ರೈಲ್ವೆ ಮಾರ್ಗ ನಿರ್ಮಾಣ : ಭೂಮಿ ಕಳೆದುಕೊಳ್ಳುವವರಿಗೆ ಉತ್ತಮ ಬೆಲೆ-ಸಂಸದ

ತುಮಕೂರು:

      ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಗೆ ಜಮೀನು ಕಳೆದುಕೊಳ್ಳುವ ರೈತರಿಗೆ ಉತ್ತಮ ಬೆಲೆಯನ್ನು ನಿಗಧಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ ಎಂದು ಸಂಸದ ಜಿ.ಎಸ್.ಬಸವರಾಜ್ ಅವರು ತಿಳಿಸಿದರು.

      ಜಿಲ್ಲಾಧಿಕಾರಿಗಳ ಕಛೇರಿಯಲ್ಲಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ಉದ್ದೇಶಕ್ಕಾಗಿ ಭೂಸ್ವಾಧೀನಪಡಿಸಿಕೊಳ್ಳಲಾದ ಜಮೀನುಗಳ ಭೂ ಮಾಲೀಕರಿಗೆ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಸೂಕ್ತ ಪರಿಹಾರದ ಹಕ್ಕು ಪುನರ್ವಸತಿ ಮತ್ತು ಪುನರ್ ನಿರ್ಮಾಣ ಕಾಯ್ದೆ ಕಲಂ 17ರನ್ವಯ ಸಿಗಬಹುದಾದ ಪ್ರಯೋಜನಗಳ ಕುರಿತ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ರೈಲ್ವೆ ಮಾರ್ಗ ನಿಮ್ಮ ಗ್ರಾಮ ಅಥವಾ ಜಮೀನಿನಲ್ಲಿ ಹಾದು ಹೋಗುವುದರಿಂದ ನಿಮಗೆ ಅನುಕೂಲವಾಗಲಿದೆ. ತಂಟೆ ತಕರಾರುಗಳನ್ನು ಮಾಡಬೇಡಿ, ತಂಟೆ ತಕರಾರುಗಳಿದ್ದರೆ ಪ್ರಾರಂಭದಲ್ಲಿ ಪರಿಹಾರ ಮಾಡಿಕೊಳ್ಳಿ. ಇವತ್ತಿಗೆ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಮುಗಿಯುವ ಹಂತಕ್ಕೆ ಬರಬೇಕಾಗಿತ್ತು. ಆದರೆ ಇನ್ನು ಜಮೀನು ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ರೈಲ್ವೆ ನಿರ್ಮಾಣಕ್ಕೆ ರೈತರ ಸಹಕಾರವೂ ಅತಿ ಮುಖ್ಯ ಎಂದರು. ಸರ್ಕಾರವು ನಿಗಧಿಪಡಿಸುವ ಪ್ರತಿ ಎಕರೆಗೆ ಸ್ಲ್ಯಾಬ್‍ದರದ 4 ಪಟ್ಟು ದರವನ್ನು ನಿಗಧಿಪಡಿಸಲಾಗುತ್ತಿದೆ. ಜಿಲ್ಲಾಧಿಕಾರಿಗಳು ದರ ನಿಗಧಿ ಮಾಡುವಾಗ ಉತ್ತಮ ಬೆಲೆಯನ್ನು ರೈತರಿಗೆ ನಿಗಧಿ ಮಾಡಬೇಕು ಎಂದು ಅವರು ತಿಳಿಸಿದರು.

      ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಡಾ: ರಾಕೇಶ್‍ಕುಮಾರ್ ಅವರು, ರೈಲ್ವೆ ಮಾರ್ಗ ಕಾಮಗಾರಿಗೆ ಶೇ. 50ಕ್ಕಿಂತ ಹೆಚ್ಚು ಪ್ರಮಾಣದ ಭೂಮಿ ಕಳೆದುಕೊಳ್ಳುವ ರೈತರಿಗೆ ಭೂಸ್ವಾಧೀನದ ಹಣದ ಜತೆಗೆ 5ಲಕ್ಷ ರೂ. ಪ್ಯಾಕೇಜ್ ನೀಡಲಾಗುತ್ತಿದೆ. ಶೇ. 50ಕ್ಕಿಂತ ಹೆಚ್ಚು ಭೂಮಿ ಕಳೆದುಕೊಳ್ಳುವ ಎಲ್ಲಾ ರೈತರಿಗೂ ಒಂದೇ ಸಮವಾದ ಪ್ಯಾಕೇಜ್ ನಿಗಧಿ ಮಾಡಲಾಗಿದೆ. ಸದರಿ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಅನುಮೋದನೆಗಾಗಿ ಕಳುಹಿಸಲಾಗುವುದು ಎಂದರು. ಸಭೆಯಲ್ಲಿ ಶಾಸಕರಾದ ವೀರಭದ್ರಯ್ಯ, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಮತ್ತಿತರರು ಹಾಜರಿದ್ದರು.

(Visited 21 times, 1 visits today)

Related posts