ರಾಹುಲ್‌ ವಿರುದ್ಧ ಕ್ರಿಮಿನಲ್‌ ಮಾನಹಾನಿ ಮೊಕದ್ದಮೆ

ಭೋಪಾಲ್ :

      ಪನಾಮಾ ಪೇಪರ್ಸ್ ಹಗರಣದಲ್ಲಿ ತನ್ನ ಹೆಸರು ಎಳೆದು ತಂದಿದ್ದಕ್ಕಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಪುತ್ರ ಕಾರ್ತಿಕೇಯ್ ಚೌಹಾಣ್ ಇಂದು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

      ಈ ನಡುವೆ ರಾಹುಲ್‌ ಗಾಂಧಿ ಅವರು ತಾನು ಚೌಹಾಣ್‌ ಅವರ ಪುತ್ರನ ಹೆಸರನ್ನು ಪನಾಮಾ ಪೇಪರ್‌ ಹಗರಣ ಸಂಬಂಧ ಉಲ್ಲೇಖಸಿರುವುದು ತನ್ನಲ್ಲಿನ ಗೊಂದಲದ ಪರಿಣಾಮವಾಗಿದೆ ಎಂದು ಹೇಳಿದ್ದಾರೆ.

      “ಸೋಮವಾರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ್ದ ರಾಹುಲ್, ಸಿಎಂ ಪುತ್ರನ ಹೆಸರು ಸೋರಿಕೆಯಾದ ಪನಾಮಾ ಪೇಪರ್ಸ್‍ನಲ್ಲಿ ಉಲ್ಲೇಖಗೊಂಡಿತ್ತು ಎಂದಿದ್ದರು. ಇದು ಕ್ರಿಮಿನಲ್ ಉದ್ದೇಶ ಹೊಂದಿದ ಆಕ್ಷೇಪಾರ್ಹ ಹೇಳಿಕೆ” ಎಂದು ಕಾರ್ತಿಕೇಯ್ ವಕೀಲ ಎಸ್ ಶ್ರೀವಾಸ್ತವ ಹೇಳಿದ್ದಾರೆ.

      ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ಹಲವಾರು ಹಗರಣಗಳೊಂದಿಗೆ ಥಳುಕು ಹಾಕಿದ ರಾಹುಲ್ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸುವುದಾಗಿ ಮುಖ್ಯಮಂತ್ರಿ ಸೋಮವಾರ ರಾತ್ರಿಯೇ ಹೇಳಿದ್ದರು.

      ರ್ಯಾಲಿಯಲ್ಲಿ ಚೌಹಾಣ್ ಪುತ್ರನ ಹೆಸರೆತ್ತಿ ಅವರ ಹೆಸರು ಪನಾಮ ಪೇಪರ್ಸ್‍ನಲ್ಲಿತ್ತು ಎಂದು ಹೇಳಿದ್ದ ರಾಹುಲ್ ನಂತರ ಸ್ಪಷ್ಟೀಕರಣ ನೀಡಿ ತಮಗೆ ಗೊಂದಲವುಂಟಾಯಿತು, ಸಿಎಂ ಪುತ್ರನಿಗೂ ಪನಾಮ ಹಗರಣಕ್ಕೂ ಸಂಬಂಧವಿಲ್ಲ ಎಂದಿದ್ದರು.

       ಆದರೆ ರಾಹುಲ್ ತಮ್ಮ ಮಾನಹಾನಿಗೈಯ್ಯಲೆಂದೇ ಉದ್ದೇಶಪೂರ್ವಕವಾಗಿ ಹೀಗೆ ಹೇಳಿದ್ದರೆಂದು ಮುಖ್ಯಮಂತ್ರಿ ಚೌಹಾಣ್ ಪುತ್ರ ಆರೋಪಿಸಿದ್ದರು.

 

(Visited 17 times, 1 visits today)

Related posts