ಯತ್ನಾಳ್‍ರೇ ಅಸಮಾಧಾನ ಬಿಜೆಪಿ ದುರಾಡಳಿತಕ್ಕೆ ಸಾಕ್ಷಿ – ಡಿ.ಕೆ.ಶಿ.ವಾಗ್ದಾಳಿ

ತುಮಕೂರು : 

     ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ದುರಾಡಳಿತದ ಬಗ್ಗೆ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಯತ್ನಾಳ್ ಅವರೇ ಅಸಮಾಧಾನ ವ್ಯಕ್ತಪಡಿಸಿರುವುದು ಬಿಜೆಪಿ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.

      ಸಿರಾ ತಾಲ್ಲೂಕು ಕಳ್ಳಂಬೆಳ್ಳ ಹೋಬಳಿಯ ಯತ್ತಪ್ಪನಹಟ್ಟಿ, ದೊಡ್ಡ ಅಗ್ರಹಾರ, ತರೂರು ಸೇರಿದಂತೆ ಸುತ್ತಮುತ್ತ ಕಾಂಗ್ರೆಸ್ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಬಿಜೆಪಿ ಸರ್ಕಾರ ಸಹಕಾರ ನೀಡಲಿಲ್ಲ. ಇಂತಹ ದುರಾಡಳಿತವನ್ನು ಬಿಜೆಪಿ ನಡೆಸುತ್ತಿದೆ ಎಂದು ದೂರಿದರು.

      ರಾಜ್ಯದಲ್ಲಿ ರೈತ, ದಲಿತ, ಮಹಿಳೆಯರ ಪರವಾಗಿ ಮಾತನಾಡುವ ಶಕ್ತಿ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ. ಎಲ್ಲ ವರ್ಗಗಳ ಪರವಾಗಿ ಕೆಲಸ ಮಾಡುವ ಶಕ್ತಿ ಇರುವುದು ಕಾಂಗ್ರೆಸ್‍ಗೆ ಮಾತ್ರ ಎಂದ ಅವರು, ಸಿರಾ ಮತದಾರರು ರಾಜ್ಯಕ್ಕೆ ಸಂದೇಶ ನೀಡಬೇಕಿದೆ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮತ ಚಲಾಯಿಸುವಂತೆ ಕರೆ ನೀಡಿದರು.

      ರಾಜ್ಯದಲ್ಲಿ ಮುಂದೆ ಬಿಜೆಪಿ ಇರುವುದಿಲ್ಲ, ದಳದ ಬಗ್ಗೆ ಮಾತನಾಡಲ್ಲ. ಸಿರಾ ಉಪ ಚುನಾವಣೆಯಲ್ಲಿ ಜಯಚಂದ್ರ ಅವರ ಕೈ ಬಲಪಡಿಸಲು ಬಂದಿದ್ದೇವೆ. ಒಗ್ಗಟ್ಟಿನಿಂದ ಹೋರಾಡುವ ಮೂಲಕ ಜಯಚಂದ್ರ ಅವರನ್ನು ಗೆಲ್ಲಿಸಲು ಎಲ್ಲ ಮುಖಂಡರು ಶ್ರಮಿಸುವುದಾಗಿ ತಿಳಿಸಿದರು.

      ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ, ಜೆಡಿಎಸ್ ಯಾವ ರೀತಿಯ ಆಡಳಿತ ನೀಡಿವೆ ಎನ್ನುವುದನ್ನು ಜನರು ಅನುಭವಿಸಿ ತಿಳಿದುಕೊಂಡಿದ್ದಾರೆ. ಕೊರೊನಾದಿಂದ ಜನರು ಸಂಕಷ್ಟದಲ್ಲಿದ್ದರೂ ಬಿಜೆಪಿ ಬಂಡವಾಳ ಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹರಿಹಾಯ್ದರು.

     ಸಿರಾ ಅಭಿವೃದ್ಧಿಗೆ ಜಯಚಂದ್ರ ಅವರೇ ಕಾರಣ. 2500 ಕೋಟಿ ರೂ. ಅನುದಾನ ತಂದು ಸಿರಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ. ಬಡವರ ಪರ ಕೆಲಸ ಮಾಡುವುದು ಕಾಂಗ್ರೆಸ್ ಧ್ಯೇಯವಾಗಿದೆ. ಸರ್ವ ಧರ್ಮದ ಅಭ್ಯುದಯ ಕಾಂಗ್ರೆಸ್ ಬದ್ಧತೆ. ಕೋವಿಡ್‍ನಿಂದ ಜನರು ಸಂಕಷ್ಟದಲ್ಲಿದ್ದರೂ ನೆಮ್ಮದಿಯಾಗಿರಲು ಕಾಂಗ್ರೆಸ್ ಕಾರ್ಯಕ್ರಮಗಳೇ ಕಾರಣವಾಗಿವೆ ಎಂದರು.

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮಾತನಾಡಿ, ಸುಳ್ಳು ಹೇಳುವ ಜಾಯಮಾನ ನಮ್ಮದಲ್ಲ. ಕೋವಿಡ್ ವೇಳೆ ಅನ್ನಭಾಗ್ಯದಿಂದ ಅನುಕೂಲವಾಗಿದೆ. ಅಂತಹ ಬದ್ಧತೆ ಇರುವುದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಎಂದರು.

     ಜಯಚಂದ್ರ ಅವರು ಪಶು ಸಂಗೋಪನಾ ಸಚಿವರಾಗಿದ್ದಾಗ ಆಕಸ್ಮಿಕವಾಗಿ ಕುರಿ, ಮೇಕ ಸಾವನ್ನಪ್ಪಿದ್ದರೆ ಪರಿಹಾರ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು. ಬಿಜೆಪಿ ಸರ್ಕಾರ ಈ ಪರಿಹಾರ ಹಿಂಪಡೆದಿದ್ದಾರೆ. ಅವರಿಗೆ ಮತ ಕೇಳುವ ಅರ್ಹತೆ ಇದೆಯೇ ಎಂದು ಪ್ರಶ್ನಿಸಿದರು.

      ಮಾಜಿ ಸಚಿವ ಜಯಚಂದ್ರ ಅವರು ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಚುಕ್ಕಾಣಿ ಹಿಡಿದಿರುವ  ಡಿ.ಕೆ..ಶಿವಕುಮಾರ್ ಅವರಿಗೆ ಬಲ ತುಂಬಲು ಕಾಂಗ್ರೆಸ್‍ಗೆ ಮತ ನೀಡಬೇಕು. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ತರುವ ನಿಟ್ಟಿನಲ್ಲಿ ಉಪ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

      ಮದಲೂರು ಕೆರೆಗೆ ಹೇಮಾವತಿ ಹರಿಸುವುದು ಬೇಡ ಎಂದ ಬಿಜೆಪಿಗರು ಈಗ ನೀರು ಹರಿಸುವ ಮಾತನಾಡುತ್ತಿದ್ದಾರೆ. ಮೊದಲೂರು ಕೆರೆಗೆ ನೀರು ತುಂಬಿಸುವ ಯೋಜನೆಗೆ ಅಪ್ಪ ಅಮ್ಮ ನಾನೇ. ಚುನಾವಣೆಯಲ್ಲಿ ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿದ ಒಂದು ತಿಂಗಳೊಳಗೆ ನೀರು ಹರಿಸುವುದಾಗಿ ಭರವಸೆ ನೀಡಿದರು.

     ದೊಡ್ಡ ಅಗ್ರಹಾರ, ತರೂರು, ಬ್ರಹ್ಮಸಂದ್ರಕ್ಕೆ ನೀರು ಹರಿಸುವ ಯೋಜನೆಗಳನ್ನು ಸಕಾರಗೊಳಿಸುವ ನಿಟ್ಟಿನಲ್ಲಿ, ಭದ್ರ ಮೇಲ್ದಂಡೆ, ಎತ್ತಿನಹೊಳೆ ಯೋಜನೆ ಅನುಷ್ಠಾನದಿಂದ ಸಿರಾ ಸಮೃದ್ಧಿಗೊಳಿಸುವ ಮೂಲಕ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಅವರು ಹೇಳಿದರು.

      ಕಾಂಗ್ರೆಸ್ ಮುಖಂಡ ಕಲ್ಕೆರೆ ರವಿಕುಮಾರ್ ಮಾತನಾಡಿ, ಬಿಜೆಪಿ ಹಣದಿಂದ ಚುನಾವಣೆ ಮಾಡಲು ಹೊರಟಿದೆ. ಜೋಳಿಗೆ ಹಿಡಿದು ದೇವಸ್ಥಾನ ನಿರ್ಮಾಣ ಮಾಡುತ್ತೇವೆ. ಮನೆ ಇಲ್ಲದವರಿಗೆ ಮನೆ ನೀಡುತ್ತೇವೆ ಎಂದು ಆಡಳಿತವನ್ನು ದುರುಪಯೋಗಪಡಿಸಿಕೊಂಡು ಜನರನ್ನು ಯಾಮಾರಿಸುತ್ತಿದೆ ಎಂದು ದೂರಿದರು. ಬಿಜೆಪಿ ಮತ್ತು ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ದು, ಜನರು ಕಾಂಗ್ರೆಸ್‍ಗೆ ಸ್ವಯಂ ಪ್ರೇರಿತರಾಗಿ ಮತ ಚಲಾಯಿಸುವಂತೆ ಅವರು ಕರೆ ನೀಡಿದರು.

       ಈ ಸಂದರ್ಭದಲ್ಲಿ ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ ವೇಣುಗೋಪಾಲ್, ಮುಖಂಡರಾದ ಹೊನ್ನಗಿರಿಗೌಡ, ಸಾಸಲು ಸತೀಶ್, ಎಂ.ಡಿ. ಲಕ್ಷ್ಮೀನಾರಾಯಣ್, ಗೀತಾ ರಾಜಣ್ಣ ಮತ್ತಿತರರು ಪಾಲ್ಗೊಂಡಿದ್ದರು. 

(Visited 4 times, 1 visits today)

Related posts

Leave a Comment