ಸರ್ಕಾರಿ ಜಾಗದಲ್ಲಿರುವ ಗುಡಿಸಲನ್ನು ತೆರವುಗೊಳಿಸಲು 3 ದಿನಗಳ ಗಡುವು

 ತುಮಕೂರು:

      ದಿಬ್ಬೂರಿನಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಿರ್ಮಾಣ ಮಾಡಿರುವ ಜಿ+2 ಮನೆಗಳು ಹಂಚಿಕೆಯಾಗಿರುವ ಫಲಾನುಭವಿಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡಿದ್ದಲ್ಲಿ 3 ದಿನಗಳೊಳಗಾಗಿ ತೆರವುಗೊಳಿಸಬೇಕೆಂದು ಪಾಲಿಕೆ ಆಯುಕ್ತ ಮಂಜುನಾಥ ಸ್ವಾಮಿ ತಿಳಿಸಿದ್ದಾರೆ.

       ಪಾಲಿಕೆ ವ್ಯಾಪ್ತಿಯ ಕೊಳಚೆ ಪ್ರದೇಶಗಳಾದ ಮಂಡಿಪೇಟೆಯ ದೊಡ್ಡ ಚರಂಡಿ, ಶಾಂತಿ ಹೋಟೆಲ್ ಹಿಂಭಾಗ, ಮೀನು ಮಾರುಕಟ್ಟೆ ಪ್ರದೇಶ, ಬೆಳಗುಂಬ ರಸ್ತೆ, ಗುಬ್ಬಿ ವೀರಣ್ಣ ಕಲಾಕ್ಷೇತ್ರದ ಹಿಂಭಾಗ, ಮಾರಿಯಮ್ಮ ನಗರ ರಸ್ತೆ ಪಕ್ಕದ ಗುಡಿಸಲು ವಾಸಿಗಳು, ಮರಳೂರು ಜನತಾ ಕಾಲೋನಿ ಹೈಟೆನ್ಷನ್ ಕೆಳಗಡೆ ವಾಸಿಸುತ್ತಿರುವವರಿಗೆ ದಿಬ್ಬೂರಿನ ದೇವರಾಜು ಅರಸು ವಸತಿ ಬಡಾವಣೆಯಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಗಿದೆ. ಹಾಲಿ ಸರ್ಕಾರಿ ಜಾಗದಲ್ಲಿ ಅನಧಿಕೃತ ಹಾಗೂ ಅಕ್ರಮವಾಗಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಫಲಾನುಭವಿಗಳು ಗುಡಿಸಲುಗಳನ್ನು ತೆರವು ಮಾಡಿ ದಿಬ್ಬೂರಿಗೆ ಸ್ಥಳಾಂತರಗೊಳ್ಳಲು ತಿಳಿಸಲಾಗಿತ್ತು. ಕೆಲವರು ಈವರೆಗೂ ಗುಡಿಸಲುಗಳನ್ನು ಖಾಲಿ ಮಾಡಿರುವುದಿಲ್ಲ. ಇನ್ನೂ ಕೆಲವರು ಗುಡಿಸಲು ಖಾಲಿ ಮಾಡಿ ದಿಬ್ಬೂರಿಗೆ ಸ್ಥಳಾಂತರಗೊಂಡು ಅವರ ಮಕ್ಕಳು ಹಾಗೂ ಬಂಧು ಬಳಗದವರನ್ನು ಪುನಃ ಕರೆತಂದು ಗುಡಿಸಲು ವಾಸ ಮುಂದುವರೆಸಿರುವುದು ಪಾಲಿಕೆ ಗಮನಕ್ಕೆ ಬಂದಿದೆ. ಮನೆ ಹಂಚಿಕೆಯಾದ ಫಲಾನುಭವಿಗಳು ಸರ್ಕಾರಿ ಜಾಗದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಲ್ಲಿ 3 ದಿನಗಳೊಳಗಾಗಿ ದಿಬ್ಬೂರಿಗೆ ಸ್ಥಳಾಂತರಗೊಳ್ಳತಕ್ಕದ್ದು. ತಪ್ಪಿದಲ್ಲಿ ಅವರಿಗೆ ಹಂಚಿಕೆ ಮಾಡಲಾದ ಮನೆಯನ್ನು ರದ್ದುಪಡಿಸಲಾಗುವುದು. ಅಲ್ಲದೆ ನವೆಂಬರ್ 19ರಂದು ಕಾರ್ಯಾಚರಣೆ ನಡೆಸಿ, ಗುಡಿಸಲುಗಳನ್ನು ತೆರವುಗೊಳಿಸಲಾಗುವುದು. ಇದರಿಂದ ಉಂಟಾಗುವ ಯಾವುದೇ ವಿಧವಾದ ಕಷ್ಟ, ನಷ್ಟ, ತೊಂದರೆ, ಹಾನಿಗಳಿಗೆ ಅಲ್ಲಿ ವಾಸಿಸುತ್ತಿರುವವರೇ ನೇರವಾಗಿ ಹೊಣೆಯಾಗಿರುತ್ತಾರೆಂದು ಅವರು ತಿಳಿಸಿದ್ದಾರೆ.

 

(Visited 16 times, 1 visits today)

Related posts

Leave a Comment