ರಂಗಾಪುರ ಸಮೀಪ ತುಮಕೂರು ವಿವಿಗೆ 15 ಎಕರೆ ಜಾಗ

ತುಮಕೂರು:

       ತೆಂಗು ಉತ್ಪನ್ನಗಳ ಮೌಲ್ಯವರ್ಧನೆ ನಿಟ್ಟಿನಲ್ಲಿ ತಿಪಟೂರಿನಲ್ಲಿ ವಿಶೇಷ ಕೋರ್ಸ್ ಆರಂಭಿಸಲು ತುಮಕೂರು ವಿವಿ ಚಿಂತನೆ ನಡೆಸಿದೆ. ತಿಪಟೂರು ಹೊರವಲಯದ ರಂಗಾಪುರ ಹೊಸಳ್ಳಿ ಸರ್ವೇ ನಂ28ರಲ್ಲಿ ಸರ್ಕಾರ ವಿವಿಗೆ ನೀಡಿರುವ 15 ಎಕರೆ ಭೂಮಿ ಸರ್ವೇ ವೇಳೆ ಸಿಂಡಿಕೇಟ್ ಸದಸ್ಯ ರಾಜು ಈ ಬಗ್ಗೆ ಮಾಹಿತಿ ನೀಡಿದರು. ತಿಪಟೂರು ಸೇರಿ ತೆಂಗು ಸೀಮೆಯ ವಿದ್ಯಾರ್ಥಿಗಳಿಗೆ ಅನುಕೂಲ ವಾಗಲು ಸರ್ಕಾರ ಭೂಮಿ ನೀಡಿದ್ದು, ಸದುಪಯೋಗ ಮಾಡಿಕೊಳ್ಳುವ ಹೊಣೆ ವಿವಿ ಮೇಲಿದೆ ಎಂದರು.

       ಇದರ ಮೊದಲ ಹಂತವಾಗಿ ಭೂಮಿ ಭದ್ರಪಡಿಸಿಕೊಳ್ಳುವ ಕಾರ್ಯಕ್ಕೆ ಈಗ ಚಾಲನೆ ನೀಡಲಾಗಿದ್ದು, ಭವಿಷ್ಯದಲ್ಲಿ ವಿವಿ ಆಂತರಿಕ ಸಂಪನ್ಮೂಲ ಹಾಗೂ ಸರ್ಕಾರದ ವಿಶೇಷ ಅನುದಾನ ಬಳಸಿಕೊಂಡು ಕ್ಯಾಂಪಸ್ ನಿರ್ಮಿಸುವ ಕನಸಿದೆ ಎಂದರು. ಸಿಂಡಿಕೇಟ್ ಸದಸ್ಯ ಟಿ.ಎಸ್.ಸುನೀಲ್‍ಪ್ರಸಾದ್ ಮಾತನಾಡಿ, ವಿವಿಗೆ ಸಂಬಂಧಪಟ್ಟ ಭೂಮಿ ತಿಪಟೂರು ಹಾಗೂ ಶಿರಾ ತಾಲೂಕಿನಲ್ಲಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುವಂತೆ ಶೈಕ್ಷಣಿಕ ವರ್ಷದಿಂದಲೇ ಹೊಸ ಕೋರ್ಸ್ ಆರಂಭಿಸಲು ವಿವಿ ಆಸಕ್ತಿ ವಹಿಸಿದ್ದು ತಜ್ಞರ ಅಭಿಪ್ರಾಯ ಪಡೆಯಲಾಗುತ್ತಿದೆ ಎಂದರು.

       ತಿಪಟೂರು ಹಾಗೂ ಸುತ್ತಮುತ್ತಲ ತಾಲೂಕಿನಲ್ಲಿ ತೆಂಗು ಪ್ರಧಾನ ಬೆಳೆಯಾಗಿದ್ದು, ವಿದ್ಯಾರ್ಥಿಗಳಿಗೂ ಸಹ ಜವಾಗಿಯೇ ತೆಂಗು ಹಾಗೂ ಅದರ ಉತ್ಪನ್ನದ ಬಗ್ಗೆ ಸಾಮಾನ್ಯ ಅರಿವು ಇರುತ್ತದೆ. ಇದನ್ನೇ ಬಳಸಿಕೊಂಡು ಅವರಲ್ಲಿ ಕೌಶಲ ಹೆಚ್ಚಿಸಿದರೆ ಉದ್ಯೋಗದ ಜತೆಗೆ ತೆಂಗಿಗೂ ಬೇಡಿಕೆ ಸೃಷ್ಟಿಯಾಗಲಿದೆ ಎಂದರು.
ಕುಲಸಚಿವ ಗಂಗಾನಾಯ್ಕ ಮಾತನಾಡಿ, ಐದು ವರ್ಷದ ಹಿಂದೆ ಸರ್ಕಾರ ರಂಗಾಪುರ ಸಮೀಪ 15 ಎಕರೆ ಭೂಮಿ ನೀಡಿದ್ದು ನಗರಕ್ಕೆ ಸಮೀಪದಲ್ಲಿಯೇ ಇರುವುದರಿಂದ ಶೈಕ್ಷಣಿಕ ಚಟುವಟಿಕೆಗೆ ಪೂರಕವಾಗಿದ್ದು ಇದನ್ನು ಸದುಪಯೋಗ ಪಡಿಸಿಕೊಳ್ಳಲಾಗುವುದು ಎಂದರು.

      ಸ್ಥಳೀಯರು ಸಂಪೂರ್ಣ ಸಹಕಾರ ನೀಡಿದ್ದಾರೆ, ಕಂದಾಯ ಇಲಾಖೆ ಅಧಿಕಾರಿಗಳು ಅಗತ್ಯವಾದ ಸರ್ವೇ ನಡೆಸುತ್ತಿದ್ದಾರೆ ಎಂದರು.

(Visited 8 times, 1 visits today)

Related posts