ವಿಜ್ಞಾನದ ಆವಿಷ್ಕಾರಗಳು ಅಭಿವೃದ್ಧಿಗೆ ಪೂರಕವಾಗಿರಬೇಕು – ಶ್ರೀ ಸಿದ್ಧಲಿಂಗಸ್ವಾಮೀಜಿಗಳು

ತುಮಕೂರು:

      ವಿಜ್ಞಾನದ ಆವಿಷ್ಕಾರಗಳು ಮನುಷ್ಯ ಹಾಗೂ ಸಮಾಜದ ಬೆಳವಣಿಗೆಗೆ ಪೂರಕವಾಗಬೇಕೇ ಹೊರತು ಮಾರಕವಾಗಬಾರದು ಎಂದು ಶ್ರೀ ಸಿದ್ಧಗಂಗಾ ಮಠದ ಮಠಾಧ್ಯಕ್ಷ ಶ್ರೀ ಸಿದ್ಧಲಿಂಗಸ್ವಾಮೀಜಿಗಳು ಅಭಿಪ್ರಾಯಪಟ್ಟರು.

      ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ತುಮಕೂರು(ದ)ಜಿಲ್ಲೆ ಇವರ ಸಹಯೋಗದಲ್ಲಿಂದು ಶ್ರೀ ಸಿದ್ಧಗಂಗಾ ಮಠದಲ್ಲಿ ಹಮ್ಮಿಕೊಂಡಿದ್ದ 2019-20 ನೇ ಸಾಲಿನ “ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನ” ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಅವರು, ವಿಜ್ಞಾನವೆಂಬುದು ಸತ್ಯದ ಅನ್ವೇಷಣೆಯಾಗಿದ್ದು, ವಿಜ್ಞಾನದ ನೂತನ ಆವಿಷ್ಕಾರಗಳು ಮನುಷ್ಯನ ಯೋಗಕ್ಷೇಮಕ್ಕೆ ಅನುಗುಣವಾಗಿರಬೇಕು ಎಂದು ಅವರು ತಿಳಿಸಿದರು.

      ವಿಜ್ಞಾನದ ಆವಿಷ್ಕಾರಗಳಿಂದ ಸೌಲಭ್ಯಗಳು ಹೆಚ್ಚಾದಂತೆ ಮನುಷ್ಯ ಸೋಮಾರಿತನ ಬೆಳೆಸಿಕೊಂಡು ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾನೆ. ವಿಜ್ಞಾನದ ಆವಿಷ್ಕಾರಗಳು ನಮಗೆ ಬೇಕು ಆದರೆ ಎಷ್ಟು ಬೇಕು ಅಷ್ಟನ್ನು ಮಾತ್ರ ಬಳಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

      ಮಕ್ಕಳಲ್ಲಿ ಶಾಸ್ತ್ರೀಯ ವಿಜ್ಣಾನ ಅಭ್ಯಸಿಸುವ ಗುಣವನ್ನು ಬೆಳೆಸಬೇಕು. ಮಕ್ಕಳಲ್ಲಿ ಉತ್ತಮ ವಿಜ್ಣಾನಿಯಾಗಬೇಕೆಂಬ ಆಸಕ್ತಿ ಕುಂದುತ್ತಿದೆ. ಆದ್ದರಿಂದ ಶಿಕ್ಷಕರು, ಪೋಷಕರು ವಿಜ್ಞಾನಿಯಾಗುವ ಆಸಕ್ತಿಯ ಬೀಜವನ್ನು ಮಕ್ಕಳ ಮನಸ್ಸಲ್ಲಿ ಬಿತ್ತಬೇಕು ಎಂದು ಹೇಳಿದರು.

      ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಮಾತನಾಡಿ, ಜೀವನದಲ್ಲಿ ನೈಜ ದೇವರ ನೋಡಲು ಸಾಧ್ಯವಿಲ್ಲ. ಆದರೆ, ಲಿಂ.ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರು ಲಕ್ಷಾಂತರ ಭಕ್ತಗಣಕ್ಕೆ ಮಾರ್ಗದರ್ಶನ ನೀಡುತ್ತಾ ನಡೆದಾಡುವ ದೇವರ ಸ್ವರೂಪರಾಗಿದ್ದರು ಎಂದು ಅಭಿಪ್ರಾಯಪಟ್ಟರು.

      ಶಿಕ್ಷಣ ಇಲಾಖಾ ವ್ಯಾಪ್ತಿಯಲ್ಲಿ ಬರುವ ಕಾರ್ಯಕ್ರಮ ರೂಪಿಸುವುದಕ್ಕೂ ಮುನ್ನ ಶಿಕ್ಷಣಾಧಿಕಾರಿಗಳು ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಚರ್ಚೆ ನಡೆಸಬೇಕು ಎಂದರಲ್ಲದೆ ವಸ್ತು ಪ್ರದರ್ಶನದಲ್ಲಿ ಮಕ್ಕಳ ಶ್ರಮ ಅತ್ಯುನ್ನತವಾದುದ್ದಾಗಿದೆ. ಶಿಕ್ಷಕರು, ಪೋಷಕರು ಮಕ್ಕಳಿಗೆ ಸದಾ ಪ್ರೋತ್ಸಾಹ ನೀಡಬೇಕು ಎಂದು ಅವರು ಸ್ಫೂರ್ತಿದಾಯಕ ಮಾತುಗಳನ್ನಾಡಿದರು.

      ಪ್ರಸ್ತುತವಿರುವ ಸ್ವರ್ಧಾತ್ಮಕ ಯುಗದಲ್ಲಿ ಖಾಸಗಿ ಶಾಲೆಯ ಮಕ್ಕಳು ವಿಜ್ಞಾನ ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಸರ್ಕಾರಿ ಶಾಲೆಯ ಮಕ್ಕಳು ವಿಜ್ಞಾನ ಅಭ್ಯಸಿಸಲು ಹಿಂಜರಿಯುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ಸರ್ಕಾರ ಮಕ್ಕಳಿಗೆ ಇಲಾಖೆಯಿಂದ ಜಾಗೃತಿ ಮೂಡಿಸಬೇಕಾಗಿದೆ ಎಂದು ಅವರು ಸಲಹೆ ನೀಡಿದರು.

      ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿಲ್ಲಾ ಪಂಚಾಯತ್ ಸದಸ್ಯ ನರಸಿಂಹಮೂರ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಂ.ಆರ್. ಕಾಮಾಕ್ಷಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಅಧ್ಯಕ್ಷ ಷಣ್ಮುಖಯ್ಯ, ಜಿಲ್ಲಾ ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಶ್, ಸೇರಿದಂತೆ ಜಿಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನ್ಯಾಸಕರು, ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ್ದ ಶಿಕ್ಷಕರು ಮಕ್ಕಳು ಸೇರಿದಂತೆ ಮತ್ತಿತರರು ಉಪಸ್ಥಿತಿತರಿದ್ದರು.

  ಕಣ್ಮನ ಸೆಳೆದ ವಸ್ತುಪ್ರದರ್ಶನ:

      ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನಾನಾ ಶಾಲಾ ವಿದ್ಯಾರ್ಥಿಗಳು ಮೂಡಿಸಿದ್ದ ವಸ್ತು ಪ್ರದರ್ಶನ ಕಣ್ಮನಸೆಳೆಯಿತು. 

      ಸುಸ್ಥಿರ ಕೃಷಿ ಪದ್ದತಿ, ಭವಿಷ್ಯದಲ್ಲಿ ಸಾರಿಗೆ ಮತ್ತು ಸಂಪರ್ಕ, ಭವಿಷ್ಯದ ಸಾರಿಗೆ ಮತ್ತು ಸಂವಹನ, ಕೈಗಾರಿಕಾ ಅಭಿವೃದ್ಧಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಗಣಿತದ ಮಾದರಿಗಳು, ಸೋಲಾರ್ ಆಧಾರಿತ ಬಸ್, ಏರ್ ಪೆÇರ್ಟ್, ಮೆಟ್ರೋರೈಲು, ಸ್ಮಾರ್ಟ್ ಸಿಟಿ, ಸಮರ್ಥನೀಯ ಕೃಷಿ ಆಚರಣೆ ಸೇರಿದಂತೆ ವಿವಿಧ ಪ್ರದರ್ಶನಗಳು ಆಕರ್ಷಿಸಿಸುತ್ತಿದ್ದವು.

(Visited 36 times, 1 visits today)

Related posts

Leave a Comment