ಸಾಲಬಾಧೆ : ನೇಣಿಗೆ ಶರಣಾದ ರೈತ

ಗುಬ್ಬಿ :

      ಗುಬ್ಬಿ ತಾಲ್ಲೂಕಿನ ಕಸಬ ಹೋಬಳಿಯ ಮಾದಾಪುರ ಗ್ರಾಮದಲ್ಲಿ ರೈತನೋರ್ವ ನೇಣಿಗೆ ಶರಣಾದ ಘಟನೆ ನಡೆದಿದೆ.
ಸಣ್ಣ ಕೈಗಾರಿಕಾ ಸಚಿವರ ತವರೂರಲ್ಲೇ ರೈತನು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಸಾರ್ವಜನಿಕರು ಇಂತಹ ಬರಗಾಲದಲ್ಲಿ ಯಾವ ರೈತನು ಬದುಕನ್ನು ಸಾಗಿಸುತ್ತಾನೆ. ಸಾಲ ಕೊಟ್ಟವರ ಮಾನಸಿಕ ಹಿಂಸೆಯನ್ನು ತಡೆಯಲಾರದೆ ವಿಷ ಕುಡಿದು ನೇಣಿಗೆ ಶರಣಾಗುವ ಘಟನೆಗಳು ಹೆಚ್ಚಾಗುತ್ತಿವೆ.

      ತಾಲ್ಲೂಕಿನ ಮಾದಾಪುರ ಗ್ರಾಮದ ಎಂ.ಪಿ.ಮಂಜುನಾಥ್ (40ವರ್ಷ) ಈತನಿಗೆ ನಾಲ್ಕು ಎಕರೆ ಜಮೀನಿದ್ದು ಆ ಜಮೀನನಲ್ಲಿ ಇಲ್ಲಿಯವರೆಗೂ ಒಟ್ಟು ಕುಟುಂಬವನ್ನು ಕಾಪಾಡಿಕೊಂಡು ಬರುತ್ತಿದ್ದು ಹಿಂದಿನ ವರ್ಷಗಳಲ್ಲಿ ಅಂತರ್ಜಲ ಕುಸಿದ ಕಾರಣ ಕೊಳವೆ ಬಾವಿಯು ಬತ್ತಿದ್ದು ಪಕ್ಕದಲ್ಲೇ ಇರುವ ಬಿದರೆ ಗ್ರಾಮದಲ್ಲಿರುವ ಕೆ.ಜಿ.ಬಿ.ಬ್ಯಾಂಕ್‍ನಲ್ಲಿ 4 ಲಕ್ಷ ಸಾಲ ಪಡೆದು ಹೊಸ ಕೊಳವೆಬಾವಿಯನ್ನು ಕೊರೆಸಿದ್ದು ಇಷ್ಟೆಲ್ಲ ಖರ್ಚು ಮಾಡಿ ಕೇವಲ 6 ದಿನ ಮಾತ್ರ ನೀರನ್ನು ಕಂಡಿದ್ದು ಮುಂದಿನ ದಿನಗಳಲ್ಲಿ ಯಾವುದೇ ಹನಿ ನೀರು ಈ ಕೊಳವೆ ಬಾವಿಯಿಂದ ದೊರಕದೆ ಹತಾಶನಾಗಿ ಕುಳಿತಾಗ ತನ್ನ ಮಡದಿಯ ಸಹಾಯದಿಂದ ಸುಮಾರು 3 ಲಕ್ಷ ಹಣದಿಂದ ಅದೇ ಕೊಳವೆಬಾವಿಯನ್ನು ಆಳಪಡಿಸಿದಾಗ ಕೇವಲ ಅರ್ಧ ಇಂಚು ನೀರು ದೊರಕಿದ್ದು ಇದರಿಂದ ಹತಾಶನಾಗದೆ ಸುನಾಮಿಗುಲಾಬಿಯನ್ನು ಬೆಳೆಯಲು ಉತ್ಸುಕನಾಗಿ ಅದು ಸಹ ನೀರಿನ ಕೊರತೆಯಿಂದಾಗಿ ಕೈಗೆ ಬಂದಂತಹ ಬೆಳೆಯು ಹಾಳಾಗಿದ್ದು ತಾನೇ ನೆಟ್ಟು ಬೆಳೆಸಿದ ಅಡಕೆ ಸಸಿಗಳು ಬಿಸಿಲಿನ ಬೇಗೆಯಿಂದ ಒಣಗುತ್ತಿದ್ದು ಬೇರೆ ಕಡೆ ಯಾವುದೇ ಹಣದ ಸಹಾಯ ದೊರಕುವುದಿಲ್ಲ ಎಂದು ತಾನೇ ನಿರ್ಧರಿಸಿ ನಿನ್ನೆ ತಡರಾತ್ರಿ ತನ್ನ ಜಮೀನಿನಲ್ಲಿರುವ ಹೊಂಗೆ ಮರಕ್ಕೆ ತನ್ನ ದ್ವಿಚಕ್ರವಾಹನದ ಸಹಾಯದಿಂದ ನೇಣನ್ನು ಬಿಗಿದು ತನ್ನ ಬಾಳಿಗೆ ಇತಿಶ್ರೀ ಹಾಡಿಕೊಂಡಿರುವುದು ಈ ರೈತರ ದುರಾದೃಷ್ಟವೇ ಸರಿ.

      ತಾಲ್ಲೂಕಿನಲ್ಲಿ ಈಗಾಗಲೇ 57 ರೈತರು ಸಾವನ್ನಪ್ಪಿರುವ ಅರ್ಜಿಗಳು ಸಹಾಯಕ ಕೃಷಿ ಅಧಿಕಾರಿಗಳಿಗೆ ತಲುಪಿದ್ದು 37 ಅರ್ಜಿಗಳಿಗೆ ಈಗಾಗಲೇ ಪರಿಹಾರ ದೊರಕಿವೆ. 19 ಅರ್ಜಿಗಳನ್ನು ವಿವಿಧ ಕಾರಣಗಳಿಂದ ತಿರಸ್ಕರಿಸಲಾಗಿದ್ದು ರೈತ ಕುಟುಂಬಕ್ಕೆ ಕೊಡುವ ಸಹಾಯಧನದ ಅಧ್ಯಕ್ಷರಾದ ಉಪವಿಭಾಗಾಧಿಕಾರಿಗಳು ಈ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ಹಾಗೂ ಪೋಲೀಸ್ ಇಲಾಖೆ ಎಫ್.ಎಸ್.ಎಲ್.ವರದಿಯ ಪ್ರಕಾರ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುತ್ತಿದ್ದು ಉಳಿದ ಅರ್ಜಿಗಳನ್ನು ಯಾವ ರೀತಿ ವಿಲೇವಾರಿ ಮಾಡುತ್ತಾರೆ ಎಂದು ಪ್ರಾಣಗಳನ್ನು ಕಳೆದುಕೊಂಡ ರೈತರ ಕುಟುಂಬದ ಸದಸ್ಯರುಗಳು ದಿನನಿತ್ಯವೂ ಕೃಷಿ ಇಲಾಖೆಯ ಕಛೇರಿಗೆ ಅಲೆದಾಡುತ್ತಿರುವುದು ಎಷ್ಟು ಸಮಂಜಸ.

 

(Visited 13 times, 1 visits today)

Related posts