ಶಾಲಾ-ಕಾಲೇಜು 100 ಮೀ. ಆವರಣದೊಳಗಿರುವ ತಂಬಾಕು ಅಂಗಡಿಗಳ ಮುಚ್ಚಿ – ಎಡಿಸಿ

ತುಮಕೂರು :

      ಜಿಲ್ಲಾದ್ಯಂತ ಶಾಲಾ-ಕಾಲೇಜುಗಳ ವ್ಯಾಪ್ತಿಯ 100 ಮೀಟರ್ ಆವರಣದೊಳಗಿರುವ ತಂಬಾಕು ಅಂಗಡಿಗಳನ್ನು ಮುಚ್ಚಿಸುವಂತೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ತಂಬಾಕು ಅಂಗಡಿಗಳನ್ನು ತೆರವುಗೊಳಿಸುವಂತೆ ಹಾಗೂ ಸರ್ಕಾರದ ಅನುಮತಿ ಪಡೆಯದ ಅಂಗಡಿಗಳ ಮಾಲೀಕರ ಮೇಲೆ ಪ್ರಕರಣ ದಾಖಲಿಸುವಂತೆ ಅವರು ಸೂಚಿಸಿದರು.

      ಸ್ಮಾರ್ಟ್‍ಸಿಟಿ ವತಿಯಿಂದ ಅಳವಡಿಸಲಾಗಿರುವ ಎಲ್.ಇ.ಡಿ ಬೋರ್ಡ್‍ಗಳಲ್ಲಿ ತಂಬಾಕು ದುಷ್ಪರಿಣಾಮದ ಬಗ್ಗೆ ಜಾಹೀರಾತು ನೀಡಬೇಕು ಅಲ್ಲದೇ ಪಾಲಿಕೆ ವತಿಯಿಂದ ವ್ಯಾಪಾರಕ್ಕೆಂದು ನೀಡಲಾಗುವ ಪರವಾನಗಿಯಲ್ಲಿ ಕಡ್ಡಾಯವಾಗಿ ಧೂಮಪಾನ ನಿಷೇಧಿತ ಫಲಕಗಳನ್ನು ಹಾಕಬೇಕು.

      ರಾಜ್ಯದಲ್ಲಿಯೇ ತಂಬಾಕು ನಿಯಂತ್ರಣ ಕಾರ್ಯಾಚರಣೆಯಲ್ಲಿ ತುಮಕೂರು ಜಿಲ್ಲೆ 2ನೇ ಸ್ಥಾನದಲ್ಲಿದೆ. ಈಗಾಗಲೇ ತುಮಕೂರನ್ನು ತಂಬಾಕು ನಿಯಂತ್ರಣ ತಾಲೂಕೆಂದು ಘೋಷಣೆ ಮಾಡಿದ್ದು, 2ನೇ ಬಾರಿಗೆ ತಿಪಟೂರು ತಾಲೂಕಿನಲ್ಲಿ ಹೆಚ್ಚಿನ ಕಾರ್ಯಚಾರಣೆ ನಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

      ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆಗಳ ಸಹಯೋಗದಲ್ಲಿ ಈಗಾಗಲೇ ಜಿಲ್ಲಾದ್ಯಂತ ಏಕಕಾಲದಲ್ಲಿ ವಿದ್ಯಾರ್ಥಿಗಳಿಂದ ಗುಲಾಬಿ ಆಂದೋಲನವನ್ನು ಕೈಗೊಂಡು ಅಂಗಡಿ ಮಾಲೀಕರಿಗೆ ಹಾಗೂ ಸಾರ್ವಜನಿಕರಿಗೆ ತಂಬಾಕು ಸೇವನೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆ ವತಿಯಿಂದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 57 ಕಾರ್ಯಾಚರಣೆಗಳನ್ನು ಕೈಗೊಂಡು 2439 ಪ್ರಕರಣ ದಾಖಲಿಸಿ ಒಟ್ಟು 2,81,850 ರೂ.ಗಳ ದಂಡವನ್ನು ಸಂಗ್ರಹಿಸಲಾಗಿದೆ. ಈ ಪೈಕಿ ತಿಪಟೂರು ತಾಲೂಕಿನಲ್ಲಿ 14 ಕಾರ್ಯಾಚರಣೆ ನಡೆಸಿ ಸುಮಾರು 798 ಪ್ರಕರಣ ದಾಖಲಿಸಿಕೊಂಡು 88,940 ರೂ. ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ||ಬಿ.ಆರ್.ಚಂದ್ರಿಕಾ ಅವರು ತಿಳಿಸಿದರು.
ಸಭೆಯಲ್ಲಿ ರಾಜ್ಯ ತಂಬಾಕು ನಿಯಂತ್ರಣ ಸಂಯೋಜಕರಾದ ಡಾ|| ಪ್ರಭಾಕರ್, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಜಿಲ್ಲಾ ಸಲಹೆಗಾರ ರವಿಪ್ರಕಾಶ್, ಕಾನೂನು ಅರಿವು ನೆರವು ಅಧಿಕಾರಿ ರಾಘವೇಂದ್ರ ಆರ್‍ಸಿಹೆಚ್ ಅಧಿಕಾರಿ ಡಾ|| ಕೇಶವ್‍ರಾಜ್, ಪಾಲಿಕೆ ಆರೋಗ್ಯಾಧಿಕಾರಿ ಡಾ|| ನಾಗೇಶ್ ಸೇರಿದಂತೆ ಮತ್ತಿತರ ಗಣ್ಯರು ಹಾಜರಿದ್ದರು.

(Visited 4 times, 1 visits today)

Related posts

Leave a Comment