ತುಮಕೂರು :
ಬೆಲೆ ಏರಿಕೆಗೆ ಕಡಿವಾಣ, ಉದ್ಯೋಗ ಸೃಷ್ಟಿ, 21 ಸಾವಿರ ರೂಪಾಯಿ ಕನಿಷ್ಟ ಕೂಲಿ, ಆರ್ಥಿಕ ಪ್ರಗತಿಗೆ ತಡೆಯೊಡ್ಡಿರುವ ನೀತಿಗಳನ್ನು ಬದಲಿಸಲು, ರೈತರ ಆತ್ಮಹತ್ಯೆ ತಡೆ, ಬೆಳೆ ವೈಜ್ಞಾನಿಕ ಬೆಂಬಲ ಬೆಲೆ, ಕೃಷಿ ಬಿಕ್ಕಟ್ಟು ನಿವಾರಣೆಗೆ ಆಗ್ರಹಿಸಿ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣ ವಿರೋಧಿಸಿ, ಸ್ಕೀಂ ನೌಕರರ ಕಾಯಂಮಾತಿಗೆ, ಗುತ್ತಿಗೆ ಪದ್ದತಿ ರದ್ದತಿಗೆ ಒತ್ತಾಯಿಸಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗೆ ಆಗ್ರಹಿಸಿ, ಮಾಸಿಕ 10 ಸಾವಿರ ರೂಪಾಯಿ ಕನಿಷ್ಠ ಪಿಂಚಣಿಗೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳಾದ, ಎಐಟಿಯುಸಿ, ಸಿಐಟಿಯು, ಎಐಯುಟಿಯುಸಿ, ಐಎನ್‍ಟಿಯುಸಿ ಸಂಘಟನೆಗಳ ನೂರಾರು ಕಾರ್ಯಕರ್ತರು ತುಮಕೂರು ನಗರದ ಬಿಎಸ್‍ಎನ್‍ಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ ಈ ಮುಷ್ಕರವನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ ಮೂಲಕ ವಿವಿಧ ಸಂಘಟನೆಗಳ ನಾಯಕರನ್ನು ಹೆದರಿಸಿರುವುದು ಮತ್ತು ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವ ಪ್ರಕ್ರಿಯೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.
ಬಿಎಸ್‍ಎನ್‍ಎಲ್ ಕಚೇರಿ ಎದುರು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಎಐಟಿಯುಸಿ ನಾಯಕ ಎನ್.ಶಿವಣ್ಣ ಮಾತನಾಡಿ ರಾಜ್ಯ ಸರ್ಕಾರ ಹೋರಾಟವನ್ನು ಹತ್ತಿಕ್ಕಲು ಪೊಲೀಸ್ ಇಲಾಖೆಯ ಮೂಲಕ ನಡೆಸಿರುವ ಪ್ರಯತ್ನಗಳಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ಪ್ರತಿಭಟನೆಗಳನ್ನು ಹತ್ತಿಕ್ಕುವ ಬದಲು ಸಮಸ್ಯೆಯನ್ನು ಬಗೆಹರಿಸಲಿ ಎಂದು ಆಗ್ರಹಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ಆರ್ಥಿಕ ಬೆಳವಣಿಗೆ ಕುಂಠಿತಗೊಳ್ಳಲು ಸರ್ಕಾರದ ನೀತಿಗಳೇ ಕಾರಣ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವ ಬದಲು ಪ್ರತಿದಿನ ಸಾವಿರಾರು ಉದ್ಯೋಗಗಳನ್ನು ಕಳೆಯುವಂತೆ ನೀತಿಯನ್ನು ಸರ್ಕಾರ ಜಾರಿಗೊಳಿಸಿದೆ. ಕಾರ್ಮಿಕ ಸಂಘಟನೆಗಳಿಂದ ಕಾರ್ಖಾನೆಗಳು ಮುಚ್ಚುತ್ತಿವೆ ಎಂಬ ಶೋಭಾ ಕರಂದ್ಲಾಜೆ ಅವರಿಗೆ ತಿರುಗೇಟು ನೀಡಿದ ಅವರು, ದೇಶದಲ್ಲಿ ಕಾರ್ಮಿಕ ಸಂಘಟನೆಗಳಿಂದ ಶೇಕಡ 6ರಷ್ಟು ಮಾತ್ರ ಕಾರ್ಖಾನೆಗಳು ಬಾಗಿಲು ಮುಚ್ಚಿವೆ. ಉಳಿದ 94ರಷ್ಟು ಕಾರ್ಖಾನೆಗಳು ಮಾಲಿಕರ ಆಂತರಿಕ ಜಗಳ, ಸರ್ಕಾರದ ನೀತಿಗಳು ಮತ್ತು ಸಬ್ಸೀಡಿ ಪಡೆಯುವ ಬಂಡವಾಳಿಗರ ಕೂಟದಿಂದಾಗಿದೆ ಎಂದು ಆಪಾದಿಸಿದರು. ಕಾರ್ಮಿಕರ ಚಳವಳಿಗೆ ಅವಹೇಳನ ಮಾಡಿರುವ ಶೋಭಾ ಕರಂದ್ಲಾಜೆ ಅವರನ್ನು ತರಾಟೆಗೆ ತೆಗೆದುಕೊಂಡರು.
ಎಐಯುಟಿಯುಸಿ ನಾಯಕಿ ಮಂಜುಳ ಮಾತನಾಡಿ ಕಾರ್ಮಿಕರ ಸಮಸ್ಯೆಗಳ ಇತ್ಯರ್ಥಕ್ಕೆ ಸರ್ಕಾರ ಮುಂದಾಗುವಂತೆ ಆಗ್ರಹಿಸಿದರು. ಚಳವಳಿಯನ್ನು ಬೆಂಬಲಿಸಿ ಜಿಲ್ಲಾ ಕೊಳಗೇರಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ. ನರಸಿಂಹಮೂರ್ತಿ ಮಾತನಾಡಿ, ಆರ್ಥಿಕ-ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸದ ಕೇಂದ್ರದ ಮೋದಿ ಸರ್ಕಾರ ಜನತೆಯನ್ನು ವಿಭಜಿಸುವ ಪೌರತ್ವ ಮಸೂದೆ ಜಾರಿಗೆ ತಂದಿರುವುದನ್ನು ಖಂಡಿಸಿದರು. ಹಿರಿಯ ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಕಾರ್ಮಿಕರು ಇಂದು ಅನುಭವಿಸುತ್ತಿರುವ ಸೌಲಭ್ಯಗಳು ಹಿರೀಕರ ತ್ಯಾಗಬಲಿದಾನಗಳ ಪ್ರತೀಕ, ಅದನ್ನು ಸ್ಮರಿಸುತ್ತಾ ಕಾರ್ಮಿಕರಲ್ಲಿ ರಾಜಕೀಯ ಪ್ರಜ್ಞೆ ಬಾರದಿದ್ದರೆ ಹೋರಾಟ ಸಾರ್ಥಕತೆ ಪಡೆಯಲಾರದು ಎಂದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಜಾತ್ಯತೀತ ಜನತಾ ದಳದ ಅಧ್ಯಕ್ಷ ಆರ್.ಸಿ. ಆಂಜಿನಪ್ಪ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ, ಸಿಪಿಐ ಜಿಲ್ಲಾ ಮುಖಂಡ ಕಂಬೇಗೌಡ, ಸಮಾಜಸೇವಾಕರ್ತ ತಾಜುದ್ದೀನ್ ಷರೀಪ್, ರೈತ ಸಂಘದ ಮುಖಂಡರು ಹಾಗೂ ಎಐಟಿಯುಸಿ ಗಿರೀಶ್, ಎಸ್‍ಎಫ್‍ಐ ಈ. ಶಿವಣ್ಣ, ಎಐಡಿಎಸ್‍ಒ ಅಶ್ವಿನಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ಸಿಐಟಿಯು ತಾಲೂಕು ಅಧ್ಯಕ್ಷ ಷಣ್ಮುಖಪ್ಪ, ಕಾಯದರ್ಶಿ ರಂಗಧಾಮಯ್ಯ, ಖಜಾಂಚಿ ಪುಟ್ಟೇಗೌಡ, ಅಂಗನವಾಡಿ ನೌಕರರ ಸಂಘಟನೆ ಗಂಗಾ, ಪ್ರೇಮಾ, ಆಟೋ ಚಾಲಕರ ಸಂಘದ ಇಂತು, ಕಟ್ಟಡ ಕಾರ್ಮಿಕರ ಸಂಘದ ಗೋವಿಂದರಾಜು, ಎಐಟಿಯುಸಿ ನಾಯಕ ಆಶ್ವತ್ಥನಾರಾಯಣ್, ಡಿವೈಎಫ್‍ಐ ದರ್ಶನ್, ಪುಟ್‍ಪಾತ್, ಅಂಗನವಾಡಿ, ಕಾರ್ಖಾನೆ ಕಾರ್ಮಿಕರು, ಜೀವವಿಮಾ ನೌಕರರ ಸಂಘಟನೆಯ ನಂಜುಂಡುಸ್ವಾಮಿ, ಕಲ್ಯಾಣಿ, ಸಿಪಿಎಂ ನಗರ ಕಾರ್ಯದರ್ಶಿ ಎಸ್.ರಾಘವೇಂದ್ರ, ಕಾರ್ಮಿಕ ಮುಖಂಡರಾದ ಕಾಂತರಾಜು, ಶಂಕರಪ್ಪ, ವೆಂಕಟೇಶ, ಗೋವಿಂದರಾಜು, ನರಸಿಂಹಮೂರ್ತಿ, ಬಸವರಾಜ್, ಜಾಫರ್, ರವಿಶಂಕರ್, ಶಾಂತರಾಜು ಮೊದಲಾದವರು ಇದ್ದರು.