ಗುಬ್ಬಿ :
ತಾಲ್ಲೂಕಿನ ಹಾಗಲವಾಡಿ ಹೋಬಳಿಯ ಯರೇಕಾವಲ್‍ನಲ್ಲಿ ಚಿರತೆ ಹಾವಳಿ ಹೆಚ್ಚಾಗಿರುವ ಬಗ್ಗೆ ಪ್ರಗತಿಯಲ್ಲಿ ಸುದ್ದಿ ಪ್ರಕಟವಾಗಿದ್ದಕ್ಕೆ ಎಚ್ಚೆತ್ತುಕೊಂಡ ಅರಣ್ಯಧಿಕಾರಿಗಳು ಕೊನೆಗೂ ಯರೇಕಾವಲ್ ಅರಣ್ಯಪ್ರದೇಶದಲ್ಲಿ ಚಿರತೆ ಹಿಡಿಯಲು ಬೋನು ಇಟ್ಟಿದ್ದಾರೆ.
ರೈತರು ಇಟ್ಟ ಬೆಳೆಗಳ ನಾಶದ ಜತೆಗೆ, ಕಾಡುಹಂದಿಗಳ ಕಾಟ ಹೆಚ್ಚಾಗಿದೆ. ಇದಕ್ಕೂ ಕೂಡ ಸುರಕ್ಷಿತ ಕ್ರಮವಹಿಸಿ ರೈತರ ಬೆಳೆಗಳನ್ನು ನಷ್ಟವಾಗದಂತೆ ಕಾಪಾಡಬೇಕು. ತಾಲ್ಲೂಕು ಅರಣ್ಯಧಿಕಾರಿಗಳು ಬೋನು ಇಟ್ಟು ಕಾಯುತ್ತಿದ್ದಾರೆ. ಆದರೆ ಚಿರತೆ ಖಚಿತವಾಗಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೆಜ್ಜೆ ಗುರುತಿನ ಆಧಾರದ ಮೇಲೆ ಬೋನು ಇಡಲಾಗಿದೆ. ಆದರೆ ಚಿರತೆ ಎಲ್ಲಿದೆ? ಯಾವಾಗ ಬೀಳುತ್ತದೆ ಎಂದು ಕಾದು ನೋಡಬೇಕಾಗಿದೆ. ಜತೆಗೆ ಅಕ್ಕಪಕ್ಕದ ರೈತರು ಆತಂಕಕ್ಕೆ ಈಡಾಗಿದ್ದು, ಹಗಲು ಹೊತ್ತು ದನಕರುಗಳು, ಕುರಿ, ಮೇಕೆಗಳನ್ನು ಅರಣ್ಯಪ್ರದೇಶದ ಕಡೆಗೆ ಹೊಡೆದುಕೊಂಡು ಹೋಗಲು ಹಿಂದು ಮುಂದು ನೋಡುತ್ತಿದ್ದು, ಈ ಭಾಗದ ಗ್ರಾಮಸ್ಥರು ಭಯ ಪಡುತ್ತಿದ್ದಾರೆ.
ಇತ್ತೀಚಿಗೆ ಗುಬ್ಬಿ ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು ಕಾಡುಪ್ರಾಣಿಗಳ ಜತೆಗೆ, ಸಾಕು ಪ್ರಾಣಿಗಳ ಬಲಿ ಜತೆಗೆ, ಸಾಕು ಪ್ರಾಣಿಗಳನ್ನು ಮೇಯಿಸಲು ಹೋಗಿರುವ ಮನುಷ್ಯನ ಮೇಲೂ ದಾಳಿ ಮಾಡುತ್ತಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯಾಧಿಕಾರಿಗಳು ಒಂದು ಬೋನು ಇಟ್ಟಿದ್ದಾರೆ. ಈ ಭಾಗದಲ್ಲಿ ಸಹಜವಾಗಿ ಚಿರತೆ ದಾಳಿ ಹೆಚ್ಚಾಗಿದೆ. ದೊಡ್ಡಗುಣಿ ಭಾಗದ ಅರಣ್ಯಪ್ರದೇಶದಲ್ಲಿ ಸುತ್ತಲು ತಂತಿ ಬೇಲಿ ಇತ್ತು. ಹೆದ್ದಾರಿ ವಿಸ್ತರಣೆ ಮಾಡುವ ಸಮಯದಲ್ಲಿ ತಂತಿ ಬೇಲಿಯನ್ನು ಪೂರ್ಣವಾಗಿ ತೆರವುಗೊಳಿಸಿದ್ದು ಚಿರತೆ ದಾಳಿ ಹೆಚ್ಚಾಗಲು ಕಾರಣವಾಗಿದೆ.

 
									 
					



