ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಉಪನ್ಯಾಸಕರ ಅವಶ್ಯಕತೆಯಿದೆ-ಸಚಿವ

ತುಮಕೂರು:

      ಶಾಲಾ ಶಿಕ್ಷಣದಿಂದ ಬಂದ ವಿದ್ಯಾರ್ಥಿಗಳಿಗೆ ಉತ್ತಮವಾದ ಮಾರ್ಗದರ್ಶನವನ್ನು ಮಾಡುವ ಮೂಲಕ ಉತ್ತಮ ಭವಿಷ್ಯ ಕಲ್ಪಿಸಿಕೊಡುವ ಅವಕಾಶ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಪ್ರಾಚಾರ್ಯರ ಮೇಲಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಕಾನೂನು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

      ನಗರದ ಕನ್ನಡ ಭವನದಲ್ಲಿ ನಡೆದ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಲ್ಲಿರುವ ಶಕ್ತಿ ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುವ ಉಪನ್ಯಾಸಕರೇ ನಿಜವಾದ ಗುರುಗಳು, ವಿದ್ಯಾರ್ಥಿಗಳಲ್ಲಿ ಜಾನದ ಹಸಿವು ಹೆಚ್ಚಿಸುವ ಕೆಲಸ ಮಾಡುವ, ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬುವ ಉಪನ್ಯಾಸಕರ ಅವಶ್ಯಕತೆ ಇದೆ ಎಂದರು.
ಬೋಧನೆ ಮಾಡುವವರೆಲ್ಲ ಗುರುಗಳಲ್ಲ, ವಿದ್ಯಾರ್ಥಿಗಳನ್ನು ತಿದ್ದಿತೀಡಿ, ಪ್ರೋತ್ಸಾಹಿಸುವವರನ್ನು ಮಾತ್ರ ಗುರುಗಳು ಎನ್ನುತ್ತಾರೆ, ವಿದ್ಯಾರ್ಥಿಗಳ ಭವಿಷ್ಯದ ಜವಾಬ್ದಾರಿ ಉಪನ್ಯಾಸಕರ ಮೇಲಿದೆ ಎಂದ ಅವರು, ಪದವಿ ಪೂರ್ವ ಶಿಕ್ಷಣದಿಂದ ಪಡೆಯುವ ಅಂಕಗಳಿಗೆ ಯಾವುದೇ ಮಾನ್ಯತೆ ಇಲ್ಲದಂತಾಗಿದ್ದು, ಸಿಇಟಿ ಅಂಕಗಳಿಕೆಯೇ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ವಿಗೊಳ್ಳುವಂತೆ ರೂಪುಗೊಳಿಸಬೇಕು ಎಂದು ಉಪನ್ಯಾಸಕರಿಗೆ ಸಲಹೆ ನೀಡಿದರು.

      ವಿದ್ಯಾರ್ಥಿಗಳನ್ನು ಅಂಕಗಳಿಕೆಗೆ ಸೀಮಿತಗೊಳಿಸದೇ, ವಿಷಯವನ್ನು ಅರ್ಥ ಮಾಡಿಸುವ ಕಡೆ ಗಮನ ಹರಿಸಬೇಕು, ವಿದ್ಯಾರ್ಥಿಗಳಿಗೆ ಯೋಚನೆ ಮಾಡಿ, ಅರ್ಥ ಮಾಡಿಕೊಳ್ಳುವಂತಹ ಶಿಕ್ಷಣವನ್ನು ಕಲಿಸಿ ಎಂದ ಅವರು, ವಿದ್ಯಾರ್ಥಿಗಳಲ್ಲಿ ಓದುವ ಕುತೂಹಲವನ್ನು ಮೂಡಿಸಬೇಕು, ಅಧ್ಯಯನಕ್ಕೆ ಹೆಚ್ಚಿನ ವಿಷಯಗಳನ್ನು ಒದಗಿಸಬೇಕಾದ ಜವಾಬ್ದಾರಿ ಇದೆ, ಯಾವುದೇ ಸಂಶಯವನ್ನು ವಿದ್ಯಾರ್ಥಿಗಳು ಉಳಿಸಿಕೊಳ್ಳಬಾರದು ಎಂದು ಹೇಳಿದರು.

      ಜಿಲ್ಲೆಯ ವಿದ್ಯಾರ್ಥಿಗಳು ನೀಟ್, ಜೆಇಇ, ಮೆಡಿಕಲ್ ಸೀಟುಗಳನ್ನು ಪಡೆಯುವಂತಾಗಬೇಕು, ಆಡಳಿತಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಹುದ್ದೆಗಳನ್ನು ಗಳಿಸುವಂತಾಗಬೇಕು ಆ ನಿಟ್ಟಿನಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳನ್ನು ರೂಪಿಸಬೇಕು ಎಂದ ಅವರು, ವಿದ್ಯಾರ್ಥಿಗಳ ಶಕ್ತಿಯನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ವಿದ್ಯಾರ್ಥಿಯನ್ನು ಶಕ್ತನಾಗಿಸುವ ಕೆಲಸವನ್ನು ಮಾಡುವುದೇ ಶಿಕ್ಷಣ ಎಂದ ಅವರು, ಆ ನಿಟ್ಟಿನಲ್ಲಿ ಉಪನ್ಯಾಸಕರು ಚಿಂತಿಸಬೇಕು ಎಂದು ಕಿವಿಮಾತು ಹೇಳಿದರು.ತುಮಕೂರು ಶಾಸಕ ಜ್ಯೋತಿಗಣೇಶ್ ಮಾತನಾಡಿ ತಜ್ಞರಿಂದಲೇ ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿಕೊಳ್ಳಬಹುದು, ಉಪನ್ಯಾಸಕರು ತಯಾರಿಲ್ಲದೆ ಪಾಠ ಮಾಡದೇ ಹೋದರೆ, ವಿದ್ಯಾರ್ಥಿಗಳು ವಿಷಯವನ್ನು ಅರ್ಥ ಮಾಡಿಕೊಳ್ಳುವುದಿಲ್ಲ, ಓದುವಾಗಲೇ ವಿಷಯವನ್ನು ಅರ್ಥಮಾಡಿಕೊಳ್ಳುವಂತಹ ಸ್ಥಿತಿಯನ್ನು ನಿರ್ಮಿಸಬೇಕಾಗಿದೆ. ಮಕ್ಕಳಿಗೆ ಬೇಕಿರುವುದು ಪ್ರೋತ್ಸಾಹ ಅದನ್ನು ಉಪನ್ಯಾಸಕರು ಮಾಡಿದರೆ ಉತ್ತಮ ಪ್ರಜೆಗುವುದಷ್ಟೇ ಅಲ್ಲದೇ, ಉತ್ತಮ ಸ್ಥಾನವನ್ನು ಪಡೆದುಕೊಳ್ಳಬಹುದು ಎಂದು ಹೇಳಿದರು.

      ವಿಧಾನ ಪರಿಷತ್ ಸದಸ್ಯ ಚೌಡರೆಡ್ಡಿ ಮಾತನಾಡಿ, ಶಿಕ್ಷಕರ ಮಹತ್ವವನ್ನು ಅರಿತುಕೊಳ್ಳಬೇಕಿದೆ, ಶಿಕ್ಷಕರು ದೇವರಿಗೆ ಸಮಾನವಾದವರೂ, ಗುರುವಿನ ಮಾರ್ಗದರ್ಶನವಿಲ್ಲದೇ ಏನನ್ನು ಸಾಧಿಸಲು ಆಗುವುದಿಲ್ಲ, ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಸಮಸ್ಯೆಗಳಿದ್ದರೂ, ಅವೆಲ್ಲವನ್ನು ಬದಿಗೊತ್ತಿ ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಶ್ರಮಿಸುತ್ತಾರೆ ಅಂತಹ ಶಿಕ್ಷಕರ ಮಹತ್ವವನ್ನು ವಿದ್ಯಾರ್ಥಿಗಳು ಹಾಗೂ ಸಮಾಜ ಅರಿಯಬೇಕಿದೆ ಎಂದರು.

     ದೇಶಕ್ಕೆ ಸಂಪತ್ತು ನೀಡಲು ಶ್ರಮಿಸುತ್ತಿರುವ ಶಿಕ್ಷಕರು ಎದುರಿಸುತ್ತಿರುವ ವೇತನ ಹಾಗೂ ಕಡ್ಡಾಯ ವರ್ಗಾವಣೆ ಸಂಬಂಧ ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಸದಸ್ಯರ ಸಭೆಯನ್ನು ಶಿಕ್ಷಣ ಸಚಿವರೊಂದಿಗೆ ಚರ್ಚಿಸಿದ್ದು, ಕಾನೂನಿಗೆ ತಿದ್ದುಪಡಿ ತಂದು ಉಪನ್ಯಾಸಕರು ಹಾಗೂ ಶಿಕ್ಷಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಸಹಮತವನ್ನು ವ್ಯಕ್ತಪಡಿಸಿದ್ದಾರೆ ಎಂದರು.

      ಪ್ರಾಸ್ತಾವಿಕ ನುಡಿಗಳನ್ನಾಡಿದ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಸ್.ಸಿದ್ದಲಿಂಗಪ್ಪ ಅವರು, ಶಿಕ್ಷಕರ ದಿನಾಚರಣೆಯಂದು ಸರ್ಕಾರದ ವತಿಯಿಂದ ನಿವೃತ್ತ ಉಪನ್ಯಾಸಕರನ್ನಾಗಲಿ ಸನ್ಮಾನಿಸಲಾಗುವುದಿಲ್ಲ, ಕಾರ್ಯಕ್ರಮಕ್ಕೆ ಆಹ್ವಾನಿಸುವುದಿಲ್ಲ ಹಾಗಾಗಿ ಪ್ರಾಚಾರ್ಯರ ಸಂಘದ ವತಿಯಿಂದ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಚಿವರು ಎಷ್ಟು ಸರಿ ಶಿಕ್ಷಕರ ದಿನಾಚರಣೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾರೆ, ಹಾಗಾಗಿ ಈ ವಿಚಾರವನ್ನು ಪ್ರಾಸ್ತಾವಿಕವಾಗಿ ಈ ವಿಷಯವನ್ನು ತಿಳಿಸಲಾಗುತ್ತಿದೆ ಎಂದರು.

       ಜಿಲ್ಲೆಯಲ್ಲಿ 240 ಸರ್ಕಾರಿ ಪದವಿಪೂರ್ವ ಕಾಲೇಜುಗಳಿವೆ, 50 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಸಂಘದ ವತಿಯಿಂದ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರಿಗೆ ಹಾಗೂ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಿ ಗೌರವಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಟಿ.ಎ.ಲತಾ, ಸಂಘದ ಅಧ್ಯಕ್ಷ ಶಂಕರ್, ರಾಜ್ಯ ಪ್ರತಿನಿಧಿ ಡಿ.ಕೆ.ಜಯರಾಮಯ್ಯ, ಸಂಘಟನಾ ಕಾರ್ಯದರ್ಶಿ ಎಸ್.ರಾಜಣ್ಣ, ಖಜಾಂಚಿ ಎಂ.ರಾಜಯ್ಯ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

(Visited 49 times, 1 visits today)

Related posts