ವಿಕಲ ಚೇತನ ಸ್ನೇಹಿ ವಾತಾವಾರಣ ನಿರ್ಮಾಣವಾಗಬೇಕು

ತುಮಕೂರು:

      ವಿಕಲಚೇತನರ ಕಲ್ಯಾಣಕ್ಕಾಗಿ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ಕಡ್ಡಾಯವಾಗಿ ಅರ್ಹ ವಿಕಲಚೇತನರಿಗೆ ತಲುಪಿಸಬೇಕೆಂದು ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಆಯುಕ್ತ ವಿ.ಎಸ್.ಬಸವರಾಜು ಅವರು ಸೂಚಿಸಿದರು.

      ತುಮಕೂರು ನಗರದ ಜಿಲ್ಲಾ ಪಂಚಾಯಿತಿ ಸಂಭಾಗಣದಲ್ಲಿ ನಡೆದ ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನಗಳ ಬಗ್ಗೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದ ಅವರು. ಅಂಗವಿಕಲರ ಅಧಿನಿಯಮದ ಪ್ರಕಾರ ಶೇ.5ರಷ್ಟು ಮೀಸಲಾತಿಯನ್ನು ವಿಕಲ ಚೇತನರಿಗೆ ನೀಡಬೇಕಾಗಿದೆ ಹಾಗೂ ವಿಕಲ ಚೇತನ ಸ್ನೇಹಿ ವಾತಾವಾರಣವನ್ನು ನಿರ್ಮಿಸಬೇಕಾಗಿದೆ. ವಿಕಲಚೇತನರ ಕಲ್ಯಾಣಕ್ಕಾಗಿರುವ ಯೋಜನೆಗಳನ್ನು ಸಂಬಂದಿಸಿದ ಇಲಾಖೆಗಳು ಶೇಕಡ 100 ರಷ್ಟು ಅನುಷ್ಠಾನಗೊಳಿಸಬೇಕು ಎಂದರು.

      ಸಾರಿಗೆ ಸಂಸ್ಥೆ ಬಸ್‍ಗಳಲ್ಲಿ ವಿಕಲಚೇತನರಿಗೆ ಮೀಸಲಿಟ್ಟ ಆಸನಗಳನ್ನು ವಿಕಲ ಚೇತನರಿಗೆ ಬಿಟ್ಟು ಕೊಡಬೇಕು. ಬಸ್ಸಿನ ಚಾಲಕ/ನಿರ್ವಾಹಕರು ಈ ಬಗ್ಗೆ ನಿಗಾವಹಿಸಿ ಮಾನವೀಯತೆ ಮೆರೆಯಬೇಕು ಎಂದು ಅವರು ತಿಳಿಸಿದರು.
ಶಿರಾ ಹಾಗೂ ಮಧುಗಿರಿ ತಾಲೂಕನ್ನು ಚಿತ್ರದುರ್ಗ ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ಕಛೇರಿಯ ವ್ಯಾಪ್ತಿಗೆ ವರ್ಗಾಯಿಸಿದ್ದು, ವಿಕಲಚೇತನರಿಗೆ ಚಿತ್ರದುರ್ಗಕ್ಕೆ ತೆರಳಿ ಬಸ್‍ಪಾಸ್‍ಗಳ ನವೀಕರಣ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಸಂಬಂಧಿಸಿದ ತಾಲ್ಲೂಕ್ ಕೇಂದ್ರಗಳಲ್ಲಿ ಪಾಸು ನವೀಕರಣ /ವಿತರಣೆಯನ್ನು ಮಾಡುವ ಸೌಲಭ್ಯ ಕಲ್ಪಿಸುವಂತೆ ಶಿರಾದಿಂದ ಆಗಮಿಸಿದ ವಿಕಲಚೇತನರೊಬ್ಬರು ಆಯುಕ್ತರ ಗಮನಕ್ಕೆ ತಂದರು.

      ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಶಿರಾ ಮತ್ತು ಮಧುಗಿರಿ ತಾಲ್ಲೂಕ್‍ಗಳನ್ನು ಚಿತ್ರದುರ್ಗದ ವಿಭಾಗೀಯ ಕಛೇರಿಯ ವ್ಯಾಪ್ತಿಗೆ ಆಡಳಿತಾತ್ಮಕ ಹಿತ ದೃಷ್ಠಿಯಿಂದ ಕೆ.ಎಸ್.ಆರ್.ಟಿ.ಸಿ. ಸಂಸ್ಥೆ ತಂದಿರಬಹುದು. ಆದರೆ ವಿಕಲ ಚೇತನರ ಅನುಕೂಲದ ದೃಷ್ಠಿಯಿಂದ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಕೆ.ಎಸ್.ಆರ್.ಟಿ.ಸಿ. ಸಂಸ್ಥೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತುಮಕೂರು ಜಿಲ್ಲೆಯಲ್ಲಿರುವ ಬಸ್ ನಿಲ್ದಾಣಗಳಲ್ಲಿ ವಿಕಲಚೇತನರಿಗೆ ಅನುಕೂಲವಾಗುವ ರ್ಯಾಂಪ್ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ನಿಲ್ದಾಣದಮಳಿಗೆಗಳಲ್ಲಿ ಶೇ. 5ರಷ್ಟು ಮೀಸಲಾತಿಯನ್ನು ವಿಕಲ ಚೇತನರಿಗೆ ಮೀಸಲಿಡಬೇಕು ಎಂದು ಅವರು ತಿಳಿಸಿದರು.

      ಜಿಲ್ಲೆಯಲ್ಲಿ 34 ವಸತಿ ಶಾಲೆಗಳು ಇದ್ದು, ಈ ಪೈಕಿ 25 ಸ್ವಂತ ಕಟ್ಟಡಗಳನ್ನು ಹೊಂದಲಾಗಿದೆ. ಈ ಶಾಲೆಗಳಲ್ಲಿ ರ್ಯಾಂಪ್, ಶೌಚಾಲಯ ಹಾಗೂ ವಿಕಲ ಚೇತನರ ವಿದ್ಯಾರ್ಥಿಗಳು ಕಲಿಯಲು ಅನುಕೂಲವಾಗುವ ತರಗತಿಗಳನ್ನು, ಕೊಠಡಿಗಳನ್ನು ನಿರ್ಮಿಸಲಾಗಿದೆ. ಉಳಿದಂತೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ವಸತಿ ಶಾಲೆಗಳಲ್ಲೂ ರ್ಯಾಂಪ್, ಶೌಚಾಲಯ ಸೇರಿದಂತೆ ವಿಕಲಚೇತನ ಸ್ನೇಹಿ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಡಾ|| ಜಿ.ಪಿ.ದೇವರಾಜು ಸಭೆಗೆ ಮಾಹಿತಿ ನೀಡಿದರು.

      ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಕಲಚೇತನರಿಗೆ ನಿಗದಿಪಡಿಸಿರುವ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅರ್ಹ ವಿಕಲಚೇತನರಿಗೆ ಪಿಂಚಣಿಯನ್ನು ಜಿಲ್ಲೆಯಲ್ಲಿ ನೀಡಲಾಗುತ್ತಿದ್ದು, ಪಿಂಚಣಿ ಆದಾಲತ್ ನಡೆಸಿ ಅಲ್ಲಿಯೂ ಕೂಡ ಪಿಂಚಣಿ ಅರ್ಜಿಗಳನ್ನು ಪಡೆದು ಮಂಜೂರಾತಿ ನೀಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಳೆದ ಚುನಾವಣೆ ಸಂದರ್ಭದಲ್ಲಿ ವಿಕಲ ಚೇತನರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಕ್ರಮ ವಹಿಸಲಾಗಿತ್ತು ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್ ಕುಮಾರ್ ಅವರು ಆಯುಕ್ತರಿಗೆ ಮಾಹಿತಿ ನೀಡಿದರು.

      ತೋಟಗಾರಿಕೆ, ಕೃಷಿ, ನರೇಗಾ, ಆರೋಗ್ಯ ಸೌಲಭ್ಯ ನೀಡುವುದು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಸೌಲಭ್ಯಗಳನ್ನು ವಿಕಲತೆಯನ್ನು ಆಧರಿಸಿ ನೀಡಬೇಕು. ವಿಕಲಚೇತನರಿಗೆ ಇರುವ ಸೌಲಭ್ಯಗಳ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

      ಸಭೆಯಲ್ಲಿ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ಸಹಾಯಕ ಆಯುಕ್ತ ಪದ್ಮನಾಬ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ-1, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಟರಾಜು, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಅಧಿಕಾರಿ ರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

(Visited 77 times, 1 visits today)

Related posts

Leave a Comment