ರೆಡ್ಡಿ ಬಂಧನದಲ್ಲಿ ಸರ್ಕಾರದ ಕೈವಾಡವಿಲ್ಲ: ಪರಮೇಶ್ವರ್

ತುಮಕೂರು:

      ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಬಂಧಿಸಿರುವುದರಲ್ಲಿ ಯಾವುದೇ ರಾಜಕೀಯ ಒತ್ತಡ ಇಲ್ಲ. ಸಿಸಿಬಿ ಪೊಲೀಸರಿಗೆ ಸಿಕ್ಕಿರುವ ಮಾಹಿತಿ ಮೇರೆಗೆ ಬಂಧಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.

      ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ಧನರೆಡ್ಡಿ ಅವರನ್ನು ಬಂಧಿಸಿರುವ ಬಗ್ಗೆ ನೇರ ಸಾಕ್ಷ್ಯಾಧಾರಗಳನ್ನು ಒದಗಿಸುವಂತೆ ನ್ಯಾಯಾಲಯ ಸಿಸಿಬಿ ಪೊಲೀಸರಿಗೆ ಆದೇಶ ನೀಡಿದೆ. ನ್ಯಾಯಾಲಯದ ಆದೇಶಕ್ಕೆ ಸಿಸಿಬಿ ಪೊಲೀಸರು ಪೂರಕವಾಗಿ ಸಾಕ್ಷ್ಯಾಧಾರಗಳನ್ನು ಒದಗಿಸಲಿದ್ದಾರೆ ಎಂದು ಹೇಳಿದರು.

      ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಸರ್ಕಾರಿ ಕಾರ್ಯಕ್ರಮ. ಈ ಕಾರ್ಯಕ್ರಮ ಮಾಡುವಲ್ಲಿ ನಾವು ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಕಾನೂನಿನ ಚೌಕಟ್ಟಿನಲ್ಲಿ ಜಯಂತಿಯನ್ನು ಆಚರಣೆ ಮಾಡಿದ್ದೇವೆ ಎಂದರು.

      ಟಿಪ್ಪು ಜಯಂತಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವುದಾಗಲೀ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಾಕಾರಿ ಪೋಸ್ಟರ್‌ಗಳನ್ನು ಹಾಕುವಂತಿಲ್ಲ ಎಂದು ತಾವು ಜಯಂತಿಗೂ ಮೊದಲೇ ಹೇಳಿಕೆ ನೀಡಿದ್ದೇವು. ಹಾಗಾಗಿ ಜಯಂತಿ ಕುರಿತು ಅವಹೇಳನ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದರು.

ಶೀಘ್ರ ಸಂಪುಟ ವಿಸ್ತರಣೆ:

      ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆ ಮಾಡಲಾಗುವುದು. ಹಾಗೆಯೇ ನಿಗಮ ಮಂಡಳಿಗಳಿಗೂ ಅಧ್ಯಕ್ಷರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

      ರಫೇಲ್ ಯುದ್ಧ ವಿಮಾನ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿದು ಸತ್ಯಾಂಶ ಹೊರ ಬರುವವರೆಗೂ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಅವರು ಹೇಳಿದರು.

      ಮುಂದಿನ ಆರು ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸಂಸದರನ್ನು ಗೆಲ್ಲಿಸಿಕೊಳ್ಳುವ ಮೂಲಕ ರಾಹುಲ್‌ಗಾಂಧಿ ಅವರನ್ನು ಪ್ರಧಾನಿಯನ್ನಾಗಿ ಮಾಡುವುದೇ ನಮ್ಮ ಗುರಿ ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ರಾಮಕೃಷ್ಣ, ಮಾಜಿ ಶಾಸಕರಾದ ಷಫಿಅಹಮದ್, ಡಾ. ರಫೀಕ್ ಅಹಮದ್ ಮತ್ತಿತರರು ಉಪಸ್ಥಿತರಿದ್ದರು.

 

 

(Visited 9 times, 1 visits today)

Related posts

Leave a Comment