ಸರ್ಕಾರದ ಸೌಲಭ್ಯಗಳನ್ನು ವಿಕಲಚೇತನರು ಸದ್ಭಳಕೆ ಮಾಡಿಕೊಳ್ಳಬೇಕು – ಜಿ.ಪಂ.ಅಧ್ಯಕ್ಷೆ

 ತುಮಕೂರು:

      ಸರ್ಕಾರದಿಂದ ದೊರೆಯುವ ಅನೇಕ ಸೌಲಭ್ಯಗಳನ್ನು ವಿಕಲ ಚೇತನರು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗುವಂತೆ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಲತಾ ರವಿಕುಮಾರ್ ಅವರು ವಿಕಲ ಚೇತನರಿಗೆ ಕರೆ ನೀಡಿದರು.

      ಜಿಲ್ಲಾ ಪಂಚಾಯತ್ ಆವರಣದಲ್ಲಿಂದು ಜರುಗಿದ ಜಿಲ್ಲಾ ಪಂಚಾಯತ್ ಶೇ.3ರ ಅನುದಾನದಲ್ಲಿ ತುಮಕೂರು ತಾಲ್ಲೂಕು ವಿಕಲಚೇತನರಿಗೆ ವಿಕಲಚೇತನ ಸ್ನೇಹಿ ದ್ವಿಚಕ್ರ ವಾಹನಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

      ವಿಕಲ ಚೇತನರ ಕಲ್ಯಾಣಕ್ಕಾಗಿ ಸರ್ಕಾರವು ಅನೇಕ ಸೌಲಭ್ಯಗಳನ್ನು ಅನುಷ್ಟಾನಗೊಳಿಸುತ್ತಿದ್ದು, ಈ ಸೌಲಭ್ಯಗಳನ್ನು ವಿಕಲ ಚೇತನರು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಿ ಸಮಾಜದಲ್ಲಿ ಮುಂದೆ ಬರಬೇಕು. ಇಂದು ತುಮಕೂರು ತಾಲ್ಲೂಕಿನ 25  ಮಂದಿ ವಿಕಲಚೇತನರಿಗೆ ದ್ವಿಚಕ್ರ ವಾಹನವನ್ನು ವಿತರಿಸಲಾಗಿದ್ದು, ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ಅವರು ಕರೆ ನೀಡಿದರು.

      ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು 2015-16 ಮತ್ತು 2016-17ನೇ ಸಾಲಿನ ಜಿಲ್ಲಾ ಪಂಚಾಯತಿ ಶೇ.3ರ ಅನುದಾನದಲ್ಲಿ ವಿಕಲಚೇತನರಿಗೆ ದ್ವಿಚಕ್ರ ವಾಹನವನ್ನು ವಿತರಿಸಲಾಗುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಾಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ಅರ್ಹ ಫಲಾನುಭವಿಗಳ ಆಯ್ಕೆ ಮಾಡಿ ದ್ವಿಚಕ್ರ ವಾಹನ ನೀಡಲಾಗುತ್ತದೆ. ಈಗಾಗಲೇ ಕೆಲ ತಾಲ್ಲೂಕುಗಳಲ್ಲಿ ದ್ವಿಚಕ್ರ ವಾಹನವನ್ನು ವಿತರಿಸಲಾಗಿದೆ. ಇನ್ನೂ ಕೆಲವು ತಾಲ್ಲೂಕುಗಳಲ್ಲಿ ವಿತರಣೆಗೆ ಕ್ರಮ ವಹಿಸಲಾಗಿದೆ ಎಂದರು.

      ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ನಟರಾಜು, ಜಿ.ಪಂ. ಸದಸ್ಯರಾದ ವೈ.ಹೆಚ್.ಹುಚ್ಚಯ್ಯ, ಶಿವಕುಮಾರ್, ರಾಜೇಗೌಡ, ಶಿವಮ್ಮ ನಾಗರಾಜ್, ನರಸಿಂಹಮೂರ್ತಿ, ಲಕ್ಷ್ಮಿನರಸೇಗೌಡ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು. 

(Visited 19 times, 1 visits today)

Related posts

Leave a Comment