತ್ರೆ ಆವರಣದಲ್ಲಿಯೇ ಚಿಕಿತ್ಸೆಗಾಗಿ ಪರದಾಡುತ್ತಿದ್ದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವುದು ಸತ್ಯಕ್ಕೆ ದೂರವಾದ ಸಂಗತಿ. ಮಾಧ್ಯಮಗಳು ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸಬಾರದೆಂದು ಮನವಿ ಮಾಡಿದ ಸಚಿವರು ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರನ್ನು ನೋಡಲು ಬಂದಿದ್ದ ಆ ಮಹಿಳೆ ಆಸ್ಪತ್ರೆ ಆವರಣದಲ್ಲಿ ಮಗುವನ್ನು ಮಲಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದರು. ಮಗು ಹಾಗೂ ಮಹಿಳೆಗೆ ಯಾವುದೇ ಅನಾರೋಗ್ಯ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

(Visited 16 times, 1 visits today)

Related posts

Leave a Comment